ಗರ್ಭಿಣಿ ಆನೆಯ ಹತ್ಯೆಯ ಬೆನ್ನಲ್ಲೇ ದುಷ್ಕರ್ಮಿಗಳಿಂದ ಇನ್ನೊಂದು ಕೃತ್ಯ

ಗರ್ಭಿಣಿ ಆನೆಯ ಹತ್ಯೆಯ ಬೆನ್ನಲ್ಲೇ ದುಷ್ಕರ್ಮಿಗಳಿಂದ ಇನ್ನೊಂದು ಕೃತ್ಯ

ಚಿತ್ತೂರು, ಜೂನ್ 30: ಇತ್ತೀಚೆಗೆ ಕೇರಳದಲ್ಲಿ ಸಿಡಿಮದ್ದು ತುಂಬಿಸಿಟ್ಟಿದ್ದ ಅನಾನಾಸ್ ತಿಂದು ಗರ್ಭಿಣಿ ಆನೆ ಹತ್ಯೆಗೀಡಾದ ಪ್ರಕರಣ ವರದಿಯಾಗಿತ್ತು, ಇದರ ಬೆನ್ನಲ್ಲೇ ಸಿಡಿಮದ್ದು ತುಂಬಿಸಿದ ಪ್ಯಾಕ್ ಅನ್ನು ಚೆಂಡಿನಾಕೃತಿಯಲ್ಲಿ ಸುತ್ತಿಟ್ಟಿದ್ದ ದುಷ್ಕರ್ಮಿಗಳ ಕೃತ್ಯದಿಂದ ದನದ ಬಾಯಿ ಛಿದ್ರವಾದ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ವರದಿಯಾಗಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಕೋಗಿಲೇರು ಗ್ರಾಮದ ಪೇಡಾ ಪಂಜಾನಿ ಬ್ಲಾಕ್ ಪ್ರದೇಶದಲ್ಲಿನ ಗೋ ಶಾಲೆಯಲ್ಲಿದ್ದ ದನವೊಂದು ಸಮೀಪದ ಕಾಡಿನಲ್ಲಿ ಮೇಯುತ್ತಿತ್ತು. ಆ ಸಮಯದಲ್ಲಿ ಚೆಂಡಿನಾಕೃತಿಯಲ್ಲಿ ಸ್ಫೋಟಕಗಳನ್ನು ತುಂಬಿಸಿ ಇಟ್ಟಿದ್ದನ್ನು ಆಹಾರ ಎಂದು ಪರಿಗಣಿಸಿ ದನ ತಿಂದಿದೆ. ಆಹಾರ ತಿಂದ ಪರಿಣಾಮ ಸ್ಪೋಟಕ ಬಾಯಿಯೊಳಗೆ ಸ್ಫೋಟಗೊಂಡಿರುವುದಾಗಿ ಪೊಲೀಸ್ ಇನ್ಸ್ ಪೆಕ್ಟರ್ ಲೋಕೇಶ್ ರೆಡ್ಡಿ ತಿಳಿಸಿದ್ದಾರೆ.

ಸ್ಪೋಟಕ ಸಿಡಿದ ಪರಿಣಾಮ ದೊಡ್ಡ ಶಬ್ದವೊಂದು ಕೇಳಿಸಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯ ಜನರು ಘಟನಾ ಸ್ಥಳಕ್ಕೆ ಹೋಗಿ ನೋಡಿದಾಗ ದನದ ಕೆಳದವಡೆ ಛಿದ್ರವಾಗಿ ಬಾಯಲ್ಲಿ ರಕ್ತ ಸೋರುತ್ತಿತ್ತು. ತಕ್ಷಣವೇ ದನವನ್ನು ಗೋ ಶಾಲೆಗೆ ತಂದು ಪ್ರಥಮ ಚಿಕಿತ್ಸೆ ಮಾಡಿಸಿರುವುದಾಗಿ ವರದಿಗಳು ತಿಳಿಸಿವೆ. ಗಂಭೀರವಾಗಿ ಗಾಯಗೊಂಡಿರುವ ದನವನ್ನು ಬಳಿಕ ತಿರುಪತಿಯಲ್ಲಿರುವ ಸರ್ಕಾರಿ ಗೋ ಆಸ್ಪತ್ರೆಗೆ ದಾಖಲಿಸಿದ್ದು, ಸೋಮವಾರ ಸರ್ಜರಿ ನಡೆಸಲಾಗಿದೆ ಎಂದು ಇನ್ಸ್ ಪೆಕ್ಟರ್ ರೆಡ್ಡಿ ತಿಳಿಸಿದ್ದಾರೆ.

ಗೋ ಮಾತಾ ಪೀಠಂನ ಅರ್ಜುನ್ ರೆಡ್ಡಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಗಾಯಗೊಂಡಿರುವ ದನದ ಸ್ಥಿತಿ ತುಂಬಾ ಗಂಭೀರವಾಗಿದ್ದು, ಕೆಳ ದವಡೆ ಸಂಪೂರ್ಣ ಛಿದ್ರವಾಗಿದೆ. ಸರ್ಜರಿ ನಡೆಸಿದ್ದರೂ ಕೆಳ ದವಡೆ ಮೊದಲಿನ ಸ್ಥಿತಿಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸದ್ಯ ದನ ಜೀವಂತವಾಗಿದ್ದು, ದ್ರವ ಆಹಾರ ಸೇವಿಸುತ್ತಿದೆ. ಮತ್ತೆ ಮೊದಲಿನಂತೆ ಹುಲ್ಲು ತಿನ್ನಲು ಸಾಧ್ಯವಾಗುತ್ತದೆಯೇ ಎಂಬ ಬಗ್ಗೆ ಈಗ ಏನೂ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಕಾಡು ಹಂದಿಯನ್ನು ಕೊಲ್ಲಲು ಸ್ಥಳೀಯರು ಈ ಸ್ಫೋಟಕ ಇಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ತಿನ್ನುವ ಆಹಾರದೊಳಗೆ ಸಲ್ಫರ್ ಹಾಗೂ ಇತರ ವಸ್ತುಗಳನ್ನು ಹಾಕಿ ಸ್ಫೋಟಕ ತಯಾರಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.ಈಗಾಗಲೇ ಕೆಲವು ಶಂಕಿತರನ್ನು ಗುರುತಿಸಿದ್ದು, ಅವರನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಪೊಲೀಸ್ ಇನ್ಸ್ ಪೆಕ್ಟರ್ ಲೋಕೇಶ್ ರೆಡ್ಡಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This