ಯಶಸ್ಸಿನ ಹಿಂದೆ ಅಂಜು ಬಾಬಿ ಜಾರ್ಜ್ ಹೇಳಿಕೊಂಡ ಆ ನೋವಿನ ವಿಚಾರವೇನು..?
ಅಂಜು ಬಾಬಿ ಜಾರ್ಜ್… ಎರಡು ಮೂರು ದಶಕಗಳ ಹಿಂದೆ ಸದಾ ಸುದ್ದಿಯಲ್ಲಿರುತ್ತದ್ದ ಹೆಸರು. ಯಾಕಂದ್ರೆ ಭಾರತೀಯ ಅಥ್ಲೆಟಿಕ್ಸ್ ರಂಗಕ್ಕೆ ಹೊಸ ಮೆರಗನ್ನು ತಂದುಕೊಟ್ಟ ಕ್ರೀಡಾಪಟು ಅಂಜು ಬಾಬಿ ಜಾರ್ಜ್.
100 ಮೀಟರ್ ಹರ್ಡಲ್ಸ್, ಹೆಪ್ಟಥ್ಲಾನ್, ಟ್ರಿಪಲ್ ಜಂಪ್, ಲಾಂಗ್ ಜಂಪ್ ಸ್ಪರ್ಧೆಗಳಲ್ಲಿ ಭಾಗಿಯಾಗಿ ಯಶಸ್ಸು ಸಾಧಿಸಿದ್ದ ಅಂಜು ಕೊನೆಗೆ ಯಶಸ್ಸಿನ ಉತ್ತುಂಗಕ್ಕೇರಿದ್ದು ಲಾಂಗ್ ಜಂಪ್ ಸ್ಪರ್ಧೆಯಲ್ಲಿ.
2001ರಲ್ಲಿ ಲಾಂಗ್ ಜಂಪ್ ಸ್ಪರ್ಧೆಯಲ್ಲಿ 6.74 ಮೀಟರ್ ದೂರ ಜಿಗಿದು ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದರು. ನಂತರ 2003ರ ಪ್ಯಾರಿಸ್ ವಿಶ್ವ ಚಾಂಪಿಯನ್‍ಶಿಪ್ ಅಥ್ಲೆಟಿಕ್ಸ್ ನಲ್ಲಿ 6.70 ಮೀಟರ್ ದೂರ ಜಿಗಿದು ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಹಾಗೇ 2003ರ ಆಫ್ರೋ ಏಷ್ಯನ್ ಗೇಮ್ಸ್ ನಲ್ಲಿ 6.83 ದೂರ ಜಿಗಿದು ಚಿನ್ನದ ಪದಕ ಜೊತೆಗೆ ತನ್ನ ಜೀವನದ ಶ್ರೇಷ್ಠ ಸಾಧನೆಯನ್ನು ಮಾಡಿದ್ದರು.
ಕಾಮನ್‍ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್, ಒಲಿಂಪಿಕ್ಸ್ ಸೇರಿದಂತೆ ಹಲವು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಭಾರತದ ತ್ರಿವರ್ಣ ಧ್ವಜವನ್ನು ರಾರಾಜಿಸುವಂತೆ ಮಾಡಿರುವ ಭಾರತದ ಹೆಮ್ಮೆಯ ಅಥ್ಲೀಟ್ ಅಂಜು ಬಾಬಿ ಜಾರ್ಜ್.
ಅಂಜು ಬಾಬಿ ಜಾರ್ಜ್ ಸಾಧನೆಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳು ಒಲಿದು ಬಂದಿವೆ, ಅಥೇನ್ಸ್ ಮತ್ತು ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಭಾಗಿಯಾಗಿರುವ ಹೆಮ್ಮೆ ಕೂಡ ಅಂಜು ಬಾಬಿ ಜಾರ್ಜ್ ಅವರದ್ದು.
ಆದ್ರೆ ಇದೀಗ ಅಂಜು ಬಾಬಿ ಜಾರ್ಜ್ ತನ್ನ ಕ್ರೀಡಾ ಬದುಕಿನ ನೋವಿನ ಗುಟ್ಟನ್ನು ಬಹಿರಂಗಗೊಳಿಸಿದ್ದಾರೆ. ಈ ವಿಚಾರವನ್ನು ಕೇಳಿದಾಗ ಒಂದು ಕ್ಷಣ ಅಚ್ಚರಿಯಾಗಬಹುದು. ನೋವಿನಲ್ಲೂ ಇಷ್ಟೆಲ್ಲಾ ಸಾಧನೆ ಮಾಡಿದ್ರಲ್ಲ ಅಂತ ಹೆಮ್ಮೆ ಪಡಬೇಕಾಗುತ್ತದೆ. ಅಷ್ಟಕ್ಕೂ ಅಂಜು ಬಾಬಿ ಜಾರ್ಜ್ ಅವರ ಕ್ರೀಡಾ ಬದುಕಿನಲ್ಲಿ ಕಾಡಿದ್ದ ನೋವು ಯಾವುದು ಅಂದಾಗ ಅವರು ಹೇಳಿಕೊಂಡಿದ್ದು ತನ್ನ ಮೂತ್ರಪಿಂಡದ ವಿಚಾರವನ್ನು.
ಹೌದು, ಅಂಜು ಬಾಬಿ ಜಾರ್ಜ್ ಅವರನ್ನು ನೋಡಿದಾಗ ಅವರು ಆರೋಗ್ಯವಾಗಿದ್ದಾರೆ. ಅವರಿಗೆ ಆರೋಗ್ಯದ ತೊಂದರೆ ಏನು ಇಲ್ಲ ಅಂತ ಅಂದುಕೊಳ್ಳಬಹುದು. ಆದ್ರೆ ಅಂಜು ಜಾರ್ಜ್ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದರು. ಹೀಗಾಗಿ ಒಂದು ಕಿಡ್ನಿಯನ್ನಿಟ್ಟುಕೊಂಡೇ ಅವರು ಕ್ರೀಡೆಯಲ್ಲಿ ಮತ್ತು ಜೀವನದದಲ್ಲಿ ಯಶಸ್ಸು ಸಾಧಿಸಿದ್ದಾರೆ.
ನೀವು ನಂಬುವುದಾದ್ರೆ ನಂಬಿ ಇಲ್ಲ ಬಿಟ್ಟು ಬಿಡಿ.. ಒಂದೇ ಕಿಡ್ನಿಯನ್ನಿಟ್ಟುಕೊಂಡು ವಿಶ್ವದ ಅಗ್ರಸ್ಥಾನಕ್ಕೇರಿದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಒಬ್ಬಳು. ಈ ವಿಚಾರದಲ್ಲಿ ನಾನು ಅದೃಷ್ಟಶಾಲಿ. ಹಾಗೇ ಇದನ್ನು ಕೋಚ್ ನ ಮ್ಯಾಜಿಕ್ ಅಂತೀರಾ.. ಪ್ರತಿಭೆ ಅಂತೀರಾ ಅಂತ ಅಂಜು ಬಾಬಿ ಜಾರ್ಜ್ ಅವರು ಟ್ವಿಟ್ ಮಾಡಿದ್ದಾರೆ.
ಸಹಜವಾಗಿ ನಾನು ಆರೋಗ್ಯವಾಗಿದ್ದೇನೆ. ಹಾಗಾಗಿ ನಾನು ಯಶಸ್ಸು ಸಾಧಿಸಿದ್ದೇನೆ ಅಂತ ಎಲ್ಲರು ತಿಳಿದುಕೊಂಡಿದ್ದಾರೆ. ಆದ್ರೆ ನನ್ನ ಯಶಸ್ಸು ಬಂದಿರೋದು ಕಷ್ಟ ಹಾಗೂ ನೋವಿನಲ್ಲೇ. ಹೀಗಾಗಿ ನನ್ನ ಕ್ರೀಡಾ ಬದುಕು ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಬಹುದು ಅನ್ನೋ ಕಾರಣಕ್ಕೆ ಈ ವಿಚಾರವನ್ನು ಹಂಚಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
2003ರ ಪ್ಯಾರೀಸ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಸ್ ಗೆ ರೆಡಿಯಾಗುತ್ತಿದೆ. ಕೇವಲ 20 ದಿನಗಳಲ್ಲಿ ನಾನು ಎಲ್ಲಾ ಸಮಸ್ಯೆಗಳಿಂದ ಹೊರಬಂದಿದ್ದೇನೆ. ಇದು ನನಗೆ ಆಘಾತಕಾರಿ ಸುದ್ದಿಯಾಗಿತ್ತು. ಆದ್ರೆ ಬಾಬಿ ಅವರು ನನಗೆ ಪ್ರೇರಣೆ ನೀಡಿದ್ದರು. ಹೀಗಾಗಿ ಯಶಸ್ಸು ಸಾಧಿಸಲು ಸಾಧ್ಯವಾಯ್ತು. ನನಗೆ ಏನಾದ್ರೂ ತೊಂದರೆಯಾಗುತ್ತಿದ್ರೆ ಪತಿ ಬಾಬಿ ಅವರು ಕಿಡ್ನಿ ಕೂಡ ಕೊಡುತ್ತಿದ್ದರು. ಅಂತಿಮವಾಗಿ ಪ್ಯಾರಿಸ್ ನಲ್ಲಿ ಕಂಚಿನ ಪದಕ ಗೆಲ್ಲಲು ಕೂಡ ಸಫಲನಾದೆ ಎಂದು ಅಂಜು ಬಾಬಿ ಜಾರ್ಜ್ ಹೇಳಿಕೊಂಡಿದ್ದಾರೆ.
ಅಂಜು ಬಾಬಿ ಜಾರ್ಜ್ ಅವರ ಟ್ವಿಟ್ ಗೆ ಕೇಂದ್ರ ಕ್ರೀಡಾ ಸಚಿವ ಕಿರೇನ್ ರಿಜ್ಜು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಂಜು ನಿಮ್ಮ ಸಾಧನೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಇದು ನಿಮ್ಮ ಕಠಿಣ ಶ್ರಮ, ಬದ್ಧತೆಯ ಜೊತೆಗೆ ತರಬೇತುದಾರರು ಸಹಾಯವೂ ಇದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಅಂಜು ಬಾಬಿ ಜಾರ್ಜ್ ಹಲವು ಯುವ ಅಥ್ಲೀಟ್ ಗಳಿಗೆ ಸ್ಪೂರ್ತಿಯಾಗಿದ್ದಾರೆ.







