ರಾಮನಗರ: ಮೈಕ್ರೋ ಫೈನಾನ್ಸ್ ಗಳ (Micro Finance) ಹಾವಳಿ ಇತ್ತೀಚೆಗೆ ಹೆಚ್ಚಾಗಿದ್ದು, ಮತ್ತೋರ್ವ ಮಹಿಳೆ ಬಲಿಯಾಗಿದ್ದಾರೆ.
ರಾಮನಗರ(Ramanagara) ತಾಲೂಕಿನ ತಿಮ್ಮಯ್ಯನದೊಡ್ಡಿ ಗ್ರಾಮದ ಯಶೋದಮ್ಮ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಲಿ ಕೆಲಸ ಮಾಡುತ್ತಿದ್ದ ಯಶೋಧಮ್ಮ ಸುಮಾರು ಎಂಟು ಖಾಸಗಿ ಫೈನಾನ್ಸ್ ಕಂಪನಿಗಳಿಂದ ಸುಮಾರು 5 ಲಕ್ಷ ರೂ. ಸಾಲ ಪಡೆದಿದ್ದರು. ಕಳೆದ ಎರಡು ತಿಂಗಳಿನಿಂದ ಅನಾರೋಗ್ಯಕ್ಕೀಡಾದ ಹಿನ್ನೆಲೆ ಸರಿಯಾಗಿ ಕೆಲಸಕ್ಕೆ ಹೋಗದೆ ಸಾಲ ಮರು ಪಾವತಿ ಮಾಡಲು ಆಗಿಲ್ಲ. ಎರಡು ತಿಂಗಳು ಸಾಲ ಬಾಕಿ ಉಳಿಸಿಕೊಂಡ ಹಿನ್ನೆಲೆ ಫೈನಾನ್ಸ್ ಕಂಪನಿಯ ಸಿಬ್ಬಂದಿ ಮನೆ ಬಳಿ ಬಂದು ಗಲಾಟೆ ನಡೆಸಿ ಇನ್ನೆರಡು ದಿನದಲ್ಲಿ ಸಾಲ ಕಟ್ಟಲಿಲ್ಲ ಅಂದರೆ ಮನೆ ಜಪ್ತಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಬೇಸತ್ತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.