ನವದೆಹಲಿ: ರಾಹುಲ್ ಗಾಂಧಿ (Rahul Gandhi) ಹಾಗೂ ಕಾಂಗ್ರೆಸ್ (Congress) ವಿರುದ್ಧ ಮೀಸಲಾತಿ (Reservation) ವಿಷಯ ಇಟ್ಟುಕೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮೆರಿಕದಲ್ಲಿ ಮೀಸಲಾತಿ ವಿಚಾರವನ್ನು ಮುಂದಿಟ್ಟುಕೊಂಡು ಮಾತನಾಡಿರುವ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿ ಕಾಂಗ್ರೆಸ್ ವಿರುದ್ಧ ಅಮಿತ್ ಶಾ ಕಿಡಿಕಾರಿದ್ದಾರೆ. ದೇಶವನ್ನು ವಿಭಜಿಸುವ ಷಡ್ಯಂತ್ರ ರೂಪಿಸುವ ಶಕ್ತಿಗಳೊಂದಿಗೆ ನಿಂತು ದೇಶ ವಿರೋಧಿ ಹೇಳಿಕೆ ನೀಡುವುದು ರಾಹುಲ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅಭ್ಯಾಸವಾಗಿ ಹೋಗಿದೆ.
ಕಾಶ್ಮೀರದಲ್ಲಿ ದೇಶ ವಿರೋಧಿ ನ್ಯಾಷನಲ್ ಕಾನ್ಫರೆನ್ಸ್ ಬೆಂಬಲಿಸಿರುವ ಕಾಂಗ್ರೆಸ್ ಈಗ ಮೀಸಲಾತಿ ವಿರೋಧಿ ಅಜೆಂಡಾವನ್ನು ಬೆಂಬಲಿಸುತ್ತಿದೆ. ವಿದೇಶಿ ವೇದಿಕೆಗಳಲ್ಲಿ ಭಾರತ ವಿರೋಧಿ ಹೇಳಿಕೆಗಳನ್ನು ನೀಡುವ ಮೂಲಕ ರಾಹುಲ್ ಗಾಂಧಿ ಯಾವಾಗಲೂ ರಾಷ್ಟ್ರದ ಭದ್ರತೆಗೆ ಬೆದರಿಕೆ ಮತ್ತು ಭಾವನೆಗಳನ್ನು ಘಾಸಿಗೊಳಿಸುತ್ತಿದ್ದಾರೆ ಎಂದು ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಹೇಳಿಕೆಯು ಪ್ರಾದೇಶಿಕತೆ, ಧರ್ಮ ಮತ್ತು ಭಾಷಿಕ ಭಿನ್ನಾಭಿಪ್ರಾಯದ ರೀತಿಯಲ್ಲಿ ಬಿರುಕುಗಳನ್ನು ಉಂಟುಮಾಡುವ ಕಾಂಗ್ರೆಸ್ನ ರಾಜಕೀಯವನ್ನು ಬಯಲು ಮಾಡುತ್ತಿದೆ. ದೇಶದಲ್ಲಿ ಮೀಸಲಾತಿ ರದ್ದುಪಡಿಸುವ ಬಗ್ಗೆ ಹೇಳಿಕೆ ನೀಡುವ ಮೂಲಕ ರಾಹುಲ್ ಗಾಂಧಿ ಮತ್ತೊಮ್ಮೆ ಕಾಂಗ್ರೆಸ್ನ ಮೀಸಲಾತಿ ವಿರೋಧಿ ಮುಖವನ್ನು ಮುನ್ನೆಲೆಗೆ ತಂದಿದ್ದಾರೆ. ಅವರ ಮನಸ್ಸಿನಲ್ಲಿದ್ದ ಆಲೋಚನೆಗಳು ಅಂತಿಮವಾಗಿ ಪದಗಳಾಗಿ ಹೊರಹೊಮ್ಮಿದೆ ಅಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ.