ಮಂಗಳೂರು: ಡ್ರಗ್ಸ್ ಜಾಲದ ಬೆನ್ನು ಹತ್ತಿರುವ ಮಂಗಳೂರು ಸಿಸಿಬಿ ಪೊಲೀಸರು ಮತ್ತೊಬ್ಬ ಡ್ರಗ್ಸ್ ಪೆಡ್ಲರ್‍ನನ್ನು ಬಂಧಿಸಿದ್ದಾರೆ.
ನಟಿ, ನಿರೂಪಕಿ ಅನುಶ್ರೀಗೆ ನೋಟಿಸ್ ನೀಡಲು ಬೆಂಗಳೂರಿಗೆ ಬಂದಿದ್ದ ಮಂಗಳೂರು ಸಿಸಿಬಿ ಪೊಲೀಸರು, ಡ್ರಗ್ಸ್ ಪೆಡ್ಲರ್ ಮಹಮ್ಮದ್ ಶಾಕೀರ್ ಬಂಧಿಸಿ ಕರೆದೊಯ್ದಿದ್ದಾರೆ.

ಇತ್ತೀಚೆಗೆ ಮಂಗಳೂರು ಸಿಸಿಬಿ ಪೊಲೀಸರು ಬಾಲಿವುಡ್ ನಟ ಹಾಗೂ ಡ್ಯಾನ್ಸರ್ ಕಿಶೋರ್ ಶೆಟ್ಟಿ, ಕೊರಿಯೋಗ್ರಾಫರ್ ತರುಣ್ ರಾಜ್‍ನನ್ನು ಬಂಧಿಸಿದ್ದರು. ಇಬ್ಬರೂ ನೀಡಿದ ಮಾಹಿತಿ ಆಧಾರದ ಮೇಲೆ ಬೆಂಗಳೂರಿನಲ್ಲಿದ್ದ ಮಹಮ್ಮದ್ ಶಾಕೀರ್‍ನನ್ನು ಬಂಧಿಸಿದ್ದಾರೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನಯಷ್ಟೇ ನಟಿ ಹಾಗೂ ಅಂಕರ್ ಅನುಶ್ರೀ ಮಂಗಳೂರು ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ವೇಳೆ ನಾನು ಯಾವುದೇ ಡ್ರಗ್ಸ್ ತೆಗೆದುಕೊಳ್ಳುತ್ತಿಲ್ಲ. ನನಗೂ ಡ್ರಗ್ಸ್ ಪೆಡ್ಲರ್‍ಗಳಿಗೂ ಸಂಬಂಧವೇ ಇಲ್ಲ ಎಂದು ಅನುಶ್ರೀ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಮತ್ತೊಬ್ಬ ಡ್ರಗ್ಸ್ ಪೆಡ್ಲರ್ ಸೆರೆಯಾಗಿರುವುದು ಮುಂದಿನ ದಿನಗಳಲ್ಲಿ ನಿರೂಪಕಿ ಅನುಶ್ರೀಗೆ ಕಂಟಕವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.








