ಮಡಿಕೇರಿ : 10 ದಿನಗಳ ನಂತರ ಬ್ರಹ್ಮಗಿರಿ ಬೆಟ್ಟದಲ್ಲಿ ಇಂದು ಮತ್ತೊಂದು ಶವ ಪತ್ತೆಯಾಗಿದೆ. ಆದ್ರೆ ಪತ್ತೆ ಹಚ್ವಲು ಸಾಧ್ಯವಾಗದಂತಹ ಸ್ಥಿತಿಯಲ್ಲಿ ಮೃತದೇಹ ನಾಗತೀರ್ಥ ಸಮೀಪ ಪತ್ತೆಯಾಗಿದೆ. ಅರ್ಚಕ ನಾರಾಯಣಾಚಾರ್ ಪತ್ತೆಯಾದ ಸ್ಥಳದಿಂದ ಬಹುದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಆದರೆ ಮೃತದೇಹ ಹೆಣ್ಣು, ಗಂಡು ಎಂದು ಗುರುತಿಸಲಾಗದಷ್ಟು ಕೊಳೆತಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಸಚಿವ ಸೋಮಣ್ಣ ಮತ್ತು ಸಂಸದ ಪ್ರತಾಪ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ದೇಹ ಪತ್ತೆ ಬಗ್ಗೆ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದು, ಕೊಡಗಿನ ತಲಕಾವೇರಿಯಲ್ಲಿ ಭೂಕುಸಿತ ಸಂಭವಿಸಿ ಕಣ್ಮರೆಯಾಗಿದ್ದ ಐವರ ಪೈಕಿ ಪ್ರಸ್ತುತ ಮೂವರ ಮೃತದೇಹಗಳು ಸಿಕ್ಕಿದೆ. ಹತ್ತು ದಿನಗಳ ಬಳಿಕ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ. ನಾರಾಯಣ ಆಚಾರ್ ಮೃತದೇಹ ಪತ್ತೆಯಾದ ಜಾಗದ ಅನತಿ ದೂರದಲ್ಲಿ ಪತ್ತೆಯಾಗಿದೆ. ಆದರೆ ಅದು ಮಹಿಳೆ ಅಥವಾ ಪುರುಷನದೋ ಎಂದು ತಿಳಿಯುತ್ತಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಯಾರದ್ದೆಂದು ತಿಳಿಯಲಿದೆ. ಸಂಜೆ ಶವ ಸಂಸ್ಕಾರ ನಡೆಯಲಿದೆ. ಯಾವುದೇ ಕಾರಣಕ್ಕೂ ಕಾರ್ಯಾಚರಣೆಯನ್ನು ಕೈ ಬಿಡುವುದಿಲ್ಲ. ಎಲ್ಲರ ಮೃತ ದೇಹಗಳನ್ನು ಹೊರ ತಗೆಯೋವರೆಗೂ ಕಾರ್ಯಚರಣೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.