ಪ್ರೀತಿಯ ಹಳಿಯಲ್ಲಿ ಬದುಕಿನ ಬಂಡಿಯನ್ನು ಏರಿ ಹೊರಟ ವೃದ್ಧ ದಂಪತಿಗಳ ಆತ್ಮಹತ್ಯೆ

ಗುಜರಾತ್, ಜೂನ್ 13: ಕಳೆದ ಜನವರಿಯಲ್ಲಿ ತಮ್ಮ ಮಕ್ಕಳ ಮದುವೆಯ ದಿನ ಮದುಮಗನ ತಂದೆ ಹಾಗೂ ಮದು ಮಗಳ ತಾಯಿ ಓಡಿ ಹೋಗಿ ಸುದ್ದಿಯಾಗಿದ್ದರು. ಇದೀಗ ಅವರಿಬ್ಬರು ಮರವೊಂದಕ್ಕೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ.
ಗುಜರಾತ್ ನ ಸಬರ್ಕಂತ ಜಿಲ್ಲೆಯ ದಿದಿಯಾ ಗ್ರಾಮದಲ್ಲಿ ಒಂದೇ ಮರಕ್ಕೆ ಇಬ್ಬರೂ ನೇಣು ಹಾಕಿಕೊಂಡಿದ್ದು, ಇವರ ಪ್ರೀತಿ ದುರಂತ ಅಂತ್ಯ ಕಂಡಿದೆ.
ಜಯಂತಿ ಮತ್ತು ಜಾಗೃತಿ ಎಂಬುವವರು ಸುಮಾರು 25 ವರ್ಷಗಳ ಹಿಂದೆ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಕಾರಣಾಂತರಗಳಿಂದ ಅವರ ಮದುವೆ ಸಾಧ್ಯವಾಗಿರಲಿಲ್ಲ. ಬೇರೆ ಬೇರೆ ಕಡೆ ಮದುವೆಯಾಗಿ ಅವರದೇ ಸಂಸಾರದ ಜಂಜಾಟದಲ್ಲಿ ಮುಳುಗಿದ್ದ ಇಬ್ಬರೂ ಮಕ್ಕಳ ಮದುವೆಗಾಗಿ ಸೂಕ್ತ ಜೋಡಿ ಹುಡುಕುವ ಸಮಯದಲ್ಲಿ ಪುನಃ ಭೇಟಿಯಾಗಿದ್ದರು. ಇತ್ತ ಅವರಿಬ್ಬರ ಪುತ್ರ ಮತ್ತು ಪುತ್ರಿಯ ಮದುವೆ ನಿಶ್ಚಯವಾಗಿ ಮದುವೆಯ ಮುಹೂರ್ತವೂ ನಿಗದಿಯಾದ ಸಮಯದಲ್ಲಿ ಇಬ್ಬರು ಓಡಿ ಹೋಗಿದ್ದರು.

ತಮ್ಮ ಮಕ್ಕಳ ಮದುವೆ ಮಾಡಬೇಕಿದ್ದ ಇವರು ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಓಡಿ ಹೋಗಿದ್ದು, ಬಳಿಕ ಮನಸ್ಸು ಬದಲಾಯಿಸಿ ಕೆಲವು ಸಮಯಗಳ ಬಳಿಕ ವಾಪಸ್ಸಾಗಿದ್ದರು. ತಮ್ಮ ಮುಂದಿನ ಬದುಕಿನ ಬಗ್ಗೆ ದೃಢ ನಿರ್ಧಾರಕ್ಕೆ ಬರಲು ಸಾಧ್ಯವಾಗದೆ ಮತ್ತು ಸಮಾಜ ಇವರ ಸಂಬಂಧವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿದು ಇವರಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಒಂದೇ ಮರದ ಕೊಂಬೆಗೆ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.








