ಮಂಗಳೂರು: ಜಿಲ್ಲೆಯ ಬೆಳ್ತಂಗಡಿಯ (Belthangadi) ತೆಕ್ಕಾರು ಬಟ್ರಬೈಲು ಎಂಬ ಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯ ಅಧೀನದಲ್ಲಿದ್ದ 700 ವರ್ಷಗಳ ಹಿಂದಿನ ದೇವಸ್ಥಾನದ (Temple) ಕುರುಹು ಪತ್ತೆಯಾಗಿದೆ.
ಈ ಜಮೀನನ್ನು ಶಾಸಕರ ಮುತುವರ್ಜಿಯಿಂದ ಮತ್ತೆ ಪಡೆದುಕೊಂಡು, ಉತ್ಖನನ ಮಾಡಿದಾಗ 12ನೇ ಶತಮಾನದ್ದು ಎಂದು ಶಂಕಿಸಲಾಗಿರುವ ಗೋಪಾಲಕೃಷ್ಣ ದೇವರ ಕಲ್ಲಿನ ವಿಗ್ರಹ ಪತ್ತೆಯಾಗಿದೆ. ಈ ಹಿನ್ನೆಲೆ ಊರವರು ಇಲ್ಲಿ ಭವ್ಯ ದೇವಸ್ಥಾನ ನಿರ್ಮಿಸಲು ಮುಂದಾಗಿದ್ದಾರೆ.
ಜಮೀನಿನಲ್ಲಿ ಭೂ ಉತ್ಖನನ ನಡೆಸಿದಾಗ ಕೆಲವು ಕಡೆಗಳಲ್ಲಿ ದೇವರ ವಿಗ್ರಹಗಳು ಕಂಡು ಬಂದಿತ್ತು. ಇಲ್ಲಿ ಹಿಂದೆ ದೇವಾಲಯ ಇತ್ತು ಎಂಬ ನಂಬಿಕೆಯಿಂದ ಹುಡುಕಾಟ ನಡೆಸಿದಾಗ ಗೋಪಾಲಕೃಷ್ಣನ ವಿಗ್ರಹ ಸಿಕ್ಕಿದೆ. ಲಕ್ಷ್ಮಣ ಎಂಬವರ ಕನಸಲ್ಲಿ ಶ್ರೀಕೃಷ್ಣನೇ ಬಂದು ದೇಗುಲ ಇರುವ ಕುರಿತು ಸುಳಿವು ನೀಡಿದ್ದ ಎನ್ನಲಾಗಿತ್ತು. ಈ ಜಾಗವನ್ನು ಹಲವಾರು ವರ್ಷಗಳಿಂದ ಮುಸ್ಲಿಂರು ತಮ್ಮ ಅಧೀನದಲ್ಲಿ ಇಟ್ಟುಕೊಂಡಿದ್ದರು. ಹೀಗಾಗಿ ಈ ಭಾಗದ ಜನರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಬಳಿ ಈ ವಿಚಾರವನ್ನು ತಿಳಿಸಿದ್ದರು. ಜಾಗದ ದಾಖಲೆ ಪರಿಶೀಲಿಸುವ ಸಂದರ್ಭದಲ್ಲಿ ಆ ಜಾಗ ಸರ್ಕಾರಿ ಭೂಮಿ ಎಂಬುವುದು ಗೊತ್ತಾಗಿತ್ತು.
ಹೀಗಾಗಿ ಅನ್ಯಮತೀಯ ವ್ಯಕ್ತಿಯ ವಶದಲ್ಲಿದ್ದ ಸುಮಾರು 25 ಸೆಂಟ್ಸ್ ಜಾಗವನ್ನು ಧಾರ್ಮಿಕ ದತ್ತಿ ಇಲಾಖೆಗೆ ದಾಖಲೆ ಮಾಡಿಕೊಂಡಿದ್ದರು. ಭೂಮಿ ಧಾರ್ಮಿಕ ದತ್ತಿ ಇಲಾಖೆ ಹೆಸರಿನಲ್ಲಿ ದಾಖಲೆಯಾಗುತ್ತಿದ್ದಂತೆ ಸ್ಥಳೀಯರು ಈ ಭೂಮಿಯಲ್ಲಿ ದೇವಸ್ಥಾನದ ಪಳೆಯುಳಿಕೆಗಳ ಬಗ್ಗೆ ಶೋಧ ಕಾರ್ಯ ಮುಂದುವರೆಸಿದ್ದರು. ಬಾವಿ ಅಗೆಯುವ ಸಂದರ್ಭದಲ್ಲಿ ಅದರಲ್ಲಿ ಸುಮಾರು 12 ನೇ ಶತಮಾನಕ್ಕೆ ಸೇರಿದೆ ಎನ್ನಲಾದ ಗೋಪಾಲಕೃಷ್ಣ ಸ್ವಾಮಿ ಕಲ್ಲಿನ ವಿಗ್ರಹ ಪತ್ತೆಯಾಗಿದೆ. ಹೀಗಾಗಿ ಸ್ಥಳದಲ್ಲಿ ಶೀಘ್ರವೇ ಗೋಪಾಲಕೃಷ್ಣ ಭವ್ಯ ದೇವಸ್ಥಾನ ನಿರ್ಮಾಣ ಮಾಡುವ ಸಂಕಲ್ಪವನ್ನು ಗ್ರಾಮಸ್ಥರು ಮಾಡಿದ್ದಾರೆ.