ಅಂತರ್ ಜಿಲ್ಲಾ ಮತ್ತು ಅಂತರ್ ರಾಜ್ಯ ಸಂಚಾರಕ್ಕೆ ಒಂದು ಬಾರಿಯ ಅನುಮತಿ ಕಲ್ಪಿಸಲು ಸರಕಾರ ನಿರ್ಧರಿಸಿದ್ದು, ಇದರಿಂದಾಗಿ ಲಾಕ್ ಡೌನ್ ನಿಂದಾಗಿ ಹೊರ ಊರುಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಜನರು ನೆಮ್ಮದಿಯ ಉಸಿರು ಬಿಡುವಂತಾಗಿದೆ.
ವಿವಿಧ ಕಾರಣಗಳಿಂದಾಗಿ ಬೇರೆ ಊರುಗಳಲ್ಲಿ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದು, ಗುರುವಾರ ನಡೆದ ಸಂಪುಟ ಸಭೆಯ ನಂತರ ಈ ಮಾಹಿತಿಯನ್ನು ನೀಡಿದ್ದಾರೆ.
ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರದನ್ವಯ ಈ ನಿರ್ಧಾರ ಕೈಗೊಳ್ಳಲು ಸರ್ಕಾರ ನಿರ್ಧರಿಸಿದ್ದು, ಅಂತರ್ ರಾಜ್ಯ ಅಥವಾ ಅಂತರ್ ಜಿಲ್ಲೆಗಳಿಗೆ ತೆರಳಲು ಬಯಸುವವರಿಗೆ ಸರ್ಕಾರದ ವತಿಯಿಂದ ಯಾವುದೇ ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಬೇರೆ ಊರುಗಳಿಗೆ ತೆರಳಲು ಬಯಸುವವರು ಸ್ವಂತ ವ್ಯವಸ್ಥೆ ಮಾಡಿಕೊಳ್ಳಬೇಕು ಅಥವಾ ಹೆಚ್ಚು ಜನರಿದ್ದ ಸಂದರ್ಭದಲ್ಲಿ ಮನವಿ ಮಾಡಿಕೊಂಡರೆ ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ ಮಾಡಲಾಗುತ್ತದೆ, ಆದರೆ ಅದರ ವೆಚ್ಚವನ್ನು ಅವರೇ ಭರಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಅಲ್ಲದೇ ರಾಜ್ಯಕ್ಕೆ ಆಗಮಿಸುವ ಅನ್ಯ ರಾಜ್ಯದವರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದರು.
ಕೆಂಪು ವಲಯಗಳೆಂದು ಗುರುತಿಸಿ ಕೊಂಡಿರುವ 15 ಜಿಲ್ಲೆಗಳನ್ನು ಹೊರತು ಪಡಿಸಿ ಇತರೆಡೆ ಕೈಗಾರಿಕಾ ಚಟುವಟಿಕೆ ಪ್ರಾರಂಭಿಸಲು ಸರಕಾರ ಸಮ್ಮತಿಸಿದ್ದು, ಸೋಮವಾರದಿಂದ ಕೈಗಾರಿಕಾ ಚಟುವಟಿಕೆಗಳು ಆರಂಭಗೊಳ್ಳಲಿದೆ.
ರಾಜ್ಯದ ಅರ್ಥಿಕ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಕ್ರಮಗಳನ್ನು ಕೈಗೊಳ್ಳುವ ಅನಿವಾರ್ಯತೆ ಉಂಟಾಗಿದ್ದು, ಪರಿಸ್ಥಿತಿ ಸುಧಾರಿಸಿದ ನಂತರ ಇತರೆಡೆಗಳಲ್ಲೂ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯ ಮಂತ್ರಿ ತಿಳಿಸಿದರು.