ಮುಸ್ಲಿಂ ನೆಲೆಸಿರುವ ಜಾಗದಲ್ಲಿ ಅಣ್ಣಮ್ಮ ಮೆರವಣಿಗೆ | ದಾರಿ ಬದಲಾವಣೆ ಮಾಡುವಂತೆ ಮನವಿ
ಬೆಂಗಳೂರು: ಏಪ್ರಿಲ್ 23 ಶನಿವಾರ ರಾತ್ರಿ 8ಕ್ಕೆ ನಡೆಯುವ ಅಣ್ಣಮ್ಮ ಮೆರವಣಿಗೆಯ ದಾರಿಯನ್ನು ಬದಲಾವಣೆ ಮಾಡಿ ಎಂದು ವ್ಯಕ್ತಿಯೊಬ್ಬರು ಬೆಂಗಳೂರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಯಲೇಚನಹಳ್ಳಿಯ ಬಿಬಿಎಂಪಿಯ ವಾರ್ಡ್ ಬಿಜೆಪಿ ಸದಸ್ಯ ಬಾಲಕೃಷ್ಣ ಅವರ ನೇತೃತ್ವದಲ್ಲಿ ಈ ಮೆರವಣಿಗೆ ಆಯೋಜನೆ ಮಾಡಿದ್ದಾರೆ. ಈ ಮೆರವಣಿಗೆ ಮಾರ್ಗವನ್ನು ಬದಲಾವಣೆ ಮಾಡುವಂತೆ ಗುಲಾಬ್ ಪಾಶಾ ಎಂಬವರು ಬೆಂಗಳೂರು ದಕ್ಷಿಣ ಡಿಸಿಪಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಮನಿವಯಲ್ಲಿ: ಏಪ್ರಿಲ್ 23 ಶನಿವಾರ ರಾತ್ರಿ 8 ಗಂಟೆಗೆ ಹಿಂದೂ ಸಂಘಟನೆ ಅಣ್ಣಮ್ಮ ದೇವಿ ಮೆರವಣಿಗೆಯನ್ನು ಆಯೋಜಿಸಿದೆ. ಇಲ್ಲಿಯವರೆಗೆ ಅಣ್ಣಮ್ಮ ದೇವಿ ಮೆರವಣಿಗೆ ಆಯೋಜನೆ ಆಗಿರಲಿಲ್ಲ. ಮೊದಲ ಬಾರಿಗೆ ನಡೆಯುತ್ತಿರುವ ಈ ಮೆರವಣಿಗೆ ಮುಸ್ಲಿಮ್ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಫಯಾಜ್‌ಬಾದ್ ಮತ್ತು ಕನಕ ನಗರದಲ್ಲಿ ಸಾಗಲಿದೆ. ಕರ್ನಾಟಕ ಮತ್ತು ಭಾರತದ ಹಲವು ಭಾಗದಲ್ಲಿ ಕೋಮು ಸಾಮಾರಸ್ಯಕ್ಕೆ ಧಕ್ಕೆ ಆಗುತ್ತಿರುವ ಹಿನ್ನೆಲೆಯಲ್ಲಿ ನಮಗೆ ಬಹಳ ಹೆದರಿಕೆ ಆಗುತ್ತಿದೆ.
ಮೆರವಣಿಗೆ ಸಾಗುವ ಜಾಗದಲ್ಲಿ ಮಸೀದಿ ಇದೆ. ಅಷ್ಟೇ ಅಲ್ಲದೇ ರಂಜಾನ್ ಪ್ರಾರ್ಥನೆ ಸಹ ನಡೆಯುತ್ತಿದೆ. ಹೀಗಾಗಿ ಈ ಕೂಡಲೇ ಫಯಾಜ್‌ಬಾದ್ ಮತ್ತು ಕನಕ ನಗರದಲ್ಲಿ ಸಾಗುವ ಮೆರವಣಿಗೆ ದಾರಿಯನ್ನು ಬದಲಾವಣೆ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ಮನವಿ ಮಾಡಲಾಗಿದೆ.
ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಜಾಗದಲ್ಲಿ ಅಣ್ಣಮ್ಮ ದೇವಿ ಮೆರವಣಿಗೆ ಸಾಗಲಿದೆ. ರಾತ್ರಿ ಎಂಟು ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮೆರವಣಿಗೆ ನಡೆಯಲಿದೆ. ಸೂಕ್ಷ್ಮ ಪ್ರದೇಶದಲ್ಲಿ ಮೆರವಣಿಗೆ ನಡೆಯುತ್ತಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಿ ಎಂದು ಜನಾಧಿಕಾರ ಸಂಘರ್ಷ ಪರಿಷತ್ ಉಪಾಧ್ಯಕ್ಷ ಅದರ್ಶ ಅಯ್ಯರ್ ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಿದ್ದಾರೆ.