ಏಪ್ರಿಲ್ 1 ದುಬಾರಿಯಾಗಲಿದೆ ಹೋಟೆಲ್ ತಿಂಡಿ ತಿನಿಸು
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಪರಿಣಾಮ ಭಾರತದಲ್ಲಿ ಪ್ರಭಾವ ಬೀರುತ್ತಿದೆ. ತೈಲ ಆಮದುಗಳಲ್ಲಿನ ಏರುಪೇರಿನಿಂದಾಗಿ ಭಾರತದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ದೇಶದಲ್ಲಿ ಅಡುಗೆ ಎಣ್ಣೆ ದರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರ ಜೊತೆಗೆ ವಾಣಿಜ್ಯ ಸಿಲಿಂಡರ್ ಗಳ ಬೆಲೆ ಹೆಚ್ಚಾಗುತ್ತಿದೆ. ಹೀಗಾಗಿ, ಹೋಟೆಲ್ಗಳಲ್ಲಿ ಏಪ್ರಿಲ್ 1ರಿಂದಲೇ ದರ ಏರಿಕೆ ಮಾಡುವ ಚಿಂತನೆ ನಡೆದಿದೆ ಎನ್ನಲಾಗಿದೆ.
ಹೋಟೆಲ್ ದರ ಹೆಚ್ಚಳದ ಸುಳಿವನ್ನ ಈಗಾಗಲೇ ಹೋಟೆಲ್ ಮಾಲೀಕರ ಸಂಘ ನೀಡಿದ್ದು, ಮಾರ್ಚ್ ಕೊನೆಯ ವಾರದಲ್ಲಿ ಅಡುಗೆ ಎಣ್ಣೆ ದರದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹೋಟೆಲ್ ಗಳಲ್ಲಿ ತಿಂಡಿ ತಿನಿಸಿನ ದರ ಏರಿಸುವ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಹಕ್ಷ ಪಿ.ಸಿ,ರಾವ್ ಮಾಧ್ಯಮಗಳಿಗೆ ತಿಳಿಸಿದರು. ಅಡುಗೆ ಎಣ್ಣೆ ಏರಿಕೆ ಎಫೆಕ್ಟ್ನಿಂದ ಹೋಟೆಲ್ ನಡೆಸಲು ಅಸಾಧ್ಯವಾದ ಹಿನ್ನೆಲೆ ಮುಂದಿನ ತಿಂಗಳಿಂದ ಹೋಟೆಲ್ ತಿಂಡಿ, ತಿಸಿಸುಗಳು ದುಬಾರಿ ಆಗಲಿವೆ.
ಈಗಾಗಲೇ ಪಾಮ್ ಆಯಿಲ್, ಸೂರ್ಯಕಾಂತಿ ಎಣ್ಣೆ, ಶೇಂಗಾ ಎಣ್ಣೆ, ರೈಸ್ ಬ್ರಾನ್ ಆಯಿಲ್ ಭಾರಿ ಏರಿಕೆ ಕಂಡಿದೆ. ಹೀಗಾಗಿ, ಫುಲ್ ಮೀಲ್ಸ್, ದೋಸೆ,ಇಡ್ಲಿ, ವಡೆ ಕೇಸರಿ ಬಾತ್, ಉಪ್ಪಿಟ್ಟು, ಮುಂತಾದ ತಿಂಡಿಗಳು ದುಬಾರಿಯಾಗಲಿದೆ. ಮಧ್ಯಮ ವರ್ಗದ ಜನ ಹಾಗೂ ಊಟ, ತಿಂಡಿಗಾಗಿ ಹೋಟೆಲ್‌ನ್ನೇ ಅವಲಂಬಿಸಿರುವ ಬ್ಯಾಚುಲರ್‌ಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ.