ಕೃಪೆ – ಹಿಂಡವಿ
ಪ್ರಾಣಿಪ್ರಪಂಚ : ಅಳಿವಿನಂಚಿನಲ್ಲಿರುವ ನಮ್ಮ ರಾಜ್ಯದ ಅಮೂಲ್ಯ ಸಂಪತ್ತು ಕಾವೇರಿ ಒಡಿಲಿನ ಮಹಸೀರ್ ಮೀನುಗಳು:
ವನ್ಯಜೀವಿಗಳು ಎಂದರೆ ಕೇವಲ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಪ್ರಾಣಿಗಳು ಮಾತ್ರವಲ್ಲ. ಅರಣ್ಯದ ಹೊರಗೆ, ಜನವಸತಿ ಪ್ರದೇಶವಾದ ಹಳ್ಳಿ, ನಗರ, ಹೊಲಗದ್ದೆ, ನದಿ ತೊರೆ, ಸಾಗರಗಳು… ಮತ್ತಿತ್ಯಾಧಿ ಕಡೆಗಳಲ್ಲೂ ಸಾಕಷ್ಟು ಪ್ರಮಾಣದ ಜೀವಿಗಳಿವೆ. ಆದರೆ ಅಲ್ಲಿನ ಹಲವು ವನ್ಯಜೀವಿಗಳು ಕಾಡಿನಲ್ಲಿನ ವನ್ಯಜೀವಿಗಳಿಗೆ ಹೋಲಿಸಿದರೆ ಅಷ್ಟಾಗಿ ಸಂರಕ್ಷಣೆಗೊಳಪಟ್ಟಿಲ್ಲ. ಅವು ಬೇಟೆಗಾರರ ದಾಳಿಗೆ, ಆವಾಸಸ್ಥಾನ ನಾಶಕ್ಕೆ ಹೆಚ್ಚಾಗಿ ಬಲಿಯಾಗುತ್ತಿವೆ. ಅಂತಹ ಜೀವಿಗಳಲ್ಲಿ ಜಲಚರ ಮಹಸೀರ್ ಮೀನು ಕೂಡ ಒಂದು.
ಈ ಬಾರಿಯ ವನ್ಯಜೀವಿ ಸಪ್ತಾಹದ ಘೋಷವಾಕ್ಯ “ಶುದ್ಧ ಜಲಕ್ಕಾಗಿ ಜಲಚರಗಳನ್ನು ಸಂರಕ್ಷಿಸೋಣ” ಎಂಬುದಾಗಿದ್ದು, ಜಲಚರಗಳಲ್ಲಿ ಕರ್ನಾಟಕದಲ್ಲಿ ಕಾಣಸಿಗುವ ಅತ್ಯಂತ ಪ್ರಮುಖ, ಇತ್ತೀಚೆಗೆ ಅಪರೂಪವಾಗುತ್ತಿರುವ ಮಹಸೀರ್ ಮೀನುಗಳ ಬಗ್ಗೆ ತಿಳಿಯಬೇಕಿದೆ. Infact ಮೊನ್ನೆ 67 ನೇ ವನ್ಯಜೀವಿ ಸಪ್ತಾಹದ ಸಂದರ್ಭದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೈಕೋರ್ಟ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಂಪ್-ಬ್ಯಾಕ್ಡ್ ಮಹಸೀರ್ ಮೀನಿನ ವಿಶೇಷ ಅಂಚೆಚೀಟಿಯನ್ನು ಬಿಡುಗಡೆ ಮಾಡಿದ್ದಾರೆ. ಕಾವೇರಿ ನದಿ ಪಾತ್ರದಲ್ಲಿ ಕಂಡುಬರುವ ಒಂದು ಅಪರೂಪದ, ಸಂಖ್ಯೆಯ ದೃಷ್ಟಿಯಿಂದ ಅಪಾಯದಂಚಿನಲ್ಲಿರುವ ಒಂದು ಮೀನಿನ ತಳಿ ಮಹಸೀರ್. 1.5 ಮೀಟರ್ ವರೆಗೆ ಉದ್ದ, 55 ಕೆ.ಜಿ. ವರೆಗೂ ತೂಕ ಹೊಂದಿರುವ ಈ ಮೀನುಗಳು, ತಮ್ಮ ಹೋರಾಟದ ಗುಣಗಳಿಂದ ‘ನದಿಯೊಳಗಿನ ಹುಲಿ’ ಎಂದು ಹೆಸರು ಗಳಿಸಿವೆ.
ಕನ್ನಡದ ಅತ್ಯಂತ ಜನಪ್ರಿಯ ಕೃತಿಗಳಲ್ಲಿ ಒಂದಾಗ ಪೂರ್ಣಚಂದ್ರ ತೇಜಸ್ವಿಯವರ ಜುಗಾರಿ ಕ್ರಾಸ್ ನಲ್ಲಿ ‘ಪುರಾತನ ಕಡತಗಳು’ ಎಂಬ ಅಧ್ಯಾಯದಲ್ಲಿ ಪೂರ್ಣ ಈ ಮಹಸೀರ್ ಮೀನಿನ ಬಗ್ಗೆಯೇ ವಿಷಯವಿದೆ. ಕಾದಂಬರಿ ಪ್ರಮುಖ ಪಾತ್ರದಾರಿಯಾದ ಸುರೇಶನಿಗೆ ಬ್ರಿಟೀಷರ ಕಾಲದ ಬಂಗಳೆಯಲ್ಲಿದ್ದಾಗ ಬ್ರಿಟೀಷ್ ಅಧಿಕಾರಿ ಒಬ್ಬ ಆ ಕಾಲದಲ್ಲಿ ಬರೆದ ಡೈರಿಯೊಂದು ಸಿಕ್ಕಿ ಅದನ್ನು ಓದುತ್ತಿರುತ್ತಾನೆ. ಆ ಬ್ರಿಟೀಷ್ ಅಧಿಕಾರಿ “ಈ ಮಹಸೀರ್ ಮೀನುಗಳ ಬಗೆಗಿನ ಅಧ್ಯಯನಕ್ಕಾಗಿ ನನ್ನ ಜೀವನವನ್ನೆ ಮುಡುಪಾಗಿಡುತ್ತೇನೆ” ಎನ್ನುವ ಮಾತು ಆತ ಆ ಕಾಲದಲ್ಲುಯೇ ಎಷ್ಟು ಮಹತ್ವ ಪಡೆದಿತ್ತು ಎನ್ನುವುದನ್ನು ಸೂಚಿಸುತ್ತದೆ. ಮಹಸೀರ್ ಮೀನುಗಳಿಗೆ ದೊಡ್ಡ ತೊಡಕಾಗಿರುವುದು ಈ ಡೈನಮೈಟ್ ದಾಳಿ. ಬಲೆ, ಗಾಣದಂತ ಸಾಂಪ್ರದಾಯಿಕ ಮೀನುಗಾರಿಕೆ ಯಾವುದೇ ಮೀನುಗಳಿಗೆ ಅಷ್ಟಾಗಿ ತೊಂದರೆ ಮಾಡುವುದಿಲ್ಲ. ಡೈನಮೈಟ್ ದಾಳಿ ಒಮ್ಮೆಲೇ ಅಸಂಖ್ಯಾತ ಮರಿಗಳನ್ನು ಕೊಲ್ಲುವುದರಿಂದ ಇದು ಮಹಸೀರ್ ಸೇರಿ, ನೀರುನಾಯಿಗಳಂತ ಇತರ ಜಲಚರಗಳಿಗೂ ಸಹ ದೊಡ್ಡ ಅಪಾಯವನ್ನು ತಂದೊಡ್ಡುತ್ತದೆ.
ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಅರಕಲಗೂಡು ತಾಲ್ಲೂಕಿನ ರಾಮಾನಾಥಪುರದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಈ ಮಹಸೀರ್ ಮೀನುಗಳದ್ದು ದೊಡ್ಡ ಆಕರ್ಷಣೆ. ದೇವಾಲಯದ ನಿರ್ದಿಷ್ಟ ಭಾಗದಲ್ಲಿ ಬೃಹತ್ ಗಾತ್ರದ ರಾಶಿ, ರಾಶಿ ಮಹಶೀರ್ ಮೀನುಗಳನ್ನು ನೋಡಲೆಂದೆ ಬಹಳಷ್ಟು ಜನ ಅಲ್ಲಿಗೆ ಹೋಗುತ್ತಾರೆ. ಆ ಮೀನುಗಳಿಗೆ ಕಡ್ಲೆಕಾಯಿ, ಮಂಡಕ್ಕಿ ಹಾಕಿ ಖುಷಿ ಪಡುತ್ತಾರೆ. ಮತ್ತೊಂದು ವಿಶೇಷವೆಂದರೆ ಜನರು ಅಲ್ಲಿನ ಮೀನುಗಳನ್ನು ಹಿಡಿಯಬಾರದು, ತಿನ್ನಬಾರದೆಂಬ ನಂಬಿಕೆ ಹೊಂದಿದ್ದು, ‘ದೇವರ ಮೀನು’ಗಳೆಂದು ಅವುಗಳನ್ನು ಕರೆಯುತ್ತಾರೆ. ಸರ್ಕಾರ ಕೂಡ ದೇವಾಲಯದ ಒಂದು ಪರ್ಲಾಂಗ (200 ಮೀಟರ್) ಪ್ರದೇಶವನ್ನು ಮೈಸೂರು ಶಿಕಾರಿ ಮತ್ತು ಮೀನು ಸಂರಕ್ಷಣೆ ಕಾನೂನು 1901 ಕಲಂ 5(1) ರಂತೆ 1935 ರಿಂದಲೂ ‘ಮತ್ಸ್ಯ ಸಂರಕ್ಷಿತ ಪ್ರದೇಶವೆಂದು ಘೋಷಿಸಿ ಬಹಳ ಹಿಂದಿನಿಂದಲೂ ಆ ಜಾಗದಲ್ಲಿ ಇವುಗಳನ್ನು ಸಂರಕ್ಷಿಸುತ್ತಿದೆ. ಮಹಸೀರ್ ಮೀನುಗಳು ಸೇರಿ ಎಲ್ಲಾ ಜಲಚರಗಳನ್ನು ಸಂರಕ್ಷಿಸುವಲ್ಲಿ ಮೊದಲ ಹೆಜ್ಜೆಯೆಂದರೆ ಜಲಮೂಲಗಳಾದ ನದಿ, ಕೆರೆ, ಸಾಗರ ಸರೋವರಗಳನ್ನು ಪ್ಲಾಸ್ಟಿಕ್ ವಸ್ತುಗಳಿಂದ ಮುಕ್ತವಾಗಿಸಬೇಕು, ಅಕ್ರಮ ಮರಳುಗಾರಿಗೆ, ಅವೈಜ್ಞಾನಿಕ ಮೀನುಗಾರಿಕೆ ನಿಲ್ಲಬೇಕು. ಜಲಮೂಲಗಳ ಒತ್ತುವರಿ ಪೂರ್ಣ ತೆರವಾಗಿ ಅವು ಜಲಚರಗಳಿಗೆ ಸಂರಕ್ಷಿತ ತಾಣಗಳಾಗಬೇಕು.
-ಸಂಜಯ್ ಹೊಯ್ಸಳ
ಅರಣ್ಯ ರಕ್ಷಣಾಧಿಕಾರಿ ಹಾಗೂ ಹವ್ಯಾಸಿ ಬರಹಗಾರರು
ಮೈಸೂರು