ಹಾವೇರಿ: ವಿಕಲಾಂಗ ಮಗನನ್ನು ನಿಂದಿಸಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಅಣ್ಣನ ಮಗನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಮಲಗುಂದ ಗ್ರಾಮದಲ್ಲಿ ನಡೆದಿದ್ದು, ಯಲ್ಲಪ್ಪ ದೊಡ್ಡಕೋವಿ ಕೊಲೆಯಾಗಿರುವ ವ್ಯಕ್ತಿ. ಪಕ್ಕಿರಪ್ಪ ದೊಡ್ಡಕೋವಿ ಆರೋಪಿಯಾಗಿದ್ದು, ಈತ ಕೊಲೆಯಾದ ವ್ಯಕ್ತಿಗೆ ಚಿಕ್ಕಪ್ಪನಾಗಬೇಕು. ಕೊಲೆಯಾಗಿರುವ ವ್ಯಕ್ತಿಗೆ ಮದುವೆಯಾಗಿ ಮಕ್ಕಳಿದ್ದರೂ ಏಕಾಂಗಿಯೇ ಗ್ರಾಮದಲ್ಲಿ ವಾಸಿಸುತ್ತಿದ್ದ. ಆದರೆ, ಚಿಕ್ಕಪ್ಪ ಹಾಗೂ ಮಗನ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಇತ್ತೀಚೆಗೆ ಜಗಳ ನಡೆದಿತ್ತು. ಪಕ್ಕೀರಪ್ಪನ ವಿಕಲಾಂಗ ಮಗನನ್ನು ನಿಂದಿಸಿದ್ದಕ್ಕೆ ಆಕ್ರೋಶಗೊಂಡಿದ್ದ. ಇದೇ ವಿಷಯವಾಗಿ ಸೇಡು ತೀರಿಸಿಕೊಳ್ಳುವುದಕ್ಕಾಗಿ ಇಟ್ಟಿಗೆಯಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಗ್ರಾಮದಲ್ಲಿ ಜಾತ್ರೆ ಇರುವ ಹಿನ್ನೆಲೆಯಲ್ಲಿ ಮನೆಯವರೆಲ್ಲ ದೇವಸ್ಥಾನಕ್ಕೆ ಹೋಗಿದ್ದನ್ನು ಗಮನಿಸಿ, ಕಂಠಪೂರ್ತಿ ಕುಡಿದು ಯಲ್ಲಪ್ಪನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ನಂತರ ಜಾತ್ರೆಯ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.








