ನೆಟ್ಟಾಲ ಮುತ್ತಪ್ಪ ರೈ… ಇನ್ನಿಲ್ಲ. ಇನ್ನೇನು ಇದ್ರೂ ಅವರ ನೆನಪು ಮಾತ್ರ. ರೈ ಬದುಕಿನ ಹಾದಿಯ ಬಗ್ಗೆ ಯಾರು ಏನು ಬೇಕಾದ್ರೂ ಹೇಳಲಿ.. ಎಷ್ಟು ಬೇಕಾದ್ರೂ ಟೀಕಿಸಲಿ.. ಪರಮ ಶತ್ರುಗಳು ಎಷ್ಟು ಬೇಕಾದ್ರೂ ಬೈಯಲಿ… ಜೀವಕ್ಕೆ ಹೆದರಿ ಪೊಲೀಸರಿಗೆ ಶರಣಾದ್ರೂ ಅಂತ ಬೇಕಾದ್ರೂ ಅನ್ನಲಿ.. ಎಷ್ಟೋ ಜನರ ಜೀವ ತೆಗೆದ ಪಾಪಿ ಅಂತನೂ ಕರೆಯಲಿ…ಹೆದರಿಸಿ, ಬೆದರಿಸಿ ದುಡ್ಡು ಸಂಪಾದನೆ ಮಾಡಿ ದೌಲತ್ತು ನಡೆಸಿದವ ಅಂತ ಹಿಡಿ ಶಾಪ ಬೇಕಾದ್ರೂ ಹಾಕಲಿ… ಆದ್ರೆ ಮುತ್ತಪ್ಪ ರೈ ಬದುಕಿನಲ್ಲಿ ಏನೆಲ್ಲಾ ಆಗಿತ್ತು ಎಂಬುದಕ್ಕೆ ನಿಖರವಾದ ಉತ್ತರ ಸಿಕ್ಕಿಲ್ಲ. ಯಾಕಂದ್ರೆ ಮುತ್ತಪ್ಪ ರೈ ಬದುಕ್ಕಿದ್ದಾಗ ಕೂಡ ಎಲ್ಲಾ ಸತ್ಯ ಸಂಗತಿ, ಘಟನೆಗಳನ್ನು ಹೇಳಿಕೊಳ್ಳಲಿಲ್ಲ. ಈಗ ಅದಕ್ಕೆ ಉತ್ತರವೂ ಸಿಗಲ್ಲ. ಅದೇನೂ ಇದ್ರೂ ಮತ್ತಪ್ಪ ರೈ… ಮುತ್ತಪ್ಪ ರೈಯೇ… ಅವರೇ ಹೇಳುವ ಹಾಗೇ ಮತ್ತೊಬ್ಬ ಮುತ್ತಪ್ಪ ರೈ ಹುಟ್ಟುವುದು ಇಲ್ಲ… ಹುಟ್ಟಿ ಬರುವುದೂ ಇಲ್ಲ… ಅದು ಹಂಡ್ರೆಡ್ ಪರ್ಸೆಂಟ್ ನಿಜ ಕೂಡ.
ಅಷ್ಟಕ್ಕೂ ಮುತ್ತಪ್ಪ ರೈ ಭೂಗತ ಲೋಕದ ಪಾತಕಿನೇ ಆಗಿರಬಹುದು… ಅವರಲ್ಲಿ ಮನುಷ್ಯತ್ವದ ಗುಣಗಳು ಇಲ್ಲದೆನೇ ಇರಬಹುದು. ತನ್ನ ಜೀವ ಉಳಿಸಿಕೊಳ್ಳಲು ದುಷ್ಮನ್ಗಳಿಗೆ ಹೆದರಿಸಿ,ಬೆದರಿಸಿ ಕೊಲೆ ಮಾಡಿಸಿಯೂ ಇರಬಹುದು.. ಆದ್ರೆ ಆ ಎಲ್ಲಾ ಪ್ರಕರಣಗಳಿಂದ ಹೇಗೆ ಹೊರಬೇಕು ಅನ್ನೋ ಮಾಸ್ಟರ್ ಮೈಂಡ್ ಅವರಲ್ಲಿತ್ತು.
ಹಾಗೇ ಮುತ್ತಪ್ಪ ರೈ ಸಮಾಜದ ದೃಷ್ಟಿಯಲ್ಲಿ ಕೆಟ್ಟವನಾಗಿದ್ರೂ ಕೆಲವೊಂದು ಒಳ್ಳೆಯ ಗುಣಗಳಿದ್ದವು. ತುಂಬಾನೇ ಸ್ನೇಹ ಜೀವಿ. ಬಹುಶಃ ಇದೇ ಕಾರಣಕ್ಕೆ ಅವರು 68 ವರ್ಷ ಬದುಕಿದ್ದು.
ಹಾಗೇ ನೋಡಿದ್ರೆ, ಪೊಲೀಸರು ಮನಸ್ಸು ಮಾಡಿದ್ರೆ ಯಾವತ್ತೋ ಮುತ್ತಪ್ಪ ರೈ ಎನ್ ಕೌಂಟರ್ ಮಾಡಿಬಿಡಬಹುದಿತ್ತು, ಹಾಗೇ ತನ್ನ ರಕ್ಷಣೆಗೆ ದೊಡ್ಡ ಬೆಂಗಾವಲುಪಡೆಯನ್ನು ಇಟ್ಟುಕೊಂಡಿದ್ರೂ ಅವರನ್ನು ಕೊಲೆ ಮಾಡಲೇಬೇಕು ಅಂದುಕೊಂಡಿದ್ದ ದುಷ್ಮನ್ಗಳು ಯಾವತ್ತೂ ಕೊಲೆ ಮಾಡಿಬಿಡಬಹುದಿತ್ತು. ಆದ್ರೆ ರೈ ಅವರ ಲೆಕ್ಕಚಾರನೇ ಬೇರೆಯದ್ದೇ ಆಗಿತ್ತು. ಅದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಿರಲಿಲ್ಲ. ಬಹುಶಃ ರೈ ತಲೆಬಾಗಿದ್ದು ನಮ್ಮ ದೇಶದ ಕಾನೂನಿಗೆ. (ಅದರಲ್ಲಿ ಪೊಲೀಸ್ ಇಲಾಖೆಯೂ ಬರುತ್ತೆ) ಅದನ್ನು ಬಿಟ್ಟು ಜೀವ ಇರೋ ತನಕ ಯಾರಿಗೂ ತಲೆಬಾಗಲಿಲ್ಲ.
ತಾನು ಹೇಗೆ ಬದುಕಬೇಕೋ ಹಾಗೇ ಬದುಕಿದ್ದರು. ಸಿನಿಮಾ ಶೈಲಿಯಂತೆ ವಾಸ್ತವ ಬದುಕನ್ನು ವರ್ಣರಂಜಿತವಾಗಿಯೇ ಕಳೆದರು. ಅಂತಿಮವಾಗಿ ಮುತ್ತಪ್ಪ ರೈಯವರ ಜೀವ ತೆಗೆದಿರುವುದು ಯಾವ ದುಷ್ಮನ್ ಅಲ್ಲ. ಬದಲಾಗಿ ಮಹಾ ಮಾರಿ ಕ್ಯಾನ್ಸರ್. ನೆಟ್ಟಾಲ -ದೇರ್ಲ ಮನೆಯ ಬಾಬು, ಮುತ್ತಪ್ಪ ರೈ, ಎನ್.ಎಂ,ರೈ, ಎಂ,ಆರ್., ಅಣ್ಣಾನಾಗಿ ಬಿಡದಿಯ ತನ್ನ ಪ್ರೀತಿಯ ತೋಟದಲ್ಲಿ ಮಣ್ಣಾಗಿ ಹೋದ್ರು.
ಅದು ಸರಿ ಸುಮಾರು 90ರ ದಶಕ… ನಮ್ಮೂರು ಪುತ್ತೂರಿನಲ್ಲಿ ಮುತ್ತಪ್ಪ ರೈ ಹೆಸರು ಕೇಳಿದ ತಕ್ಷಣ ಎಲ್ಲರ ಕಿವಿ ನೆಟ್ಟಗಾಗುತ್ತಿತ್ತು. ಪುತ್ತೂರಿನ ಮಾಡಾವುನಲ್ಲಿ ಹುಟ್ಟಿ ಬೆಳೆದ ಹುಡುಗ ದೂರದ ಬೆಂಗಳೂರಿನಲ್ಲಿ ಸದ್ದು ಮಾಡಿದ್ದು ಪಾತಕಲೋಕದಲ್ಲಿ. ವಿಜಯಾ ಬ್ಯಾಂಕ್ ನೌಕರಿ ಬಿಟ್ಟು ಹೊಟೇಲ್ ಉದ್ಯಮಕ್ಕೆ ಎಂಟ್ರಿಯಾಗಿದ್ದ ರೈ ಅವರು ಆಕಸ್ಮಿಕವಾಗಿ ಭೂಗತ ಜಗತ್ತಿಗೆ ಎಂಟ್ರಿಯಾಗಿದ್ದು.
ಆಗಲೇ ಪುತ್ತೂರಿನ ಕೆಲವು ಯುವಕರು ಮುತ್ತಪ್ಪ ರೈ ಜೊತೆ ಸೇರಿಕೊಂಡಿದ್ದರು. ಆಗ ಎಲ್ಲಾ ಊರಿಗೆ ಬಂದಾಗ ನಾವು ಮುತ್ತವಣ್ಣನ ಕಡೆಯವರು ಅನ್ನೋ ಗತ್ತು ಬೇರೆ ಇರುತ್ತಿತ್ತು. ಇನ್ನು ಕೆಲವರು ನಾವು ಮುತ್ತವಣ್ಣನ ಕಡೆಯವರು ಅಂತ ಹೇಳಿಕೊಂಡು ಪೆಟ್ಟು ತಿಂದದ್ದು ಇದೆ. ಇನ್ನೂ ಪುತ್ತೂರು, ಮಂಗಳೂರು ಕಾಲೇಜ್ ಚುನಾವಣೆಗಳಲ್ಲೂ ರೈ ಹೆಸರಿಲ್ಲದೇ ಚುನಾವಣೆ ನಡೆಯುತ್ತಿರಲಿಲ್ಲ. ಅದ್ರಲ್ಲೂ ರಾಕೇಶ್ ಮಲ್ಲಿ, ದಿ. ಸುರೇಶ್ ರೈ ಹೆಸರು ಮುಂಚೂಣಿಯಲ್ಲಿರುತ್ತಿತ್ತು. ಆಗಂತೂ ಉದಯವಾಣಿ ಪೇಪರ್ನಲ್ಲಿ ಮಲ್ಲಿ ಮತ್ತು ದಿ.ಸುರೇಶ್ ರೈ ಜಾಹಿರಾತುಗಳು ರಾರಾಜಿಸುತ್ತಿದ್ದವು.
ನನಗೆ ಮುತ್ತಪ್ಪ ರೈ ಹೆಸರು ಹೊಸದೇನೂ ಆಗಿರಲಿಲ್ಲ. ಅಪ್ಪ, ದೊಡ್ಡಪ್ಪ, ಚಿಕ್ಕಪ್ಪ,ಮಾವಂದಿರ ಜೊತೆ ಬಾಲ್ಯದ ಕೆಲವೊಂದು ದಿನಗಳನ್ನು ಕಳೆದವರು ಮುತ್ತಪ್ಪ ರೈ. ನೆಟ್ಟಾಲ, ದೇರ್ಲದಲ್ಲಿ ನಡೆಯುತ್ತಿದ್ದ ಸಣ್ಣ ಕಂಬಳ (ಕಂಡದ ಕೋರಿ), ಭೂತಕೋಲ ಹಾಗೇ ಮೋಜಿಗಾಗಿ ನಡೆಯುತ್ತಿದ್ದ ಇಸ್ಪೀಟ್ ಆಟದಲ್ಲೂ ಭಾಗಿಯಾಗುತ್ತಿದ್ದರು. ಹಾಗಾಗಿ ಮುತ್ತಪ್ಪ ರೈ ನಮಗೆಲ್ಲಾ ಚಿರಪರಿಚಿತ ಹೆಸರಾಗಿತ್ತು. ಅದ್ರಲ್ಲೂ ಪುತ್ತೂರು ಕಂಬಳ ಅಂದ್ರೆ ಅದು ಮುತ್ತಪ್ಪ ರೈ ಕಂಬಳ ಅಂತನೇ ಫೇಮಸ್. ಅಷ್ಟೊಂದು ಅದ್ದೂರಿಯಾಗಿ ನಡೆಯುತ್ತಿತ್ತು ಪುತ್ತೂರಿನ ಕಂಬಳ.
ಬಹುಶಃ ಅದು 1992-93ನೇ ಇಸವಿ ಇರಬೇಕು. ಪುತ್ತೂರಿನಲ್ಲಿ ಮುತ್ತಪ್ಪ ರೈಯವರು ಓಪನ್ ಜೀಪ್ನಲ್ಲಿ ಮೆರವಣಿಗೆಯಲ್ಲಿ ಬರುತ್ತಿರುವುದನ್ನು ದೂರದಿಂದಲೇ ನೋಡಿದ್ದೆ. ಆದಾದ ನಂತರ ಜಯಂತ್ ರೈ ಕೊಲೆಯಾದಾಗ ಕರಾವಳಿ ಅಲೆ, ಉದಯವಾಣಿ ಪತ್ರಿಕೆಗಳಲ್ಲಿ ಮುತ್ತಪ್ಪ ರೈಯವರ ಪಾತಕಲೋಕದ ಬಗ್ಗೆ ಓದಿದ್ದ ನೆನಪು, ಜೀವಕ್ಕೆ ಜೀವ ಕೊಡುತ್ತಿದ್ದ ಜಯಂತ್ ರೈ ಕೊಲೆಯಾದಾಗ ಮುತ್ತಪ್ಪ ರೈಯವರ ಆತ್ಮಬಲವೇ ಕುಗ್ಗಿಹೊಗಿತ್ತಂತೆ ಅಂತ ಅವರನ್ನು ಹತ್ತಿರದಿಂದ ಬಲ್ಲವರು ಹೇಳ್ತಾರೆ.
ಅದು ನಿಜ ಕೂಡ. ಜಯಂತ್ ರೈ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದ ರೈಗೆ ಬಲಗೈ ಬಂಟನಾಗಿದ್ದರು. ಅವತ್ತಿನ ಸಮಯದಲ್ಲಿ ಪುತ್ತೂರಿನಲ್ಲಿ ಏನೇ ತಕಾರಾರು ನಡೆಯುತ್ತಿದ್ದರೂ ಜಯಂತ್ ರೈ ಹೆಸರು ಕೇಳಿಬರುತ್ತಿತ್ತು. ಯಾಕಂದ್ರೆ ಜಯಂತ್ ಮುತ್ತವಣ್ಣನ ಹುಡುಗ. ಹೀಗಾಗಿ ಅಲ್ಲಿನ ಕಾಲೇಜ್ ಹುಡುಗರು, ಲೋಕಲ್ ರೌಡಿಗಳಿಗೆ ಜಯಂತ್ ರೈ ಪ್ರೀತಿಯ ಜಯಂತಣ್ಣ ಆಗಿದ್ದರು. ಒಂದು ವೇಳೆ ಜಯಂತ್ ರೈ ಕೊಲೆಯಾಗದೇ ಇರುತ್ತಿದ್ರೆ ಮುತ್ತಪ್ಪ ರೈ ಇನ್ನಷ್ಟು ಬಲಿಷ್ಠರಾಗುತ್ತಿದ್ದರು. ಅಷ್ಟೇ ಯಾಕೆ ಅದೃಷ್ಟವಿರುತ್ತಿದ್ರೆ ಜನನಾಯಕನಾಗಿ ಇರುತ್ತಿದ್ದರೋ ಏನೋ.
ಆದ್ರೆ ಆ ಒಂದು ಕೊಲೆಯ ಸುದ್ದಿ ಕೇಳಿ ನನಗೆ ಮುತ್ತಪ್ಪ ರೈ ವಿರುದ್ಧ ಅಸಹನೆ ಮೂಡುವಂತೆ ಮಾಡಿತ್ತು. ಅದ್ರಲ್ಲಿ ಅವರ ಪಾತ್ರವಿತ್ತೋ ಇಲ್ಲವೋ ಗೊತ್ತಿಲ್ಲ. ಬಟ್ ಮುತ್ತಪ್ಪ ರೈನೇ ಕೊಲೆ ಮಾಡಿರೋದು ಅಂತ ಬಹುತೇಕರು ಮಾತನಾಡಿಕೊಳ್ಳುತ್ತಿದ್ದರು. ಅದುವೇ ಸುರೇಶ್ ರೈ ಕೊಲೆ ಪ್ರಕರಣ. ಮುತ್ತಪ್ಪ ರೈಯವರೇ ಬೆಳೆಸಿದ್ದ ಹುಡುಗ ಸುರೇಶ್ ರೈ. ಯಾರೂ ಊಹಿಸದ ರೀತಿಯಲ್ಲಿ ಬೆಳೆಯುತ್ತಿದ್ದ ಸುರೇಶ್ ರೈ ಮಂಗಳೂರಿನಲ್ಲಿ ಕೊಲೆಯಾಗುತ್ತಾರೆ. ಸುರೇಶ್ ರೈ ಅವರ ಅಮ್ಮನ ಕರುಳಿನ ಕೂಗು ಎಂಥವರನ್ನು ಕೂಡ ಘಾಸಿಗೊಳಿಸದ್ದೇ ಇರದ್ದು, ಆ ಘಟನೆಯನ್ನು ನೋಡಿದಾಗ ಮುತ್ತಪ್ಪ ರೈ ಯಾಕೆ ಹೀಗೆ ಮಾಡಿದ್ರೂ ಅಂತ ಅನ್ನಿಸಿರುವುದಂತೂ ಸುಳ್ಳಲ್ಲ.
ಇದಕ್ಕೂ ಮೊದಲು ಅಮರ ಆಳ್ವ ಅವರ ಕೊಲೆ ಪ್ರಕರಣದಲ್ಲೂ ರೈ ಹೆಸರು ಕೇಳಿಬಂದಿತ್ತು. ಬಹುಶಃ ಉದಯವಾಣಿ ಪತ್ರಿಕೆಯಲ್ಲಿ ಸುಮಾರು ಒಂದು ತಿಂಗಳುಗಳ ಕಾಲ ಅಮರ ಆಳ್ವರ ಅವರ ಶ್ರದ್ದಾಂಜಲಿ ಭಾವಚಿತ್ರ ಇರೋ ಜಾಹಿರಾತು ಪ್ರಕಟಗೊಳ್ಳುತ್ತಿದ್ದವು. ಆಗ ನನಗೆ ಅನ್ನಿಸಿದ್ದು ಅಮರ ಆಳ್ವರಿಗೆ ಇಷ್ಟೊಂದು ಅಭಿಮಾನಿಗಳಿದ್ರಾ ಅಂತ. ಸ್ವರದ್ರೂಪಿಯಾಗಿದ್ದ ಅಮರ ಆಳ್ವಾ ಅವರ ಫುಲ್ ಪೇಜ್, ಆಫ್ ಪೇಜ್, ಕ್ವಾರ್ಟರ್ ಪೇಜ್ನಲ್ಲಿ ಬರುತ್ತಿದ್ದ ಫೋಟೋಗಳನ್ನು ನೋಡಿದಾಗ ಅಯ್ಯೋ ಅನ್ನಿಸುತ್ತಿತ್ತು. ಆದಾದ ನಂತರ ಮುತ್ತಪ್ಪ ರೈಗೆ ಬೆಂಗಳೂರಿನ ನ್ಯಾಯಾಲಯದಲ್ಲಿ ಶೂಟ್ ಔಟ್ ಆದಾಗ ತುಂಬಾನೇ ಬೇಸರವೂ ಆಗಿತ್ತು. ನಂತರ ಮುತ್ತಪ್ಪ ರೈಯವರ ಬಗ್ಗೆ ಕುತೂಹಲ ಮೂಡಿಸುವಂತೆ ಮಾಡಿದ್ದು ಅಕ್ಷರ ಬ್ರಹ್ಮ ರವಿ ಬೆಳಗೆರೆ ಸಾರ್.
ಹಾಯ್ ಬೆಂಗಳೂರಿನಲ್ಲಿ ಬರುತ್ತಿದ್ದ ಭೂಗತ ಜಗತ್ತಿನ ಸುದ್ದಿಗಳಲ್ಲಿ ಮುತ್ತಪ್ಪ ರೈ ಯಾಕೆ ಪಾತಕಲೋಕಕ್ಕೆ ಎಂಟ್ರಿಯಾದ್ರು, ದುಬೈನಲ್ಲಿ ಏನು ಮಾಡುತ್ತಿದ್ದರು ಹೀಗೆ ಪ್ರತಿಯೊಂದು ವಿಚಾರಗಳನ್ನು ಆಸಕ್ತಿಯಿಂದ ಓದಿಕೊಳ್ಳುತ್ತಿದೆ. ಮುತ್ತಪ್ಪ ರೈಯವರ ದುಬಾರಿ ವಾಚ್, ಹಾಕಿಕೊಳ್ಳುತ್ತಿದ್ದ ಡ್ರೆಸ್, ದುಬಾರಿ ಸಿಗರೇಟ್ ಸೇದುವ ಸ್ಟೈಲ್, ಕೂಲಿಂಗ್ ಗ್ಲಾಸ್, ದುಬಾರಿ ಕಾರುಗಳು ಹೀಗೆ ಅವರ ವ್ಯಕ್ತಿತ್ವವನ್ನು ರವಿ ಬೆಳಗೆರೆ ಸಾರ್ ಕಣ್ಣಿಗೆ ಕಟ್ಟುವಂತೆ ಬರೆದಿರುವುದನ್ನು ಓದುತ್ತಿದ್ದಾಗ ರೋಮಾಂಚನವಾಗುತ್ತಿತ್ತು. ಅದಕ್ಕೆ ಪೂರಕವಾದಂತಹ ಕೆಲವೊಂದು ಮಾಹಿತಿಗಳು ನನಗೂ ಸಿಗುತ್ತಿದ್ದವು.
ಇನ್ನು ಮುತ್ತಪ್ಪ ರೈಯವರನ್ನು ದುಬೈನಿಂದ ಬೆಂಗಳೂರಿಗೆ ಕರೆ ತಂದಾಗ ನಾನು ಉದಯವಾಣಿ ಪತ್ರಿಕೆಯಲ್ಲಿ ಕ್ರೀಡಾವರದಿಗಾರನಾಗಿದ್ದೆ. ನನಗೆ ಅಚ್ಚರಿಯಾಗಿದ್ದು ಮುತ್ತಪ್ಪ ರೈ ಬೆಂಗಳೂರಿಗೆ ಆಗಮಿಸಿದ್ದಾಗ ಅವರ ಹಿಂದೆ ಮುಂದೆ ಇರುತ್ತಿದ್ದ ಅವರ ಹುಡುಗರ ದಂಡನ್ನು ನೋಡಿ. ಅಷ್ಟೇ ಅಲ್ಲ, ರಸ್ತೆ ಬದಿಗಳಲ್ಲಿ ಅಣ್ಣಾ ಮುತ್ತಪ್ಪ ರೈ ಅನ್ನೋ ಸ್ಲೋಗನ್ ಇರುವಂತಹ ಫ್ಲೆಕ್ಸ್ ಗಳು ಕೂಡ ರಾರಾಜಿಸುತ್ತಿದ್ದವು. ಇದನ್ನು ನೋಡಿದಾಗ ಆಶ್ಚರ್ಯವಾಗಿತ್ತು. ಕೊಲೆ, ಸುಳಿಗೆ, ಹಫ್ತಾ ಹೀಗೆ ಆರೋಪಿಯಾಗಿದ್ದ ಮುತ್ತಪ್ಪ ರೈಗೆ ಈ ಮಟ್ಟದಲ್ಲಿ ಅವರ ಹುಡುಗರು ಅಭಿಮಾನವಿಟ್ಟುಕೊಂಡಿದ್ದಾರೆ ಅಂದ್ರೆ ಇವರು ಸಾಮಾನ್ಯದವರಲ್ಲ ಅಂತ ಅನ್ನಿಸಿಬಿಡುತ್ತಿತ್ತು.
ಇದಾಗ ನಂತರ ಮುತ್ತಪ್ಪ ರೈಯವರು ಎಲ್ಲಾ ಕೇಸ್ಗಳಿಂದ ಮುಕ್ತರಾದ್ರು. ಬಿಡದಿಯಲ್ಲಿ ತೋಟದ ಮನೆ ಮಾಡಿ ಆರಾಮ ಜೀವನ ಸಾಗಿಸುತ್ತಿದ್ದರು. ಹಲವು ಪತ್ರಿಕೆಗಳಿಗೆ ಸಂದರ್ಶನವನ್ನು ನೀಡಿದ್ದರು. ಆದ್ರೆ ನನಗೆ ಯಾವತ್ತೂ ಭೇಟಿಯಾಗಬೇಕು ಅಂತ ಮನಸ್ಸು ಆಗಲಿಲ್ಲ. ಅಲ್ಲಿ ಪ್ರಕಾಶಣ್ಣ ಇದ್ರೂ ಕೂಡ ನನಗ್ಯಾಕೆ ಅವರ ಸುದ್ದಿ ಅಂತ ಸುಮ್ಮನಾಗಿಬಿಡುತ್ತಿದ್ದೆ.
ಇನ್ನೊಂದು ಬಾರಿ ಮುತ್ತಪ್ಪ ರೈ ನಮ್ಮೂರಿಗೂ ಬಂದಿದ್ದರು. ಬೆಂಗಳೂರಿನಿಂದ ತಮ್ಮೂರಿಗೆ ಹೋಗುವಾಗ ಅವರ ನೆಚ್ಚಿನ ಗೆಳೆಯರನ್ನು ಭೇಟಿ ಮಾಡಿದ್ದರು. ಉದನೆ ವಿಜಯ ಬ್ಯಾಂಕ್ನಲ್ಲಿ ಮ್ಯಾನೇಜರ್ ಸುರೇಂದ್ರ ಆಳ್ವ ಮತ್ತು ಚಂದ್ರಹಾಸ ರೈ.(ಚಂದ್ರಹಾಸ ರೈ ಕಬಡ್ಡಿ ಆಟಗಾರರು ಹಾಗೂ ಪುತ್ತೂರಿನ ಕಂಬಳದ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು). ಆದ್ರೆ ಅವತ್ತು ಚಂದ್ರಹಾಸ ರೈ ಇರಲಿಲ್ಲ. ಮುತ್ತಪ್ಪ ರೈ ಅವರ ಎಂಟ್ರಿ ಹೇಗಿತ್ತು ಅಂದ್ರೆ ಥೇಟ್ ಸಿನಿಮಾ ಸ್ಟೈಲ್ನಂತೆ ಇತ್ತಂತೆ. ಸಾಲು ಸಾಲು ಕಾರುಗಳು, ಬಾಡಿಗಾರ್ಡ್ಗಳು ಬ್ಯಾಂಕಿನ ಮುಂದೆ ನಿಂತಾಗ ಊರಿನ ಜನರಿಗೆ ಏನು ಆಗುತ್ತಿದೆ ಎಂಬುದೇ ಗೊತ್ತಾಗಿಲ್ಲ. ಆಮೇಲೆ ಮುತ್ತಪ್ಪ ರೈ ಅಂದಾಗ ಕುತೂಹಲದಿಂದ ಸೇರಿಕೊಂಡು ರೈಯವರನ್ನು ನೋಡುತ್ತಿದ್ದರು. ಇದನ್ನು ಈಗಲೂ ಅಲ್ಲಿ ಕೆಲವರು ಅಲ್ಲಿ ನೆನಪಿಸಿಕೊಳ್ಳುತ್ತಾರೆ.
ಅದು 2007-2008. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ದರ್ಬಾರ್ ನಡೆಯುತ್ತಿತ್ತು. ಐಪಿಎಲ್ ನಂತೆ ಕರ್ನಾಟಕದಲ್ಲಿ ಕೆಪಿಎಲ್ ಟೂರ್ನಿಯನ್ನು ಸಂಘಟಿಸಲು ಪ್ಲಾನ್ ಮಾಡಿಕೊಂಡಿದ್ದರು. ಆಗ ಕೆಎಸ್ಸಿಎ ನಲ್ಲಿ ಶಂಕರ್ ಒಂದು ಸಣ್ಣ ಸುದ್ದಿಯ ಮೂಲವನ್ನು ಬಿಚ್ಚಿಟ್ಟರು. ಅದುವೇ ಮುತ್ತಪ್ಪ ರೈ ಕೂಡ ಕೆಪಿಎಲ್ನ ಒಂದು ಫ್ರಾಂಚೈಸಿಯನ್ನು ಖರೀದಿ ಮಾಡ್ತಾರೆ. ಒಂದು ಸಲ ಚೆಕ್ ಮಾಡ್ಕೊಳ್ಳಿ ಅಂತ ಹೇಳಿದ್ರು. ಆಗ ನಾನು ನೇರವಾಗಿ ಪ್ರಕಾಶಣ್ಣನಿಗೆ ಕರೆ ಮಾಡಿ ಸುದ್ದಿ ಸಂಗ್ರಹ ಮಾಡ್ಕೊಂಡು ಬೌಂಡರಿ ಲೈನ್ನಲ್ಲಿ ಪ್ರಸಾರ ಮಾಡಿದ್ದೇವು.
ಬೌಂಡರಿ ಲೈನ್ ಮುಗಿಯುತ್ತಿದ್ದಂತೆ ನನ್ನ ಮೊಬೈಲ್ಗೆ ಪ್ರಕಾಶಣ್ಣ ಕರೆ ಮಾಡಿ ಮಾಮಾ ಮಾತನಾಡುತ್ತಾರೆ ಅಂತ ಹೇಳಿದ್ದಷ್ಟೇ… ನಾನು ಮುತ್ತಪ್ಪ ರೈ ಮಾತನಾಡೋದು. ನನಗೆ ಒಂದು ಕ್ಷಣ ಏನು ಮಾತನಾಡಬೇಕೋ ಅಂತ ಗೊತ್ತಾಗಿಲ್ಲ. ಗಲಿಬಿಲಿಯಿಂದಲೇ ಅಂ ಅಂಕಲ್ ಅಂದೆ. ಆ ನಂತರ ಸುಮಾರು 40 ನಿಮಿಷಗಳ ಕಾಲ ಕೆಪಿಎಲ್ ಟೂರ್ನಿ, ಫ್ರಾಂಚೈಸಿ ಖರೀದಿ, ಆಟಗಾರರ ಖರೀದಿ, ಯಾರೆಲ್ಲಾ ಆಡ್ತಾರೆ ಎಲ್ಲಾ ಮಾಹಿತಿಯನ್ನು ಪಡೆದುಕೊಂಡ್ರು. ನೋಡೋಣ,,, ಟೈಮ್ ಇದೆಯಲ್ಲಾ… ಪ್ಲಾನ್ ಮಾಡೋಣ ಅಂತ ಹೇಳಿದ್ರು, ಅದ್ರ ನಡುವೆಯೇ ನನಗೊಂದು ನಿಮ್ಮ ಸಂದರ್ಶನ ಬೇಕು ಅಂದೆ. ಸರಿ ನಾಳೆ ಫೋನ್ ಮಾಡಿ ಬಿಡದಿಗೆ ಬಾ ಅಂದ್ರು.
ಮರುದಿನ ಫೋನ್ ಮಾಡಿದ್ರೆ ಸಂಜೆ ಸದಾಶಿವನಗರದ ಮನೆಗೆ ಬಾ ಅಂದ್ರು. ಅದೂ ಆಗಲಿಲ್ಲ. ಕೊನೆಗೆ ಎರಡು ಮೂರು ದಿನ ಬಿಟ್ಟು ಅಶೋಕಾ ಹೊಟೇಲ್ ನಲ್ಲಿ ಜಯಕರ್ನಾಟಕ ಸಂಘಟನೆಗೆ ಸಂಬಂಧಿಸಿದ್ದಂತೆ ಕಾರ್ಯಕ್ರಮವಿತ್ತು. ಕಾರ್ಯಕ್ರಮ ಮುಗಿದ ನಂತರ ವೇಣು ಶರ್ಮಾ, ಸುಂದರ ಕಬಕ ಮತ್ತು ಪ್ರಕಾಶಣ್ಣ ಅವರು ನನ್ನನ್ನು ಭೇಟಿ ಮಾಡಿಸಿದ್ರು. ಮೊದಲ ಭೇಟಿಯಲ್ಲಿ ಇವರೇನಾ ಮುತ್ತಪ್ಪ ರೈ ಅಂತ ಅನ್ನಿಸಿತ್ತು. ಯಾಕಂದ್ರೆ ತೀರಾ ಪರಿಚಿತರಂತೆ ಮಾತನಾಡಿದ್ದ ಮುತ್ತಪ್ಪ ರೈ ಅವರು ಕೆಪಿಎಲ್ ಕುರಿಂತಂತೆ ಆರು ನಿಮಿಷಗಳ ಚಿಟ್ ಚಾಟ್ ನೀಡಿದ್ದರು. ಕೊನೆಗೆ ಒಂದು ಪ್ರಶ್ನೆ ಕೇಳಿದ್ದೆ. ಹಳೆಯ ಮುತ್ತಪ್ಪ ರೈಗೂ ಈಗೀನ ಮುತ್ತಪ್ಪ ರೈಗೂ ಏನಾದ್ರೂ ಬದಲಾವಣೆಯಾಗಿದೆಯಾ ಅಂತ. ಬದಲಾವಣೆ ಆಗಿದೆ. ನಾನು ಯಾರ ತಂಟೆಗೂ ಹೋಗಲ್ಲ. ನನ್ನ ತಂಟೆಗೆ ಬಂದ್ರೆ ಬಿಡಲ್ಲ. ಮುತ್ತಪ್ಪ ರೈ ಮುತ್ತಪ್ಪ ರೈನೇ ಅಂತ ಹೇಳಿದ್ದರು. ಆದಾದ ನಂತರ ಸುಮಾರು ವರ್ಷ ಅವರನ್ನು ಭೇಟಿಯಾಗಿರಲಿಲ್ಲ. ಅಪರೂಪಕ್ಕೊಮ್ಮೆ ಆಗಾಗ ಫೋನ್ ಮಾಡುತ್ತಿದ್ದೆ ಅಷ್ಟೇ.
ಇನ್ನು ನಾನು ಪ್ರಜಾ ಟಿವಿ ಸೇರಿದಾಗಲೂ ಅಷ್ಟೇ.. ಅವರಿಗೆ ಗೊತ್ತಿರಲಿಲ್ಲ. ನಾನು ಸೇರಿದ ಸುಮಾರು ದಿನಗಳು ಆದ ಮೇಲೆನೇ ಗೊತ್ತಾಗಿದ್ದು. ನನ್ನ ಮದುವೆ ಆಮಂತ್ರಣ ಪತ್ರಿಕೆ ಕೊಡಲು ಸದಾಶಿವನಗರದ ಮನೆಗೆ ಹೋದಾಗ ಅವರ ಸೆಕ್ಯುರಿಟಿ ವ್ಯವಸ್ಥೆ ನನ್ನನ್ನು ವಿಸ್ಮಿತಗೊಳಿಸುವಂತೆ ಮಾಡಿತ್ತು. ಆಮಂತ್ರಣ ಪತ್ರಿಕೆ ಓದುವಾಗಲೇ ನನ್ನ ಅಪ್ಪ, ದೊಡ್ಡಪ್ಪ, ಚಿಕ್ಕಪ್ಪ, ಮಾವಂದಿರ ಬಗ್ಗೆ ವಿಚಾರಿಸಿಕೊಂಡ್ರು. ಬಾಲ್ಯದ ಕೆಲವೊಂದು ಘಟನೆಗಳನ್ನು ಮೆಲುಕು ಹಾಕಿದ್ದರು. ಪುತ್ತೂರಿಗೆ ಬರೋಕೆ ಇದೆ. ಬಂದ್ರೆ ಬರುತ್ತೇನೆ. ಇಲ್ಲ ಅಂದ್ರೆ ಇಲ್ಲಿಗೆ ಇಬ್ಬರು ಬನ್ನಿ ಅಂತ ಹಾರೈಸಿದ್ರು.
ಆದಾದ ನಂತರ ನಾನು ಅವರನ್ನು ಭೇಟಿಯಾಗಿದ್ದು ಪ್ರಜಾ ಟಿವಿ ಬಿಟ್ಟಾಗ. ಗುಣ ಅಣ್ಣ ನಾನು ಪ್ರಜಾಟಿವಿ ಬಿಡ್ತಾ ಇದ್ದೇನೆ ಅಂತ ಹೇಳಿದಾಗ ತಕ್ಷಣವೇ ಫೋನ್ ಮಾಡಿ ಯಾಕೆ ಬಿಡ್ತಾ ಇದ್ದೀಯಾ.. ಏನಾದ್ರೂ ತೊಂದರೆ ಇದೆಯಾ,,, ನಾನು ಹೊರಗಡೆ ಇದ್ದೀನಿ ಒಂದು ವಾರ ಬಿಟ್ಟು ಬರುತ್ತೇನೆ. ಅಲ್ಲಿಯ ತನಕ ಏನು ನಿರ್ಧಾರ ತಗೋಬೇಡ ಅಂದಿದ್ದರು. ಕೊನೆಗೆ ಅವರ ಸದಾಶಿವ ನಗರದ ಮನೆಗೆ ಹೋಗಿ ಮಾತನಾಡಿದ್ದೆ, ಪ್ರಜಾ ಟಿವಿ ಬಿಡಬೇಡ ಅಂತ ಹೇಳಿದ್ರೂ ನಾನು ನನ್ನ ವೈಯಕ್ತಿಕ ಕಾರಣಗಳನ್ನು ನೀಡಿ ಹೊರಬಂದಿದ್ದೆ. ಆದ್ರೆ ನಾನು ನೀಡಿರುವ ಕಾರಣಗಳು ಸರಿ ಅಂತ ಅವರಿಗೆ ಅನ್ನಿಸಲಿಲ್ಲ. ಆದ್ರೆ ಅವರು ನನಗೆ ನೀಡಿರುವ ಆಶ್ವಾಸನೆ ನನಗೆ ಸರಿ ಅನ್ನಿಸಲಿಲ್ಲ. ಆದ್ರೂ ಆಗಾಗ ಫೋನ್ ಮಾಡಿದಾಗ ಕೆಲಸ ಹೇಗಿದೆ… ಸಂಬಳ ಆಗಿದೆಯಾ ಅಂತ ವಿಚಾರಿಸಿಕೊಳ್ಳುತ್ತಿದ್ದರು.
ಬಹುಶಃ ಅವರನ್ನು ನಾನು ಕೊನೆಯ ಬಾರಿ ಭೇಟಿಯಾಗಿದ್ದು ಅವರು ಕರ್ನಾಟಕ ರಾಜ್ಯ ಅಥ್ಲೇಟಿಕ್ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗ. ಅವತ್ತು ಕಂಠೀರವ ಕ್ರೀಡಾಂಗಣದಲ್ಲಿ ಹಬ್ಬದ ಸಂಭ್ರಮವಿತ್ತು. ಅಷ್ಟೊಂದು ಅವರ ಅಭಿಮಾನಿಗಳು ಅಲ್ಲಿ ಸೇರಿಕೊಂಡಿದ್ದರು. ಅಂತಹುದರಲ್ಲಿ ನನ್ನನ್ನು ನೋಡಿದ ಕೂಡಲೇ ಆಮೇಲೆ ಫೋನ್ ಮಾಡು ಮಾತನಾಡಲು ಇದೆ ಅಂದಿದ್ದರು. ಆ ನಂತರ ಫೋನ್ ಮಾಡಿದಾಗ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಅಥ್ಲೀಟ್ಗಳ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದರು.
ಆದ್ರೆ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷರಾದ ನಂತರ ಅವರನ್ನು ಆವರಿಸಿಕೊಂಡಿದ್ದು ಕ್ಯಾನ್ಸರ್ ಅನ್ನೋ ಮಾಹಾಮಾರಿ. ಆದ್ರೆ ಆ ವಿಚಾರ ಹೆಚ್ಚಿನವರಿಗೆ ತಿಳಿದಿರಲಿಲ್ಲ. ಕಳೆದ ವರ್ಷದ ಸೆಪ್ಟಂಬರ್ ತಿಂಗಳು. ಅವರಿಗೆ ಹುಷಾರಿಲ್ಲ ಎಂಬ ವಿಚಾರ ತಿಳಿದಿತ್ತು. ಅಲ್ಲದೆ ಚೇತರಿಸಿಕೊಳ್ಳುತ್ತಿದ್ದಾರೆ ಅನ್ನೋ ವಿಷ್ಯವೂ ಗೊತ್ತಾಗಿತ್ತು. ಹಾಗೇ ಸುಮ್ಮನೆ ಫೋನ್ ಮಾಡಿದ್ದೆ. ಆದ್ರೆ ರಿಸೀವ್ ಮಾಡಿಲ್ಲ. ಅರ್ಧಗಂಟೆ ಬಿಟ್ಟು ಅವರೇ ಕರೆ ಮಾಡಿ ಏನು ಅಂತ ಕೇಳಿದ್ದರು. ಆರೋಗ್ಯ ಹೇಗಿದೆ ಅಂತ ವಿಚಾರಿಸೋಣ ಅಂತ ಫೋನ್ ಮಾಡಿದ್ದೆ ಅಂದೆ. ಈಗ ಪರವಾಗಿಲ್ಲ ಆಲ್ ಮೋಸ್ಟ್ ಚೇತರಿಕೆಯಾಗಿದೆ. ಏನು ತೊಂದರೆ ಇಲ್ಲ. ನೀನು ಏನು ಮಾಡ್ತಾ ಇದ್ದೀಯಾ ಅಂತ ಕೇಳಿದ್ದರು. ಸಾಕ್ಷಾಟಿವಿ ವೆಬ್ ಸೈಟ್ ಹಾಗೂ ಮಿಡಿಯಾ ಹೌಸ್ ಮಾಡಿಕೊಂಡಿದ್ದೇನೆ. ಒಂದು ಸಲ ನೀವು ಆಫೀಸ್ಗೆ ಬರಬೇಕು ಅಂತ ಹೇಳಿದ್ದೆ. ಅದಕ್ಕೆ ಅವರು ಬೆಂಗಳೂರಿಗೆ ಬಂದಾಗ ಬರುತ್ತೇನೆ. ನಿನಗೆ ಏನು ತೊಂದರೆ ಇಲ್ಲ ತಾನೇ. ಹಾಗೇ ಪ್ರಜಾ ಟಿವಿ ಸೇರಿದಂತೆ ಎಲ್ಲಾ ಮಿಡಿಯಾಗಳ ಬಗ್ಗೆ ಮಾತನಾಡಿಕೊಂಡು ಸುಮಾರು ಅರ್ಧತಾಸು ಮಾತನಾಡಿದ್ದರು. ಅದೇ ನನ್ನ ಮತ್ತು ಅವರ ಕೊನೆಯ ಮಾತುಕತೆ,
ಆನಂತರ ಅವರು ಬಿಡದಿಯಲ್ಲಿ ಸುದ್ದಿಗೋಷ್ಠಿ ಮಾಡಿದಾಗ ನಾನು ಹೋಗಬೇಕು ಅಂದುಕೊಂಡಿದ್ದೆ. ಹೋಗಲು ಆಗಿಲ್ಲ. ಆದಾದ ನಂತರ ಫೊನ್ ಮಾಡಿದಾಗ ಆಮೇಲೆ ಕಾಲ್ ಮಾಡು ಅಂತ ಮೆಸೇಜ್ ಕಳಿಸಿದ್ದರು. ಬಳಿಕ ಎಲ್ಲಾ ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ನನಗೂ ಕೊಡಲು ಒಪ್ಪಿಗೆ ನೀಡಿದ್ದರು. ಆದ್ರೆ ಅವತ್ತು ಎಲ್ಲಾ ಮಾಧ್ಯಮದವರ ಜೊತೆ ಮಾತನಾಡಿ ಸುಸ್ತಾಗಿದ್ದಾರೆ. ಮುಂದಿನ ವಾರ ಬಾ ಅಂತ ಪ್ರಕಾಶಣ್ಣ ಹೇಳಿದ್ದರು. ಮುಂದಿನ ವಾರ ಅವರ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಅದೂ ಕೂಡ ಕ್ಯಾನ್ಸಲ್ ಆಗಿಬಿಟ್ಟಿತ್ತು. ಹಾಗೇ ಅವರ ಸಂದರ್ಶನ ಮಾಡಲು ಗೆಳೆಯ ವಿಶ್ವಾಸ್ ಭಾರಧ್ವಾಜ್ ತುದಿಗಾಲಿನಲ್ಲಿ ನಿಂತಿದ್ದ. ಆದ್ರೆ ಅದು ಈಡೇರಲೇ ಇಲ್ಲ. ಕೇಳಲೇಬೇಕಾಗಿದ್ದ ಹಲವು ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಗಲಿಲ್ಲ.
ಇನ್ನು ಕಳೆದ ಒಂದೆರಡು ತಿಂಗಳುಗಳಲ್ಲಿ ಮುತ್ತಪ್ಪ ರೈ ಸತ್ತಿದ್ದಾರೆ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದವು. ಸಾಮಾಜಿಕ ಜಾಲ ತಾಣದಲ್ಲಂತೂ ಅದ್ರದ್ದೇ ಸುದ್ದಿ. ಆದ್ರೆ ಮೇ.15ರಂದು ಮುತ್ತಪ್ಪ ರೈ ಸಾವನ್ನಪ್ಪಿದ್ದಾರೆ ಅನ್ನೋ ಮೇಸೆಜ್ ಪ್ರಕಾಶಣ್ಣ ಕಳಿಸಿದ್ದರು. ಒಂದು ಕ್ಷಣ ಮೌನವಾದೆ. ಗೊತ್ತಿಲ್ಲದಂತೆ ಕಣ್ಣೀರು ಬಂತು. ಸಾಯುತ್ತಾರೆ ಅಂತ ಗೊತ್ತಿದ್ರೂ ನೋಡ್ಕೊಂಡು ಬರೋಕೆ ಆಗಲಿಲ್ಲ. ಅವರ ಪಾರ್ಥೀವ ಶರೀರವನ್ನಾದ್ರೂ ನೋಡಿ ಬರೋಣ ಅಂತ ಗಣೇಶನಿಗೆ ಕರೆ ಮಾಡಿದ್ದೆ. ಯಾರನ್ನು ನೋಡೋಕೆ ಬಿಡಲ್ಲ, ಆದ್ರೂ ಬಾ ಅಂದಿದ್ದ. ಸರಿ ಅಂತ ಹೋದೆ. ಹೋದಾಗ ಆಸ್ಪತ್ರೆಯ ಗೇಟ್ ನಲ್ಲಿ ಒಳಗಡೆ ಬಿಡಲಿಲ್ಲ.
ಸಂತೋಷ್ ಮತ್ತು ನಾನು ಒಳಗಡೆ ಹೋಗಲು ಸಣ್ಣ ಮಟ್ಟಿನ ಪ್ರಯತ್ನ ಮಾಡಿದ್ರೂ ಪ್ರಯೋಜನವಾಗಲಿಲ್ಲ. ಅಷ್ಟರಲ್ಲೇ ಸಂತೋಷ್ ಮೊಬೈಲ್ಗೆ ಮುತ್ತಪ್ಪ ರೈ ಅವರ ಡೆಡ್ಬಾಡಿಯ ಫೋಟೋ ಬಂತು. ಸಂತೋಷ್ ಫೋಟೋ ತೋರಿಸಿದಾಗ ಮನಸ್ಸಿಗೆ ತುಂಬಾನೇ ಘಾಸಿಯಾಗಿತ್ತು. ನಾನು ನೋಡಿದ್ದಾಗಿನ ಸ್ಟೈಲೀಸ್ ಮುತ್ತಪ್ಪ ರೈ ಅವರು, ಗುರುತು ಸಿಗದಷ್ಟು ಬದಲಾಗಿಬಿಟ್ಟಿದ್ದರು. ಆ ನಂತರ ಅಲ್ಲಿ ನಿಲ್ಲಬೇಕು ಅಂತ ಅನ್ನಿಸಲಿಲ್ಲ. ಅವರ ಪಾರ್ಥೀವ ಶರೀರವನ್ನು ನೋಡಲು ಮನಸ್ಸು ಆಗಲಿಲ್ಲ. ಯಾಕಂದ್ರೆ ನನಗೆ ಮುತ್ತಪ್ಪ ರೈ ಅಂದ್ರೆ ಆ ಸ್ಟೈಲೀಶ್ ಲುಕ್ ಎದ್ದು ಕಾಣುತ್ತಿರುತ್ತೆ.
ನಾನು ಒಬ್ಬ ಕ್ರೀಡಾ ಪತ್ರಕರ್ತನಾಗಿ ಹಲವು ಆಟಗಾರರನ್ನು ಭೇಟಿಯಾಗಿದ್ದೆ. ಕೆಲವರನ್ನು ಹತ್ತಿರದಿಂದ ನೋಡಿದ್ದೇನೆ. ಹಾಗೇ ರಾಜಕಾರಣಿಗಳು, ಸಿನಿ ನಟ ನಟಿಯರು, ಸೆಲೆಬ್ರಿಟಿಗಳನ್ನು ನೋಡಿದ್ದೇನೆ. ಆದ್ರೆ ಯಾರ ಜೊತೆಗೂ ಫೋಟೋ ತೆಗೆಸಿಕೊಂಡಿಲ್ಲ. ಇದಕ್ಕೆ ಟೀಮ್ ಇಂಡಿಯಾ ಆಟಗಾರರು ಹೊರತಲ್ಲ. ಹಾಗೇ ಮುತ್ತಪ್ಪ ರೈಯವರ ಜೊತೆಗೂ ಫೋಟೋ ತೆಗೆಸಿಕೊಂಡಿಲ್ಲ. ಆದ್ರೆ ಅವರ ತಮ್ಮನ ಮಗನ ಎಂಗೇಜ್ಮೆಂಟ್ ನಲ್ಲಿ ನನ್ನ ಪತ್ನಿಯ ಒತ್ತಾಯಕ್ಕೆ ಒಂದು ಸೆಲ್ಫಿ ತೆಗೆದುಕೊಂಡಿದ್ದೆ. ಅದು ಬಿಟ್ರೆ ಅವರ ನೆನಪು ಇರೋದು ಅವರನ್ನು ಐದಾರು ಸಲ ಭೇಟಿಯಾದಾಗಿನ ಕ್ಷಣಗಳು ಮಾತ್ರ.
ಅದೇನೇ ಇರಲಿ, ಸಮಾಜದ ಒಂದು ವರ್ಗಕ್ಕೆ ಮುತ್ತಪ್ಪ ರೈ ಅಂದ್ರೆ ಭೂಗತ ಜಗತ್ತಿನ ಡಾನ್,,, ಮತ್ತೊಂದು ವರ್ಗಕ್ಕೆ ಸಮಾಜ ಸೇವಕ, ಜಯ ಕರ್ನಾಟಕ ಸಂಘಟನೆಯ ಪ್ರೀತಿಯ ಅಣ್ಣಾ….ಒಡನಾಡಿಗಳಿಗೆ ಕೊಡುಗೈ ದಾನಿ.. ಮತ್ತೆ ಕೆಲವು ಒಡನಾಡಿಗಳಿಗೆ ಸಾವಿನಂಚಿನಲ್ಲಿರುವಾಗ ಹಿತಶತ್ರುವಾಗಿ ಪರಿಣಮಿಸಿದ್ದು ಮಾತ್ರ ವಿಪರ್ಯಾಸವೇ ಸರಿ.
ಒಟ್ಟಿನಲ್ಲಿ 68ರ ಹರೆಯದಲ್ಲಿ ಮುತ್ತಪ್ಪ ರೈ ಈ ಲೋಕವನ್ನು ಬಿಟ್ಟು ಹೋಗಿದ್ದಾರೆ. ಹಾಗೇ ನೋಡಿದ್ರೆ ಅವರು ಯಾವತ್ತೋ ಸಾಯಬೇಕಿತ್ತು. ಆದ್ರೆ ಅವರ ಆಯುಷ್ಯ ಗಟ್ಟಿಯಾಗಿತ್ತು. ಐದು ಗುಂಡುಗಳು ಎದೆಯೊಳಗೆ ನುಸುಳಿದ್ರೂ ಸಾಯದ ರೈ ಕ್ಯಾನ್ಸರ್ ಅನ್ನೋ ಮಹಾಮಾರಿಗೆ ಸಾವನ್ನಪ್ಪಿದ್ದರು. ಪಾತಕ ಲೋಕದ ಅದೆಷ್ಟೋ ರೌಡಿಗಳು ಬೀದಿಯಲ್ಲಿ ಹೆಣವಾಗಿದ್ದಾರೆ. ಮತ್ತೆ ಕೆಲವರು ಪೊಲೀಸರ ಎನ್ಕೌಂಟರ್ಗೆ ಬಲಿಯಾಗಿದ್ದಾರೆ. ಆದ್ರೆ ಮುತ್ತಪ್ಪ ರೈ ಯಾರ ಕೈಗೂ ತನ್ನ ಜೀವವನ್ನು ಬಿಟ್ಟುಕೊಡಲಿಲ್ಲ, ಬೆಂಗಳೂರಿನ ಭೂಗತ ಲೋಕಕ್ಕೆ ಪಿಸ್ತೂಲ್ ಪರಿಚಯಿಸಿದ್ದ ಮುತ್ತಪ್ಪ ರೈ ಸಹಜ ಸಾವನ್ನಪ್ಪಿದ್ದ ಮೊದಲ ಡಾನ್ ಕೂಡ ಹೌದು.
ಏನೇ ಆಗ್ಲಿ, ಮುತ್ತಪ್ಪ ರೈ ಪಾತಕಿನೇ ಆಗಿರಬಹುದು.. ಕೊಲೆಗಡುಕನೇ ಆಗಿರಬಹುದು. ವಂಚಕ, ಮೋಸಗಾರ ಏನು ಬೇಕಾದ್ರೂ ಆಗಿರಲಿ.. ಆದ್ರೆ ಸಹಾಯ ಕೇಳಿಬಂದವರಿಗೆ ಯಾವತ್ತು ಇಲ್ಲ ಅಂದವರಲ್ಲ. ಬಹುಶಃ ಇದೇ ಕಾರಣಕ್ಕಿರಬಹುದು.. ಒಬ್ಬ ಡಾನ್ಗೂ ಅಭಿಮಾನಿಗಳ ಸಂಘ ಹುಟ್ಟಿಕೊಂಡಿರೋದು… ಆದ್ರೂ ಮುತ್ತಪ್ಪ ರೈ ಭೂಗತ ಲೋಕದಲ್ಲಿದ್ದುಕೊಂಡು ಮಾಡಿರೋದೆಲ್ಲಾ ರಾಂಗ್. ಅದು ಸರಿ ಅಂತ ಯಾರು ಹೇಳಲ್ಲ. ಯಾರು ಕೂಡ ಒಪ್ಪುವುದೂ ಇಲ್ಲ. ಆದ್ರೆ ಆದ್ರಿಂದ ಹೊರಬಂದು ಬದುಕಿದ ದಿನಗಳಿವೆಯಲ್ವಾ ಅದು ಮಾತ್ರ ರೈಟ್ ಆಗಿಯೇ ಇತ್ತಾ ? ಇರಲಿಲ್ಲವೋ…?
– ಸನತ್ ರೈ