ಕೊಪ್ಪಳ: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಈ ನಡುವೆ ಸಿಎಂ ಆರ್ಥಿಕ ಸಲಹೆಗಾರ ಮತ್ತು ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರು ನೀಡಿರುವ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಂತರ ರಾಜ್ಯದ ಚುಕ್ಕಾಣಿ ಹಿಡಿಯಲು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರ ಅರ್ಹತೆ ಇದೆ ಎಂದು ರಾಯರೆಡ್ಡಿ ಪ್ರತಿಪಾದಿಸಿದ್ದಾರೆ.
ಮುಂದಿನ ಎರಡು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ರಾಯರೆಡ್ಡಿ, ಒಂದು ವೇಳೆ ಅನಿವಾರ್ಯ ಕಾರಣಗಳಿಂದ ಮುಖ್ಯಮಂತ್ರಿಗಳ ಬದಲಾವಣೆ ಮಾಡಬೇಕಾದ ಪ್ರಸಂಗ ಎದುರಾದರೆ, ಆ ಸ್ಥಾನಕ್ಕೆ ಅತ್ಯಂತ ಸಮರ್ಥ ವ್ಯಕ್ತಿ ಎಂದರೆ ಅದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತ್ರ. ಸಿದ್ದರಾಮಯ್ಯ ಅವರ ನಂತರ ಆ ಮಟ್ಟದ ಅರ್ಹತೆ ಮತ್ತು ಅನುಭವ ಹೊಂದಿರುವ ನಾಯಕ ಖರ್ಗೆ ಅವರು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ನಾಯಕತ್ವ ಬದಲಾವಣೆ ಮಾಡಬೇಕೆಂದು ನಿರ್ಧರಿಸಿದರೆ ಮೊದಲು ಶಾಸಕಾಂಗ ಪಕ್ಷದ ಸಭೆ ಕರೆಯಬೇಕಾಗುತ್ತದೆ. ಆದರೆ ಸದ್ಯಕ್ಕೆ ಅಂತಹ ಯಾವುದೇ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿಲ್ಲ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಸರ್ಕಾರ ಸುಭದ್ರವಾಗಿದೆ ಮತ್ತು ಅವರೇ ಪೂರ್ಣ ಅವಧಿಗೆ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ಪುನಾರಚನೆಯ ಕುರಿತೂ ಮಹತ್ವದ ಸುಳಿವು ನೀಡಿದ ರಾಯರೆಡ್ಡಿ, ಮೇ 30ರೊಳಗೆ ರಾಜ್ಯ ಸಚಿವ ಸಂಪುಟದಲ್ಲಿ ದೊಡ್ಡ ಮಟ್ಟದ ಬದಲಾವಣೆ ಅಥವಾ ವಿಸ್ತರಣೆಯಾಗುವ ಸಾಧ್ಯತೆ ಇದೆ. ಈಗಾಗಲೇ ಸರ್ಕಾರ ಅಧಿಕಾರಕ್ಕೆ ಬಂದು ಒಂದು ಹಂತ ತಲುಪಿರುವುದರಿಂದ, ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು. ಈ ಮೂಲಕ ಆಡಳಿತಕ್ಕೆ ಹೊಸ ವೇಗ ಮತ್ತು ಚೈತನ್ಯ ನೀಡುವ ಅಗತ್ಯವಿದೆ ಎಂದರು.
2028ರ ಮುಂದಿನ ವಿಧಾನಸಭೆ ಚುನಾವಣೆಯ ಮೇಲೂ ಕಣ್ಣಿಟ್ಟಿರುವ ರಾಯರೆಡ್ಡಿ, ಈಗಿನಿಂದಲೇ ಜನಪರ ಆಡಳಿತ ನೀಡಿದರೆ ಮುಂದಿನ ಬಾರಿಯೂ ಸಿದ್ದರಾಮಯ್ಯ ಅವರ ನಾಯಕತ್ವದಲ್ಲೇ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸುಲಭವಾಗುತ್ತದೆ. ಹೊಸಬರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಅವರು ವರಿಷ್ಠರಿಗೆ ಸಲಹೆ ನೀಡಿದ್ದಾರೆ. ರಾಯರೆಡ್ಡಿ ಅವರ ಈ ನೇರ ಮತ್ತು ದಿಟ್ಟ ಹೇಳಿಕೆಗಳು ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ನಾಂದಿ ಹಾಡಿವೆ.








