ಬೆಳಗಾವಿ: ಇತ್ತೀಚೆಗಷ್ಟೇ ಮಹಿಳೆಯೊಬ್ಬರನ್ನು ಅರೆಬೆತ್ತಲಾಗಿ ಮಾಡಿ ಹಲ್ಲೆ ಮಾಡಿರುವ ಸುದ್ದಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಅದು ಕೂಡ ಬೆಳಗಾವಿಯಲ್ಲಿಯೇ ನಡೆದಿರುವುದಕ್ಕೆ ಬೇಸರ ವ್ಯಕ್ತವಾಗುತ್ತಿದೆ.
ಮಹಿಳೆಯನ್ನು ಎರಡೆರಡು ಬಾರಿ ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯು 20 ಜನರ ವಿರುದ್ಧ ಬೆಳಗಾವಿ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜಮೀನು ಒತ್ತುವರಿ ಮಾಡಿದ್ದನ್ನು ಪ್ರಶ್ನಿಸಿ ಮಹಿಳೆ ಕೋರ್ಟ್ ಮೆಟ್ಟಿಲು ಏರಿದ್ದರು. ಮಹಿಳೆಯ ಮಾವ ಜಮೀನಿನಲ್ಲಿ ಮೇವಿನ ಬಣವಿ ಒಟ್ಟಲು ನೀಡಿದ್ದರು. 6 ಎಕರೆ ಭೂಮಿ ಆಕೆಯ ಮಾವನ ಹೆಸರಿನಲ್ಲಿತ್ತು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಈ ಜಮೀನು ಹೊಂದಿದ್ದರು. ಆರೋಪಿಗಳು ಮಹಿಳೆಯನ್ನು ಹೊಡೆದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಿಗಡಿ ಗ್ರಾಮದ ಗ್ರಾಪಂ ಅಧ್ಯಕ್ಷೆಯ ಪತಿ ಸೇರಿ ಒಟ್ಟು 20 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ನನ್ನ ಮೇಲೆ 25 ರಿಂದ 30 ಜನ ಹಲ್ಲೆ ಮಾಡಿದ್ದಾರೆ. ನನ್ನ ಕೂದಲು ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಖಾಸಗಿ ಅಂಗಾಂಗಗಳನ್ನು ಮುಟ್ಟಿ ಹಿಂಸೆ ಕೊಟ್ಟಿದ್ದಾರೆ ಎಂದು ಮಹಿಳೆ ದೂರು ಸಲ್ಲಿಸಿದ್ದಾರೆ.








