ಬೆಂಗಳೂರು, ಜೂನ್ 7: ಇನ್ನೊಂದು ವಾರ ಕಾಲ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಂಭವವಿದ್ದು, ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎ.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ. ರಾಜ್ಯದ ಹಲವಾರು ಕಡೆ ನಿನ್ನೆ ಸಂಜೆ ಮತ್ತು ರಾತ್ರಿ ಕೂಡ ಸಾಧಾರಣದಿಂದ ಉತ್ತಮ ಮಳೆಯಾಗಿದೆ ಎಂದು ವರದಿಯಾಗಿರುವುದಾಗಿ ತಿಳಿಸಿದ ಅವರು, ಜೂನ್ 9 ರ ನಂತರ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದರು.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಂಭವವಿದ್ದು, ದಕ್ಷಿಣ ಒಳನಾಡಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ. ಅಷ್ಟೇ ಅಲ್ಲ ಕರಾವಳಿ ಭಾಗದಲ್ಲೂ ಮಳೆ ಜೋರಾಗಿ ಸುರಿಯಲಿದೆ.
ನೈಋತ್ಯ ಮುಂಗಾರು ಆರಂಭವಾಗಿರುವ ಪರಿಣಾಮವಾಗಿ ಈಗಾಗಲೇ ರಾಜ್ಯದ ಒಳನಾಡಿನಲ್ಲಿ ಚದುರಿದಂತೆ ಅಲ್ಲಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇನ್ನೆರಡು ದಿನಗಳ ನಂತರ ಉತ್ತರ ಒಳನಾಡಿನಲ್ಲೂ ಮಳೆ ಹೆಚ್ಚಾಗಲಿದೆ ಎಂದು ಅವರು ಹೇಳಿದರು.








