ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ, ಭಟ್ಕಳದ ಗರ್ಭಿಣಿ ಮಹಿಳೆ ಸಂಪೂರ್ಣ ಗುಣಮುಖವಾಗಿ ಉಡುಪಿ ಜಿಲ್ಲೆಯ ಟಿ ಎಮ್ ಎ ಪೈ ಕೋವಿಡ್ ಆಸ್ಪತ್ರೆಯಿಂದ ಶುಕ್ರವಾರ ಬಿಡುಗಡೆ ಹೊಂದಿದರು. ಈ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಗೆ ಉಡುಪಿ ಜಿಲ್ಲಾಡಳಿತ ಮಲ್ಲಿಗೆ ಹೂ ಹಣ್ಣು ಹಂಪಲು ಹಾಗೂ ಸಿಹಿ ತಿಂಡಿ ನೀಡಿ ಭಾವನಾತ್ಮಕ ಬೀಳ್ಕೊಡುಗೆ ನೀಡಿತು.
ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಉಡುಪಿ ಜಿಲ್ಲೆ ಇಂದು ಹೆಮ್ಮೆ ಪಡುವ ದಿನ. ಆರು ತಿಂಗಳ ಗರ್ಭಿಣಿಗೆ ಕೊರೋನಾ ಸೋಂಕು ತಗುಲಿದ್ದರಿಂದ ಮಹಿಳೆಯ ಆರೋಗ್ಯ ಸ್ಥಿತಿ ಅತ್ಯಂತ ಸೂಕ್ಷ್ಮವಾಗಿತ್ತು. ಇಂತಹ ಸನ್ನಿವೇಶದಲ್ಲಿ ಮಹಿಳೆ ಜೊತೆ ಮಗುವನ್ನೂ ಉಳಿಸಿದ ಖುಷಿಯಿದೆ. ಸಿಎಂ ಮತ್ತು ಚೀಫ್ ಸೆಕ್ರೇಟರಿ ಸೂಚನೆಯಂತೆ ಉನ್ನತ ಮಟ್ಟದ ಚಿಕಿತ್ಸೆಗೆ ಉತ್ತರ ಕನ್ನಡ ಜಿಲ್ಲೆಯಿಂದ ಉಡುಪಿಗೆ ಗರ್ಭಿಣಿಯನ್ನು ವರ್ಗಾಯಿಸಲಾಗಿತ್ತು. ಉಡುಪಿಯ ಸುಸಜ್ಜಿತ ಟಿಎಂಎ ಪೈ ಆಸ್ಪತ್ರೆಯಲ್ಲಿ ಇವರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು ಮತ್ತು ಅವರು ಇಂದು ಗುಣಮುಖರಾಗಿದ್ದು, ಇದಕ್ಕೆ ಕಾರಣಿಕರ್ತರಾದ ವೈದ್ಯರ ತಂಡಕ್ಕೆ ಧನ್ಯವಾದಗಳು ಎಂದು ಹೇಳಿದರು.
ಕೋವಿಡ್-19ನಿಂದ ಗುಣಮುಖರಾಗಿ ಮನೆಗೆ ಹೊರಟು ನಿಂತಿರುವ ಗರ್ಭಿಣಿ ಮಹಿಳೆ ಮಾತನಾಡಿ ಟಿಎಂಎ ಪೈ ಆಸ್ಪತ್ರೆ ವೈದ್ಯರು ನನ್ನಲ್ಲಿದ್ದ ಆತಂಕ ದೂರಮಾಡಿ, ಮನೆಯಲ್ಲೇ ಚಿಕಿತ್ಸೆ ಪಡೆದೆ ಎಂಬ ಭಾವನೆ ಮೂಡುವಂತೆ ಮಾಡಿದರು. ಕೇಳಿದ್ದನ್ನೆಲ್ಲಾ ಕೊಟ್ಟು ಪ್ರೀತಿ ತೋರಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದ ಅವರು ದೇವರಿಚ್ಛೆ ಇದ್ದರೆ ಹೆರಿಗೆಗೆ ಉಡುಪಿಗೆ ಬರುತ್ತೇನೆ ಎಂದು ಹೇಳಿದರು.
ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಎಲ್ಲಾ ಪ್ರಕರಣಗಳು ಗುಣಮುಖರಾಗಿ ಮನೆಗೆ ತೆರಳಿದ್ದು ಮತ್ತು ಮಾರ್ಚ್ 29ರ ನಂತರ ಯಾವುದೇ ಕೊರೊನಾ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಕೊರೊನಾ ಮುಕ್ತ ಜಿಲ್ಲೆಯತ್ತ ಸಾಗಿದೆ.ಇನ್ನೂ ಮೂರು ದಿನಗಳಲ್ಲಿ ಯಾವುದೇ ಕೊರೊನಾ ಪ್ರಕರಣ ಕಂಡು ಬಾರದೆ ಇದ್ದಲ್ಲಿ, ಉಡುಪಿ ಅಧಿಕೃತವಾಗಿ ಕೊರೊನಾ ಮುಕ್ತ ಜಿಲ್ಲೆಯಾಗಲಿದೆ.








