ಪ್ರಾಣಿ ಪ್ರಪಂಚ:
ಕೃಪೆ – ಹಿಂದವಿ ಸ್ವರಾಜ್
ಭಾರತದ ಕರಡಿ ಪ್ರಬೇಧಗಳ ಕುರಿತಾದ ವಿಸ್ಮಯಕಾರಿ ವೈವಿಧ್ಯಮಯ ವಿಚಾರಗಳು:
ಕರಡಿಗಳು ಮೂಲತಃ ನಾಯಿ ಕುಟುಂಬದ ದೂರದ ಸಂಬಂಧಿಗಳು ಎನ್ನುತ್ತಾರೆ, ಇವುಗಳನ್ನು Ursidae ಕುಟುಂಬಕ್ಕೆ ಸೇರಿಸಲಾಗಿದೆ. ಕರಡಿಗಳು ಅನೇಕ ಬಗೆಯ ಪರಿಸರಕ್ಕೆ ಹೊಂದಿಕೊಂಡು ಪ್ರಪಂಚದಾದ್ಯಂತ ನೆಲೆಸಿವೆ. ಅತೀ ಶೀತ ಆರ್ಕಟಿಕ್ ವಲಯದಲ್ಲಿ ಭೂಮಿ ಮೇಲಿನ ಅತೀ ದೊಡ್ಡ ಮಾಂಸಹಾರಿ ಪ್ರಾಣಿ ದೃವ ಕರಡಿ ವಾಸಿಸಿದರೆ, ಉಷ್ಣವಲಯದಲ್ಲಿ ವಿವಿಧ ಜಾತಿ ಕರಡಿಗಳು ವಾಸಿಸುತ್ತಿವೆ. ಆದರೆ ಅಚ್ಚರಿ ಎನ್ನುವಂತೆ ಆಫ್ರಿಕಾ ಹಾಗು ಆಸ್ಟ್ರೇಲಿಯಾದ ಕಾಡುಗಳಲ್ಲಿ ಕರಡಿಗಳು ಇಲ್ಲ. ಕರಡಿಗಳಂತೆ ಪಾಂಡಾಗಳು ಕಂಡು ಬಂದರೂ ಇವುಗಳನ್ನು ಬೇರೆ ಕುಟುಂಬಕ್ಕೆ ಸೇರಿಸಲಾಗಿದೆ.
ಕರಡಿಗಳ ಸಾಮಾನ್ಯ ಲಕ್ಷಣಗಳು: ಹಿಮ ಕರಡಿ ಹೊರತುಪಡಿಸಿದರೆ ಉಳಿದವು ಮಿಶ್ರಹಾರಿಗಳು. ಇವುಗಳಿಗೆ ಮಾಂಸವನ್ನು ಹರಿಯಬಲ್ಲ ಕಾರ್ನೇಸಿಯಲ್ ಹಲ್ಲುಗಳಿಲ್ಲ. ಇವಕ್ಕೆ ಬಾಲವಿಲ್ಲ, ಇದ್ದರೂ ಅತೀ ಚಿಕ್ಕದು. ನೆಲಕ್ಕೆ ಮನುಷ್ಯರಂತೆ ಪೂರ್ಣ ಊರುವ ಪಾದಗಳಿವೆ. ಹೆಜ್ಜೆಗಳು ಮನುಷ್ಯರಂತೆ ಕಂಡರೂ ಮುಂದಿರುವ ಉಗುರಿನ ಗುರುತು ಬೀಳುವುದರಿಂದ ವ್ಯತ್ಯಾಸ ತಿಳಿಯಬಹುದು. ಪ್ರತಿ ಪಾದದ ಬೆರಳುಗಳಿಗೆ ಉದ್ದವಾದ ಬಾಗಿದ ಮೊನಚಾದ ನಖಗಳಿವೆ. ಮೂಗು ಮತ್ತು ಕಿವಿ ತುಂಬಾ ಚುರುಕು ಮತ್ತು ಕಣ್ಣು ಮಂದ. ಕೆಲ ಜಾತಿಯ, ಕರಡಿಗಳು ಮರ ಏರುತ್ತವೆ. ಹಿಂಗಾಲುಗಳ ಮೇಲೆ ನಿಂತು ಕೆಲ ಹೆಜ್ಜೆ ನಡೆಯಬಲ್ಲವು. ಜೇನು, ಗೆದ್ದಲು, ಹಣ್ಣು, ಮೀನು, ಇರುವೆಗಳನ್ನು ಇವು ತಿನ್ನುತ್ತವೆ. ಶೀತ ವಲಯದ ಕರಡಿಗಳು ಚಳಿಗಾಲದಲ್ಲಿ ಶಿಶಿರ ನಿದ್ರೆ ಮಾಡುತ್ತವೆ. ಉಷ್ಣವಲಯದ ಕರಡಿಗಳು ಶಿಶಿರ ನಿದ್ರೆ ಮಾಡುವುದಿಲ್ಲ. ಆದರೆ ಹುಟ್ಟುವ ಮರಿಗಳು ಕೂದಲ್ಲಿಲ್ಲದೆ, ಕುರುಡಾಗಿ ಹುಟ್ಟುತ್ತವೆ.
ನಮ್ಮ ದೇಶದಲ್ಲಿ 4 ಬಗೆಯ ಕರಡಿಗಳನ್ನು ಗುರುತಿಸಲಾಗಿದ್ದು, ನಮ್ಮ ರಾಜ್ಯದಲ್ಲಿ ಸ್ಲಾಥ್ ಕರಡಿ ಮಾತ್ರ ಕಂಡು ಬರುತ್ತದೆ.
1)ಸ್ಲಾತ್ ಕರಡಿಗಳು (SLOTH BEAR):
ನಮ್ಮಲ್ಲಿರುವ ಕರಡಿಗೆ Sloth bear ಎಂದು ಹೆಸರು, ಈ Sloth bear ಅರ್ಥ ಹುಡುಕಿದರೆ ಎಲ್ಲಾ ಕಡೆ ಇದು ಸೋಮಾರಿ ಕರಡಿ ಎಂಬ ಮಾಹಿತಿ ಸಿಗುತ್ತದೆ, ಇವು ದೀರ್ಘ ನಿದ್ರೆ ಮಾಡುತ್ತವೆ. ಅದನ್ನು ಬಿಟ್ಟರೆ ಸೋಮಾರಿಯ ಯಾವ ಲಕ್ಷಣಗಳು ಈ ಕರಡಿಯಲ್ಲಿಲ್ಲ. ಆದರೂ ಈ ಕರಡಿಗೆ Sloth bear ಹೆಸರು ಬರಲು ಬೇರೆ ಕಾರಣವೇ ಇರಬೇಕು. 18ನೇ ಶತಮಾನದ ಅಂತ್ಯದಲ್ಲಿ ವೈಜ್ಞಾನಿಕ ಪರಿಶೀಲನೆಗಾಗಿ ಕಳುಹಿಸಿದ ಈ ಕರಡಿಯ ಚರ್ಮವು ದಕ್ಷಿಣ ಅಮೆರಿಕಾದ ಸ್ಲಾಥ್ ಪ್ರಾಣಿಯಂತೆ ಕಂಡಿದ್ದರಿಂದ Sloth bear ಎಂಬ ಹೆಸರು ಬಂದಿರಬಹುದೆಂಬ ಊಹೆಯಿದೆ. ಮುಂದೆ 1810ರಲ್ಲಿ ಜೀವಂತ ಕರಡಿಯನ್ನು ಪ್ಯಾರಿಸ್ಗೆ ಒಯ್ದ ನಂತರ ಇದು ಕರಡಿ ಎಂದು ತೀರ್ಮಾನಿಸಲಾಯಿತು. ಆದರೆ ಮೊದಲಿನ ಸ್ಲಾಥ್ ಹಾಗೆ ಉಳಿದುಕೊಂಡಿದೆ.
ಎತ್ತರ 65-85 ಸೆಂಟಿ ಮೀಟರ್. ಎರಡು ಕಾಲಲ್ಲಿ ಎದ್ದು ನಿಂತರೆ ಆರಡಿ ಮನುಷ್ಯನಷ್ಟು ಎತ್ತರ. ಗಂಡು 130-145 ಕಿಲೋ, ಹೆಣ್ಣು 70-80 ಕಿಲೋ ತೂಗುತ್ತವೆ. ಕಪ್ಪು ಬಣ್ಣದ ಒರಟು ಕೂದಲು, ದಪ್ಪವಾದ ಚಲಿಸುವ ತುಟಿಗಳು, ಕಾಲಲ್ಲಿ ಉದ್ದವಾದ ಬಿಳಿ ನಖಗಳು, ಎದೆ ಮೇಲೆ ಬಿಳಿ ಚಂದ್ರಾಕೃತಿ ಇದೆ. ಗೆದ್ದಲು ಹುತ್ತ ಇರುವೆ ಗೂಡುಗಳನ್ನು ಒಡೆದು ಮುಸುಡಿ ಒಳಸೇರಿಸಿ ಮಣ್ಣನ್ನು ಊದಿ ದೀರ್ಘಶ್ವಾಸದಿಂದ ಹುಳುಗಳನ್ನು ಹಿಂದೆಳೆದು ತಿನ್ನುತ್ತದೆ. ಇವುಗಳ ಮಲವನ್ನು ಪರೀಕ್ಷಿಸಿದರೆ ಇರುವೆಗಳೇ ಹೆಚ್ಚು ಕಂಡುಬರುತ್ತವೆ. ಇವು ಗೆಡ್ಡೆ ಗೆಣಸು, ಹಣ್ಣುಗಳು, ಗೆದ್ದಲು, ಇರುವೆಗಳನ್ನು ತಿನ್ನುತ್ತವೆ. ಕೆಲವು ಸಲ ಸತ್ತ ಪ್ರಾಣಿಗಳ ಮಾಂಸವನ್ನು ತಿನ್ನುತ್ತವೆ. ಇವು ಮರ ಏರುತ್ತವೆ, ಇಳಿಯುವಾಗ ಹಿಂದಿನಿಂದ ಜಾರುತ್ತವೆ. ಹೆಚ್ಚಾಗಿ ರಾತ್ರಿ ಸಂಚಾರಿ. 1-2 ಮರಿಗಳನ್ನು ಹಾಕುತ್ತವೆ, ಆಹಾರಕ್ಕಾಗಿ ಅಲೆಯುವಾಗ ಮರಿಗಳನ್ನು ಬೆನ್ನ ಮೇಲೆ ಕೂರಿಸಿಕೊಳ್ಳುತ್ತವೆ. ದೀರ್ಘನಿದ್ರೆ ಮಾಡಬಲ್ಲವು. ಪಾದಗಳನ್ನು ನೆಕ್ಕುವ ಅಭ್ಯಾಸವಿದೆ. ಎಲ್ಲ ಪರಿಸರಕ್ಕೂ ಹೊಂದಿಕೊಂಡಿವೆ, ಬಯಲು ಸೀಮೆ, ಒಣ ಕಾಡು, ಎಲೆ ಉದುರುವ ಕಾಡು, ಪಶ್ಚಿಮ ಘಟ್ಟಗಳ ದಟ್ಟಡವಿಯಲ್ಲಿಯೂ ಕರಡಿಗಳನ್ನು ನೋಡಬಹುದು. ಶ್ರೀಲಂಕಾ, ಭೂತಾನ್, ನೇಪಾಳಗಳಲ್ಲಿಯೂ ಕಾಣಿಸುತ್ತದೆ. ನಮ್ಮ ರಾಜ್ಯದಲ್ಲಿ ಬಳ್ಳಾರಿಯ ದರೋಜಿ ಕರಡಿ ಧಾಮ ಪ್ರಸಿದ್ಧ ಕರಡಿಧಾಮ. ಇವು ಸಾಧು ಪ್ರಾಣಿಯಂತೆ ಕಂಡರೂ ಕೆಲವು ಸಲ ಉಗ್ರವಾಗಿ ವರ್ತಿಸುತ್ತದೆ. ಇದರ ಕಣ್ಣುಗಳು ಸ್ವಲ್ಪ ಮಂದವಿರುವುದರಿಂದ ಅಕಸ್ಮತ್ತಾಗಿ ಹತ್ತಿರ ಹೋದವರ ಅರಿವಾಗದೆ ಗಲಿಬಿಲಿಗೊಂಡು ಮನುಷ್ಯನ ಮೇಲೆರಗಿ, ಮುಖದ ಭಾಗವನ್ನೇ ಕಚ್ಚಿ ಹರಿಯುತ್ತವೆ. ಹೊಲ ಗದ್ದೆಗಳಲ್ಲಿ ಕರಡಿ ಕಂಡಾಗ ಸಮೀಪ ಹೋಗದೆ ದೂರದಿಂದಲೇ ಕೂಗಿ ಹೆದರಿಸುವುದು ಒಳ್ಳೆಯದು, ಇವುಗಳನ್ನು ಪಳಗಿಸಬಹುದು.
2) ಹಿಮಾಲಯದ ಕಂದು ಕರಡಿ (HIMALAYAN BROWN BEAR):
ಹಿಮಾಲಯದ ಕಂದು ಕರಡಿ ಇದು ನಮ್ಮ ದೇಶದಲ್ಲಿ ಕಂಡುಬರುವ ಕರಡಿಗಳಲ್ಲಿ ಅತೀ ದೊಡ್ಡದು. ಗಂಡಿನ ತೂಕ ಸುಮಾರು 250 ಕೆಜಿ. ಗರಿಷ್ಠ ಸಸ್ಯಾಹಾರಿಯಾದರೂ, ದಂಶಕ, ಮೀನು, ಹುಳು, ಸತ್ತ ಪ್ರಾಣಿಗಳನ್ನು ತಿನ್ನುತ್ತವೆ. 1-2 ಮರಿಗಳನ್ನು ಹಾಕುತ್ತವೆ, ಕೆಲವು ತಿಂಗಳುಗಳ ಕಾಲ ಶಿಶಿರ ನಿದ್ರೆ ಮಾಡುತ್ತವೆ. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಲಡಾಕ್, ಉತ್ತರಖಾಂಡ್, ಹಾಗೂ ಟಿಬೆಟ್, ಪಾಕಿಸ್ತಾನ ಹಾಗು ನೇಪಾಳದಲ್ಲಿ ಕಾಣುತ್ತವೆ.
3) ಹಿಮಾಲಯದ ಕಪ್ಪು ಕರಡಿ (HIMALAYAN BLACK BEAR):
ಎದೆಯ ಮೇಲೆ ಅರ್ದ ಚಂದ್ರಾಕೃತಿ ಇರುವುದರಿಂದ ಮೂನ್ ಬೇರ್ ಅಂತಲೂ ಕರೆಯುತ್ತಾರೆ. ತೂಕ 90-115, ಹೆಚ್ಚಾಗಿ ಮಾಂಸಾಹಾರಿಗಳು, ಚನ್ನಾಗಿ ಈಜಬಲ್ಲವು. ಹಿಮಾಲಯ, ಭೂತಾನ್, ಚೀನಾ, ನೇಪಾಳ ಪಾಕಿಸ್ತಾನಗಳಲ್ಲಿ ಹೆಚ್ಚಾಗಿ ಕಾಣಿಸುತ್ತವೆ
4) ಮಲಯದ ಸೂರ್ಯ ಕರಡಿ (MALAYAN SUN BEAR):
ಎದೆಯ ಮೇಲೆ ಸೂರ್ಯ ಉದಯಿಸುವ ಹೊಂಬಣ್ಣದ ಅರ್ಧ ಚಂದ್ರಾಕೃತಿ ಇರುವುದರಿಂದ ಸೂರ್ಯ ಕರಡಿ ಎನ್ನುತ್ತಾರೆ. ನಮ್ಮ ದೇಶದಲ್ಲಿ ಕಂಡು ಬರುವ ಕರಡಿಗಳಲ್ಲಿ ಅತೀ ಚಿಕ್ಕದು. 25-65 ಕೆಜಿ ತೂಗುತ್ತವೆ. ದುಂಡನೆಯ ಚಿಕ್ಕ ಕಿವಿ ಹೊಂದಿವೆ, ಸ್ಲಾಥ್ ಕರಡಿಯಂತೆ ಆಹಾರ ಕ್ರಮವಿದೆ. ಈಶಾನ್ಯ ಭಾರತದ ಪರ್ವತಗಳಿಂದ, ಸುಮತ್ರಾ, ಬೋರ್ನಿಯಾವರೆಗೆ ವಿತರಣೆಗೊಂಡಿವೆ. ಕರಡಿಗಳ ಪಿತ್ತಕೋಶದಿಂದ (Gallbladder) ವಿವಿಧ ಔಷದ ತಯಾರಿಸಲು ಹಾಗು ಚರ್ಮಕ್ಕಾಗಿ ಇವುಗಳ ಹತ್ಯೆ ಮಾಡಲಾಗುತ್ತಿದೆ, ಆವಾಸ ನಾಶವೂ ಇವುಗಳನ್ನು ಅಪಾಯಕ್ಕೆ ಸಿಲುಕಿಸಿವೆ, ಕರಡಿಗಳೆಲ್ಲವೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ರಕ್ಷಣೆಗೊಳಪಟ್ಟಿವೆ.
-ನಾಗರಾಜ್ ಬೆಳ್ಳೂರು, ಪರಿಸರ ಮತ್ತು ವನ್ಯಜೀವಿ ಬರಹಗಾರ
ನಿಸರ್ಗ ಕನ್ಜರ್ವೇಶನ್ ಟ್ರಸ್ಟ್








