ಸದಾ ಶೋಭಿತ ಸಸ್ಯಶ್ಯಾಮಲೆ, ಭೂರಮೆ ಸ್ವರ್ಗ ಅಂಡಮಾನ್-ನಿಕೋಬಾರ್ ದ್ವೀಪಗಳ ಸಂರಕ್ಷಿತಾರಣ್ಯಗಳು

1 min read

ಕೃಪೆ – ಹಿಂಡವಿ

ವನ್ಯ ಅನ್ವೇಷಿ:

ಸದಾ ಶೋಭಿತ ಸಸ್ಯಶ್ಯಾಮಲೆ, ಭೂರಮೆ ಸ್ವರ್ಗ ಅಂಡಮಾನ್-ನಿಕೋಬಾರ್ ದ್ವೀಪಗಳ ಸಂರಕ್ಷಿತಾರಣ್ಯಗಳು


ನಮ್ಮ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದಲ್ಲಿರುವ ಸ್ಪೈಕ್ ಐಲ್ಯಾಂಡ್ ವನ್ಯಜೀವಿ ಅಭಯಾರಣ್ಯದ ಒಟ್ಟು ವಿಸ್ತೀರ್ಣ 63 ಕಿಲೋ ಮೀಟರ್. ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದಲ್ಲಿ 1983ರಲ್ಲಿ ನಿರ್ಮಿಸಲ್ಪಟ್ಟ ವನ್ಯಜೀವಿ ಅಭಯಾರಣ್ಯ ಲೋಹ್ಬ್ಯಾರಕ್ ಮೊಸಳೆ ಕಾಡು. ಸುಮಾರು 22 ಕಿಮೀ ವ್ಯಾಪ್ತಿಯಲ್ಲಿ ಅಪರೂಪದ ಮೊಸಳೆ, ಆಮೆ ಹಾಗೂ ಇನ್ನಿತರೆ ಜಲಚರಗಳ ರಕ್ಷಣೆಗೆಂದೇ ಇದನ್ನು ನಿರ್ಮಿಸಲಾಗಿದೆ. ಲೋಹ್ಬ್ಯಾರಕ್ ಉಪ್ಪು ನೀರಿನ ಮೊಸಳೆ ಅಭಯಾರಣ್ಯಕ್ಕೆ ಅಭಯಾರಣ್ಯದ ಪಕ್ಕದ ಹಳ್ಳಿ ಲೋಹ್ಬ್ಯಾರಕ್ ಹೆಸರಿಡಲಾಗಿದೆ. 

ಈ ಪ್ರದೇಶದಲ್ಲಿ ಕಂಡುಬರುವ ಉಪ್ಪು ನೀರಿನ ಮೊಸಳೆ ಮತ್ತು ಇತರ ಜೀವವೈವಿಧ್ಯತೆಯನ್ನು ಸಂರಕ್ಷಿಸುವ ದೃಷ್ಟಿಯಿಂದ ಸ್ಥಾಪಿಸಲಾಯಿತು. ಇದು ಭೂಮಿಯ ಮೇಲಿನ ಅತ್ಯಪರೂಪದ ಸಸ್ಯವರ್ಗ ಹಾಗೂ ಸಮುದ್ರ ಸಸ್ಯಗಳು ಹಾಗೂ ಜಲಚರಗಳ ವಿಶಿಷ್ಠ ಭಂಡಾರ. ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳು, ಸಮೃದ್ಧ ಮ್ಯಾಂಗ್ರೋವ್‌, ಮರಳಿನ ಕಡಲತೀರಗಳು ಸಮುದ್ರ ಆಮೆಗಳು ಮತ್ತು ಉಪ್ಪುನೀರಿನ ಮೊಸಳೆಗಳನ್ನು ಆಶ್ರಯಿಸುವ ಕ್ರೀಕ್‌ಗಳು ಮುಂತಾದವುಗಳಿಂದ ಇದು ವಿಶೇಷ ಸಮುದ್ರ ಅಭಯಾರಣ್ಯವೆಂದೆನಿಸಿದೆ. ಅಂಡಮಾನ್‌ ರಾಜಧಾನಿ ಸಿಟಿ ಪೋರ್ಟ್ ಬ್ಲೇರ್‌ನಿಂದ ಸುಮಾರು 24 ಕಿಮೀ ದೂರದಲ್ಲಿದೆ ಲೋಹ್ಬ್ಯಾರಕ್ ಮೊಸಳೆ ಅಭಯಾರಣ್ಯ. ಸುಲಭವಾಗಿ ರಸ್ತೆಯ ಮೂಲಕ ತಲುಪಬಹುದಾದ ಪ್ರವಾಸಿ ತಾಣವಿದು. 

 

ಈ ಅಭಯಾರಣ್ಯ ಅಂಡಮಾನ್ ಟ್ರಂಕ್ ರಸ್ತೆಯ (ಎಟಿಆರ್) ಎಡಭಾಗದಲ್ಲಿದೆ ಹಾಗೂ ಪೋರ್ಟ್ ಮೌಂಟ್ ಶಾಲೆಯಿಂದ 2 ಕಿಮೀ ದೂರದಲ್ಲಿರುವ ಟೈಟ್ಲರ್ ಪಾಯಿಂಟ್‌ನಿಂದ ಆರಂಭವಾಗುತ್ತದೆ. ಎಟಿಆರ್ ಅನುಸರಿಸಿ ರಸ್ತೆಯ ಮೂಲಕ ಬಂಬೂ ಫ್ಲಾಟ್ ಜೆಟ್ಟಿಯಿಂದ ಕೂಡ ಈ ಸಮುದ್ರ ಅಭಯಾರಣ್ಯ ತಲುಪಬಹುದು ಮತ್ತು ಬಂಬೂ ಫ್ಲ್ಯಾಟ್‌ನಿಂದ 40 ಕಿಮೀ ದೂರದಲ್ಲಿ, ದುಂಡಾಸ್ ಪಾಯಿಂಟ್ ಜೆಟ್ಟಿ ಹೆಚ್ಚು ಹತ್ತಿರದಲ್ಲಿದೆ ಈ ಉಪ್ಪುನೀರಿನ ಮೊಸಳೆಗಳ ಸ್ವಾಭಾವಿಕ ಆಶ್ರಯ ತಾಣ. ಇಲ್ಲಿಂದ 10 ಕಿಮೀ ದೂರದಲ್ಲಿ ಪಕ್ಷಿ ವೀಕ್ಷಣೆ ಮತ್ತು ಚಾರಣಕ್ಕೆ ಹೆಸರಾದ ಮೌಂಟ್ ಹ್ಯಾರಿಯೆಟ್ ರಾಷ್ಟ್ರೀಯ ಉದ್ಯಾನವನವಿದೆ. ವಿಶ್ವಪ್ರಸಿದ್ಧ ಮಹಾತ್ಮ ಗಾಂಧಿ ಸಾಗರ ರಾಷ್ಟ್ರೀಯ ಉದ್ಯಾನವನದ ಇದರ ಪಕ್ಕದಲ್ಲೇ ಇದೆ. ಮಹಾತ್ಮ ಗಾಂಧಿ ಸಮುದ್ರ ಹವಳಗಳ ದಂಡೆಗೆ ಈ ಸಮುದ್ರ ಅಭಯಾರಣ್ಯದಿಂದ 18 ಕಿಮೀ ದೂರ ಸಾಗಬೇಕು. ಆಮೆಗಳ ಸಹಜ ಗೂಡು ಕತ್‌ಬರ್ಟ್ ಬೇ ವನ್ಯಜೀವಿ ಅಭಯಾರಣ್ಯ, ಇಡೀ ಭಾರತದ ಏಕೈಕ ಸಕ್ರಿಯ ಜ್ವಾಲಾಮುಖಿಯಿರುವ ಬ್ಯಾರೆನ್ ದ್ವೀಪ, ಡುಂಡಾಸ್ ಪಾಯಿಂಟ್ನ ಫೆರ್ರಿ ಸಿಟಿ ಮುಂತಾದ ಪ್ರವಾಸಿ ತಾಣಗಳಿಂದ ಸಮೃದ್ಧವಾಗಿದೆ ಅಂಡಮಾನ್.‌ 

ಭೌಗೋಳಿಕವಾಗಿ ಮತ್ತು ಪ್ರಾಕೃತಿಕವಾಗಿ ಅತ್ಯಂತ ಸಂಪದ್ಭರಿತ ಸಿರಿವಂತ ಅರಣ್ಯ ಮತ್ತು ಜೀವಪರಿಸರವನ್ನು ಹೊಂದಿರುವ ಅದ್ಭುತ ದ್ವೀಪ ಅಂಡಮಾನ್.‌ 1981ರಲ್ಲಿ ಘೋಷಿಸಲ್ಪಟ್ಟ ಲೋಹ್ಬ್ಯಾರಕ್ ಸಾಲ್ಟ್‌ ವಾಟರ್‌ ಮೊಸಳೆ ಅಭಯಾರಣ್ಯ ಬರೋಬ್ಬರಿ 100 ಚದರ ಕಿಲೋಮೀಟರ್ ವಿಸ್ತಾರದಲ್ಲಿದೆ. ಆದರೆ, ಈಗ ಅಭಯಾರಣ್ಯದ ಗಡಿಯನ್ನು 41.716 ಚ.ಕಿಮೀಗೆ ಪರಿಷ್ಕರಿಸಲಾಗಿದೆ. ಮೊದಲು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಡಳಿತವು ನ್ಯಾಷನಲ್‌ ಬಯೋಡೈವರ್ಸಿಟಿ ಮತ್ತು ವೈಲ್ಡ್‌ ಲೈಫ್‌ ಬೋರ್ಡ್‌ ಮುಂದೆ ಸಲ್ಲಿಸಿದ ಮೂಲ ಅಭಯಾರಣ್ಯದ ಗಡಿ ಬಂಗಾಳ ಕೊಲ್ಲಿ ಮತ್ತು ದಕ್ಷಿಣ ಅಂಡಮಾನ್ ದ್ವೀಪದ ಪಶ್ಚಿಮ ಕರಾವಳಿಯಿಂದ ವಿಸ್ತರಿಸಿತ್ತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ವನ್ಯಜೀವಿಗಳ ರಾಜ್ಯ ಮಂಡಳಿಯ ಶಿಫಾರಸಿನ ಆಧಾರದ ಮೇಲೆ ನಂತರ 19.97 ಚದರ ಕಿಲೋಮೀಟರ್ ಪ್ರದೇಶ ಸೇರಿಸುವ ಮೂಲಕ ಅಭಯಾರಣ್ಯದ ಗಡಿಯನ್ನು ಪುನರ್ ವಿಮರ್ಶಿಸಲು ನಿರ್ಧರಿಸಲಾಯಿತು. ಅಭಯಾರಣ್ಯದೊಂದಿಗೆ ಸಂಬಂಧಿಸಿದ ಸಮುದ್ರ ಜೀವವೈವಿಧ್ಯ ರಕ್ಷಣೆಯ ಕಾರಣ ಅಭಯಾರಣ್ಯದ ಗಡಿಗಳನ್ನು ಮರುಜೋಡಣೆ ಮಾಡಿದ ನಂತರ, ಪರಿಷ್ಕೃತ ಪ್ರದೇಶವನ್ನು 41.716 ಚದರ ಕಿಲೋಮೀಟರ್‌ಗೆ ಅಂತಿಮಗೊಳಿಸಲಾಯಿತು. ಅರಣ್ಯ ಇಲಾಖೆ, ಅಂಡಮಾನ್ ಮತ್ತು ನಿಕೋಬಾರ್ ಆಡಳಿತವು ಮೊಸಳೆಗಳ ದೀರ್ಘಾವಧಿಯ ಸಂರಕ್ಷಣೆ ಮತ್ತು ಅಭಯಾರಣ್ಯದ ಇತರ ಸಂಬಂಧಿತ ಸಮುದ್ರ ಜೀವಿಗಳ ನಿರ್ವಹಣಾ ಯೋಜನೆಯನ್ನು ಅಭಿವೃದ್ಧಿಪಡಿಸುವ ವಿಚಾರದಲ್ಲಿ ಗಟ್ಟಿ ನಿಲುವು ತಾಳಿದ್ದರಿಂದ ಇಂದು ಲೋಹ್ಬ್ಯಾರಕ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಒಂದು ನಿರ್ಣಾಯಕ ಮೊಸಳೆ ಆವಾಸಸ್ಥಾನವೆಂದು ಗುರುತಿಸಲ್ಪಟ್ಟಿದೆ.‌

 

 1985ರಲ್ಲಿ ನಿರ್ಮಾಣವಾದ ಅಂಡಮಾನ್ ನಿಕೋಬಾರ್ನ ಇನ್ನೊಂದು ವನ್ಯಜೀವಿ ಅಭಯಾರಣ್ಯ ಇಂಟರ್ವ್ಯೂ ಐಲ್ಯಾಂಡ್. ಇದರ ಒಟ್ಟು ವಿಸ್ತೀರ್ಣ 125 ಕಿಲೋಮೀಟರ್. 1977ರಲ್ಲಿ ಅಂಡಮಾನ್ನ ಸೌತ್ ಸೆಂಟಿನಿಲ್, ನಾರ್ತ್ ರೀಫ್, ನಾರ್ಕೊಂಡಂ ಹಾಗೂ ಬಾರನ್ ವೈಲ್ಡ್‌ಲೈಫ್, 1985ರಲ್ಲಿ ತಿಲನ್ಚಾಂಗ್ ಹಾಗೂ ಬಟ್ಟಿಮಾಲ್ವೆ ವನ್ಯಜೀವಿ ಅಭಯಾರಣ್ಯಗಳೆಂದು ಗುರುತಿಸಲಾಯ್ತು. ಇಂಟರ್‌ವ್ಯೂ ಐಲ್ಯಾಂಡ್ ಉತ್ತರ ಮತ್ತು ಮಧ್ಯ ಅಂಡಮಾನ್ ಆಡಳಿತ ಜಿಲ್ಲೆಗೆ ಸೇರಿದ್ದು, ಪೋರ್ಟ್ ಬ್ಲೇರ್‌ನ ಉತ್ತರಕ್ಕೆ 125 ಕಿಮೀ (78 ಮೈಲಿ) ದೂರದಲ್ಲಿದೆ.

 

ದಕ್ಷಿಣ ಅಂಡಮಾನ್​​ನಲ್ಲಿರುವ ಡಿಫೆನ್ಸ್ ಐಲ್ಯಾಂಡ್ 33.5 ಕಿಮೀ ವ್ಯಾಪ್ತಿಯಲ್ಲಿರುವ ಸಂರಕ್ಷಿತಾರಣ್ಯ; ಇದನ್ನು ತೀರ್ಮಾನಿಸಿದ್ದು 1987ರಲ್ಲಿ. ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದಲ್ಲೇ ಇರುವ 37 ಕಿಮೀ ವ್ಯಾಪ್ತಿಯ ಚಿಂಕ್ಯೂ ಲ್ಯಾಂಡ್, 30 ಕಿಮೀ ವ್ಯಾಪ್ತಿಯ ಕೈಡ್ ಐಲ್ಯಾಂಡ್, ಶಿಯರ್ಮೆ ಐಲ್ಯಾಂಡ್, ಪಾಗೆಟ್ ಐಲ್ಯಾಂಡ್, ವೆಸ್ಟ್, ಇಸ್ಟ್, ರೇಂಜರ್ ಹಾಗೂ ಸ್ವ್ಯಾಂಪ್ ಐಲ್ಯಾಂಡ್ಗಳು, 150 ಕಿಮೀ ಸುತ್ತಳತೆಯ ಫ್ಲಾಟ್ ಐಲ್ಯಾಂಡ್ ವನ್ಯಜೀವಿ ಹಾಗೂ ಸಂರಕ್ಷಿತ ಸಹಜ ಪರಿಸರ ತಾಣಗಳು 1987ರಲ್ಲಿ ರಚನೆಯಾದವು. ಜತೆಗೆ 1987ರಲ್ಲೆ ನಿರ್ಮಾಣವಾದ ಅಂಡಮಾನ್ ಹಾಗೂ ನಿಕೋಬಾರ್ನ ಇತರೆ ದ್ವೀಪ ವನ್ಯಜೀವಿ ತಾಣಗಳೆಂದರೆ ಪೂರ್ವ ಟಿಂಗ್ಲಿಂಗ್ ದ್ವೀಪ, ಬೆನೆಟ್ ದ್ವೀಪ, ತಲಬೈಚಾ, ಪಾಯಿಂಟ್ ಐಲ್ಯಾಂಡ್, ಬೋಂಡೋವಿಲ್ಲೆ, ತಬ್ಲೇ(ಡೆಲ್ಗಾರ್ನೋ), ಜೇಮ್ಸ್ ಐಲ್ಯಾಂಡ್, ಸ್ಯಾಂಡಿ ಐಲ್ಯಾಂಡ್, ರೋಪರ್, ಪಿಟ್ಮ್ಯಾನ್, ಸೌತ್ ಬ್ರದರ್, ಸೌತ್ ರೀಫ್, ಬ್ಲಫ್ ಐಲ್ಯಾಂಡ್, ಸರ್ ಹ್ಯೂಜ್ ರೋಸ್, ಟೆಂಪಲ್ ಐಲ್ಯಾಂಡ್, ರೋಸ್ ಐಲ್ಯಾಂಡ್ಗಳು. ಅಂಡಮಾನ್ ಹಾಗೂ ನಿಕೋಬಾರ್ ಕೇಂದ್ರಾಢಳಿತ ಪ್ರದೇಶದಲ್ಲಿ ಸಂರಕ್ಷಿತಾರಣ್ಯವೆಂದು ಘೋಷಣೆಯಾದ ದ್ವೀಪ, ಸಮುದ್ರ ಪರಿಸರ, ಸಸ್ಯ ಹಾಗೂ ಜೀವ ಪ್ರಬೇಧ ಹಾಗೂ ವನ್ಯಜೀವಿ ಸಂರಕ್ಷಿತ ಅಭಯರಣ್ಯಗಳು 35ಕ್ಕೂ ಹೆಚ್ಚು. 

 

 

 

 

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd