ಬೆಂಗಳೂರಿನ ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್
ಬೆಂಗಳೂರು: ಕಳೆದ ನಾಲ್ಕು ದಿನದಿಂದ ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಗಳು ಬಂದಿದ್ದು, ಈಗ ಮತ್ತೆ ನಗರದ ಬಿಷಪ್ ಕಾಟನ್ ಬಾಲಕಿಯರ ಶಾಲೆಗೆ ಶುಕ್ರವಾರ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ.
ಶುಕ್ರವಾರ ಬಿಷಪ್ ಕಾಟನ್ ಬಾಲಕಿಯರ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಆದರೆ ಶಾಲೆಯ ಆಡಳಿತ ಮಂಡಳಿ ನಿನ್ನೆ ಸೋಮವಾರ ಮಧ್ಯಾಹ್ನ ಇ-ಮೇಲೆ ಪರಿಶೀಲಿಸಿದಾಗ ಬಾಂಬ್ ಬೆದರಿಕೆ ಬಂದಿರುವುದು ತಿಳಿದಿದೆ. ಕೂಡಲೇ ಶಾಲೆಯ ಆಡಳಿತ ಮಂಡಳಿ ಕಬ್ಬನ್ ಪಾರ್ಕ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಕೂಡಲೇ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳ ಶಾಲೆಗೆ ಧಾವಿಸಿದ್ದಾರೆ. ನಂತರ ಶಾಲೆಯನ್ನು ಸಂಪೂರ್ಣವಾಗಿ ಪರಶೀಲಿಸದ ಮೇಲೆ ಹುಸಿಬಾಂಬ್ ಬೆದರಿಕೆ ಇ-ಮೇಲ್ ಎಂದು ಖಚಿತವಾಗಿದೆ. ಏ. 8ರಂದು ನಗರದ 14 ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಅನಾಮಿಕ ಬೆದರಿಕೆ ಇ-ಮೇಲ್ ಬಂದಿತ್ತು.
ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಇ-ಮೇಲ್ ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನುರಿತ ತಜ್ಞರು, ಸೈಬರ್ ಕ್ರೈಂ ಮತ್ತು ಸ್ಪೇಷಲ್ ಟೀಂ ಜೊತೆಗೆ ಬೇರೆ ಬೇರೆ ಇಲಾಖೆಗಳಿಂದ ತನಿಖೆ ನಡೆಯುತ್ತಿದೆ. ವಿದೇಶದಿಂದಲೂ ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ಆದಷ್ಟು ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.