ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಿರೂಪಕಿ ಅನುಶ್ರೀ ಮಂಗಳೂರು ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ.
ಮಂಗಳೂರು ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಗುರುವಾರ ಅನುಶ್ರೀಗೆ ನೋಟಿಸ್ ನೀಡಿದ್ದರು. ನೋಟಿಸ್ ಸ್ವೀಕರಿಸಿ ವಿಚಾರಣೆಗೆ ಬರುವುದಾಗಿ ಹೇಳಿದ್ದ ಅನುಶ್ರೀ ನಿನ್ನೆ ಚಕ್ಕರ್ ಹೊಡೆದಿದ್ದರು. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಬರಲೇಬೇಕು ಎಂದು ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಇಂದು ನಿಗಧಿತ ಸಮಯಕ್ಕೂ ಮೊದಲೇ ಅನುಶ್ರೀ ಮಂಗಳೂರು ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾಳೆ. ಮಂಗಳೂರು ಹೊರವಲಯದ ಪಣಂಬೂರು ಠಾಣೆಯಲ್ಲಿ ಅನುಶ್ರೀ ವಿಚಾರಣೆ ಶುರುವಾಗಿದೆ. ಪಣಂಬೂರು ಎಸಿಪಿ ಬೆಳ್ಳಿಯಪ್ಪ ನೇತೃತ್ವದ ಸಿಸಿಬಿ ಪೊಲೀಸರ ತಂಡದಿಂದ ಅನುಶ್ರೀ ವಿಚಾರಣೆ ನಡೆಯುತ್ತಿದೆ.
ಬಾಲಿವುಡ್ ನಟ ಹಾಗೂ ಡ್ಯಾನ್ಸರ್ ಕಿಶೋರ್ ಶೆಟ್ಟಿ, ತರುಣ್ರಾಜ್ ಅನುಶ್ರೀ ಜೊತೆ ಡ್ರಗ್ಸ್ ಪಾರ್ಟಿ ಮಾಡಿದ್ದಾಗಿ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು. ಈ ವಿಚಾರವಾಗಿ ಅನುಶ್ರೀ ವಿಚಾರಣೆ ನಡೆಸಲಾಗುತ್ತಿದೆ.








