ಚಿಕ್ಕಮಗಳೂರು: ಇತ್ತೀಚೆಗೆ ಕಾಡು ಪ್ರಾಣಿಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಾಡು ಬಿಟ್ಟು ನಾಡಿಗೆ ಬಂದು ಜನರಿಗೆ ತೊಂದರೆ ಕೊಡುತ್ತಿರುವ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಕಾಡಾನೆ (Elephant)ಯೊಂದು ಮಹಿಳೆಯನ್ನು ತುಳಿದು ಸಾವಿಗೆ ಕಾರಣವಾಗಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಆಲ್ದೂರು ಸಮೀಪದ ಹೆಡೆದಾಳು ಗ್ರಾಮದಲ್ಲಿ ನಡೆದಿದೆ. ವೀಣಾ (45) ಆನೆಯ ತುಳಿತಕ್ಕೆ ಒಳಗಾದ ಮಹಿಳೆ. ಈ ಮಹಿಳೆಯು ಕಾಫಿ ತೋಟಕ್ಕೆ ಕೆಲಸಕ್ಕೆಂದು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಆನೆ ದಾಳಿ ನಡೆಸಿದೆ. ಆನೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಆನೆ ದಾಳಿ ನಡೆಸಿ ಮಹಿಳೆಯ ತಲೆಯನ್ನು ತುಳಿದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಕೆಲವು ದಿನಗಳಿಂದ ಸುಮಾರು 7 ಕಾಡಾನೆಗಳು ಕಾಫಿ ತೋಟದ ಸುತ್ತಮುತ್ತ ಓಡಾಡುತ್ತಿವೆ. ಇದರಿಂದಾಗಿ ಜನರು ಪರದಾಟ ನಡೆಸುವಂತಾಗಿದೆ. ಹೀಗಾಗಿ ಕಾಡಾನೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಸ್ಥಳೀಯರು ಮನವಿ ಮಾಡಿದ್ದಾರೆ.