ಹೊಸದಿಲ್ಲಿ, ಮೇ 20 : ವಾಯು ಭಾರ ಕುಸಿತದಿಂದ ಬಂಗಾಲ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಅಂಫಾನ್ ಮಹಾ ಚಂಡಮಾರುತ ಕೊರೊನಾದ ಸಂಕಷ್ಟದ ನಡುವ ದೇಶದಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಈಗಾಗಲೇ ರಣಭೀಕರ ಸ್ವರೂಪ ಪಡೆದುಕೊಂಡಿರುವ ಅಂಫಾನ್ ಚಂಡಮಾರುತ ಇಂದು ಪಶ್ಚಿಮ ಬಂಗಾಳದ ಕರಾವಳಿಗೆ ಅಪ್ಪಳಿಸಲಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಪಶ್ಚಿಮ ಬಂಗಾಳದ ದಿಘಾ ಪ್ರಾಂತ್ಯದಲ್ಲಿ ಮಂಗಳವಾರ ಸಂಜೆಯ ಹೊತ್ತಿಗೆ ಮಹಾಮಳೆ ಸುರಿಯಲಾರಂಭಿಸಿದೆ. ಇಷ್ಟರಲ್ಲೇ ಒಡಿಶಾಕ್ಕೂ ಬಂದು ಅಪ್ಪಳಿಸಲಿರುವ ಅಂಫಾನ್ ಚಂಡಮಾರುತ ದಾರಿ ಉದ್ದಕ್ಕೂ ಭಾರೀ ಹಾನಿ ಉಂಟು ಮಾಡುತ್ತಾ ಮುಂದೆ ಸಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಜಗಸ್ತಿಪುರ, ಕೇಂದ್ರಪಾರಾ, ಭದ್ರಕ್, ಜಾಜ್ ಪುರ, ಬಾಲಾಸೋರ್ ಗಳಲ್ಲಿ ಅಂಫಾನ್ ಚಂಡಮಾರುತ ಸಾಕಷ್ಟು ಹಾನಿ ಉಂಟು ಮಾಡಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಹಾಗಾಗಿ ಆ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದ್ದು, 12 ಲಕ್ಷ ಜನರನ್ನು ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಯಿಂದ ಸುರಕ್ಷಿತ ಸ್ಥಳಕ್ಕೆ ಮಂಗಳವಾರ ಸಂಜೆ ಸ್ಥಳಾಂತರಿಸಲಾಗಿದೆ ಎಂದು ಒಡಿಶಾ ವಿಶೇಷ ಪರಿಹಾರ ಅಯೋಗ (ಎಸ್.ಆರ್.ಸಿ) ದ ಆಯುಕ್ತ ಪಿ.ಕೆ. ಜೆನಾ ತಿಳಿಸಿದ್ದಾರೆ. ಎನ್.ಡಿ. ಆರ್.ಎಫ್ ನ 14 ಮತ್ತು ಒಡಿಶಾ ವಿಪತ್ತು ನಿರ್ವಹಣಾ ಪಡೆ (ಒಡಿಆರ್ ಎಎಫ್) ಯ 20 ತಂಡಗಳು ಅಂಫಾನ್ ಚಂಡಮಾರುತ ತೆರವು ಕಾರ್ಯಾಚರಣೆಯಲ್ಲಿ ನಿರತವಾಗಿದೆ ಎಂದು ಒಡಿಶಾ ಸರಕಾರ ತಿಳಿಸಿದೆ. ಅಷ್ಟೇ ಅಲ್ಲ ಮೇ 21 ರ ವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಈಗಾಗಲೇ ಕೇಂದ್ರ ಸರಕಾರ, ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ ( ಎನ್.ಡಿ.ಆರ್.ಎಫ್) ಯ 41 ತುಕಡಿ, ಸೇನೆ, ನೌಕಪಡೆ, ವಾಯುಪಡೆ, ಕರಾವಳಿ ಕಾವಲು ಪಡೆಯ ತುಕಡಿಗಳನ್ನು ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಿಗೆ ರವಾನಿಸಿದೆ. ಕೊರೋನಾ ಸೋಂಕಿನ ಭೀತಿಯಿಂದಾಗಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿಯಿಂದ ಸ್ಥಳಾಂತರಿಸಿ ನಿರಾಶ್ರಿತರ ಕೇಂದ್ರದಲ್ಲಿ ಇರಿಸಲಾಗಿರುವ ಲಕ್ಷಾಂತರ ಮಂದಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿ ಕೊಳ್ಳುವ ಅನಿವಾರ್ಯತೆಯೂ ಉಂಟಾಗಿದೆ.
ಇಂದು ಮಧ್ಯಾಹ್ನದ ವೇಳೆಗೆ ಅಂಫಾನ್ ಚಂಡಮಾರುತದ ವೇಗ ಗಂಟೆಗೆ 155 – 166 ಕಿ.ಮೀ.ಇರಲಿದ್ದು, ಕ್ರಮೇಣ 185 ಕಿ.ಮೀ. ಗಳಿಗೆ ಹೆಚ್ಚಾಗಲಿದೆ. 10ರಿಂದ 15 ಸೆ. ಮೀ. ಗಳಷ್ಟು ಮಳೆ ಸುರಿಯ ಬಹುದು ಮತ್ತು ಹಲವೆಡೆ ಭೂ ಕುಸಿತ ಕೂಡಾ ಉಂಟಾಗ ಬಹುದು ಎಂದು ಅಂದಾಜಿಸಲಾಗಿದೆ.
ಹಿಂದೆ 2019 ರಲ್ಲಿ ಪಶ್ಚಿಮ ಬಂಗಾಳವನ್ನು ಕಂಗೆಡಿಸಿದ ಬುಲ್ ಬುಲ್ ಚಂಡಮಾರುತ ಕ್ಕಿಂತ ಅಂಫಾನ್ ಚಂಡಮಾರುತ ಭೀಕರವಾಗಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಮಂಗಳವಾರ ಸಂಜೆಯ ಹೊತ್ತಿಗೆ ಕರಾವಳಿ ಪ್ರದೇಶದ ಜನರನ್ನು ಸ್ಥಳಾಂತರ ಕಾರ್ಯಚರಣೆ ನಡೆಸಲಾಗಿದ್ದು, ಎಲ್ಲರಿಗೂ ಮಾಸ್ಕ್ ವಿತರಿಸಿ ನಿರಾಶ್ರಿತರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಆಹಾರ, ಔಷಧಿ ನೀರು ಇತ್ಯಾದಿ ವಸ್ತುಗಳ ದಾಸ್ತಾನು ಕೈಗೊಳ್ಳಲಾಗುತ್ತಿದ್ದು, ಜನರ ಸುರಕ್ಷತೆಗೆ ಗಮನ ಕೊಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಒಡಿಶಾದ ಮುಖ್ಯ ಮಂತ್ರಿ ನವೀನ್ ಪಟ್ನಾಯಕ್ ಜೊತೆಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ಪರಿಸ್ಥಿತಿಯ ಮಾಹಿತಿ ಪಡೆದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಂಡಮಾರುತ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರದಿಂದ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ.ಈಗಾಗಲೇ ಸುಮಾರು 12 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದ್ದು, ಅವರಿಗೆ ಶಾಲಾ ಕಾಲೇಜುಗಳಲ್ಲಿ ಆಶ್ರಯ ನೀಡಲಾಗಿದೆ.








