ಮತ್ತೊಂದು ಪಾದಯಾತ್ರೆ ಸುಳಿವು ಕೊಟ್ಟ ಕಾಂಗ್ರೆಸ್ Saaksha Tv
ಬೆಂಗಳೂರು: ಮೇಕೆದಾಟು ಯೋಜನೆ ಅಗ್ರಹಿಸಿ ಕರ್ನಾಟಕ ಕಾಂಗ್ರೇಸ್ ನಾಯಕರು ಪಾದಯಾತ್ರೆ ಪ್ರಾರಂಭಿಸಿತ್ತು. ಆದರೆ ಕೊರೊನಾ ಕಾರಣದಿಂದ ಪಾದಯಾತ್ರೆಯನ್ನು ಮೊಟಕುಗೊಳಿಸಿತ್ತು. ಈಗ ಈ ಪಾದಯಾತ್ರೆ ಜೊತೆಗೆ “ಮಹದಾಯಿ ಪಾದಯಾತ್ರೆ” ಪ್ರಾರಂಭಿಸುವುದಾಗಿ ವಿಕ್ಷಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಮಹದಾಯಿ ಯೋಜನೆ ಆಗ್ರಹಿಸಿ ಮೇಕೆದಾಟು ಪಾದಯಾತ್ರೆ ಮಾದರಿಯಲ್ಲಿ ಮಹದಾಯಿ ಪಾದಯಾತ್ರೆ ಮಾಡಲಾಗುತ್ತದೆ. ಮಹದಾಯಿ ಯೋಜನೆ ಅನುಷ್ಠಾನಗೊಳಿಸುವ ಜೊತೆಗೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿ ಹೋರಾಟ ಮಾಡುತ್ತೇವೆ. ಈ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮೇಕೆದಾಟು ಪಾದಯಾತ್ರೆಯನ್ನು ಹತ್ತಿಕ್ಕುವ ದೃಷ್ಟಿಯಿಂದ ವೀಕೆಂಡ್ ಕರ್ಫ್ಯೂ ಜಾರಿಗೆ ಮಾಡಿದ್ದರು. ನಮ್ಮ ಪಕ್ಷದ ಪಾದಯಾತ್ರೆಯಿಂದ ಕೊರೊನಾ ಹರಡಿಲ್ಲ. ಸಿಎಂ ಬೊಮ್ಮಾಯಿ, ಆರ್. ಅಶೋಕಗೆ ಕೊರೊನಾ ತಗಲಿದ್ದು ನಮ್ಮಿಂದನಾ ಎಂದು ಪ್ರಶ್ನಿಸಿದರು.
ಅಲ್ಲದೇ ಮಹದಾಯಿ 3.5 ಟಿಎಂಸಿ ನೀರು ನಮಗೆ ಸಾಕಾಗುವುದಿಲ್ಲ. ನಮಗೆ 7.5 ಟಿಎಂ.ಸಿ ನೀರು ಬೇಕು. ಹೀಗಾಗಿ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಮಹದಾಯಿ ಪಾದಯಾತ್ರೆ ಮಾಡುತ್ತೇವೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂ. ಬಿ ಪಾಟೀಲ್ ಮಾತನಾಡಿದ್ದಾರೆ.
ಮಹದಾಯಿ ಯೋಜನೆ ಅನುಷ್ಠಾನದಲ್ಲಿ 5 ಜಿಲ್ಲೆಗಳ ಪ್ರಶ್ನೆ ಇದೆ. ಮಹದಾಯಿ ನೀರಿನಿಂದ 5 ಜಿಲ್ಲೆಗಳಲ್ಲಿ ಸಂಪೂರ್ಣ ನೀರಾವರಿ ಆಗುತ್ತದೆ. ಖಾನಾಪುರಕ್ಕೆ ಕನಿಷ್ಠ 5 ಟಿಎಂಸಿಯಾದರು ನೀರು ಬೇಕು. ಈ ಯೋಜನೆ ಅನುಷ್ಠನ ಆಗ್ರಹಿಸಿ ಪಾದಯಾತ್ರೆ ಮಾಡಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಅಧಿಕೃತ ನಿಲುವು ತೆಗೆದುಕೊಂಡಿದ್ದಾರೆ. ಈ ಕುರಿತು ಪಕ್ಷದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಎಂ. ಬಿ.ಪಾಟೀಲ್ ಹೇಳಿದರು.