ನೇಪಾಳದ ಆಟಗಾರ ಒಂದೇ ಓವರ್ ನಲ್ಲಿ 6 ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದಾರೆ.
ನೇಪಾಳದ ಆಟಗಾರ ದೀಪೇಂದ್ರ ಸಿಂಗ್ ಐರಿ ಈ ಸಾಧನೆ ಮಾಡಿದ್ದು, ಈ ಮೂಲಕ ಟಿ20 ಇತಿಹಾಸದಲ್ಲಿ ಈ ದಾಖಲೆ ಬರೆದ ಮೂರನೇ ಆಟಗಾರನಾಗಿದ್ದಾರೆ. ಒಮಾನ್ ನ ಎಐ ಅಮರತ್ ಮೈದಾನದಲ್ಲಿ ನಡೆದ ಎಸಿಸಿ ಪುರುಷರ ಪ್ರೀಮಿಯರ್ ಕಪ್ ನ ಏಳನೇ ಪಂದ್ಯದಲ್ಲಿ ಖತಾರ್ ಹಾಗೂ ನೇಪಾಳ ತಂಡಗಳ ಮಧ್ಯೆ ಫೈಟ್ ನಡೆದಿತ್ತು. ಈ ಪಂದ್ಯದ 20ನೇ ಓವರ್ ಎಸೆದ ಕ್ರಮಾನ್ ಖಾನ್ 6 ಸಿಕ್ಸರ್ ಬಿಟ್ಟುಕೊಟ್ಟರು.
ಟಿ20 ಕ್ರಿಕೆಟ್ ನಲ್ಲಿ ಇದಕ್ಕೂ ಮುನ್ನ ಯುವರಾಜ್ ಸಿಂಗ್ ಹಾಗೂ ಕೀರನ್ ಪೊಲಾರ್ಡ್ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ್ದ ಸಾಧನೆ ಮಾಡಿದ್ದರು. ಭಾರತ ತಂಡದ ಯುವಿ 2007 ರಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಎಸೆದ ಒಂದೇ ಓವರ್ ನಲ್ಲಿ 6 ಸಿಕ್ಸರ್ ಸಿಡಿಸುವ ಮೂಲಕ ವಿಸ್ವ ದಾಖಲೆ ನಿರ್ಮಿಸಿದ್ದರು. ನಂತರ ಕೀರನ್ ಪೊಲೀರ್ಡ್ 6 ಸಿಕ್ಸರ್ ಸಿಡಿಸಿದ್ದರು. ಈ ಪಂದ್ಯದಲ್ಲಿ 21 ಎಸೆತಗಳನ್ನು ಎದುರಿಸಿದ ದೀಪೇಂದ್ರ ಸಿಂಗ್ ಐರಿ 7 ಭರ್ಜರಿ ಸಿಕ್ಸ್ ಹಾಗೂ 3 ಬೌಂಡರಿಗಳೊಂದಿಗೆ ಅಜೇಯ 64 ರನ್ ಗಳಿಸಿದ್ದಾರೆ. ಪರಿಣಾಮವಾಗಿ ನೇಪಾಳ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತ್ತು. ಖತಾರ್ ತಂಡ ಪ್ರತಿಯಾಗಿ 178 ರನ್ ಗಳಿಸಿ ಸೋಲೋಪ್ಪಿಕೊಂಡಿದೆ.