ಬದುಕು ಬದಲಾಯಿಸಿದ ಆರ್ ಎಕ್ಸ್ 135 ಬೈಕ್.. ಇದು ಬಿಗ್ ಬಾಸ್ ಮನೆಯ ಲವ್ವರ್ ಬಾಯ್ ಅರವಿಂದನ ಕಥೆ..!
ಅರವಿಂದ್ ಕೆ.ಪಿ. ಬೈಕ್ ರೇಸ್ ಪ್ರೇಮಿಗಳಿಗೆ ಈ ಹೆಸರು ಚಿರಪರಿಚಿತವಾಗಿತ್ತು. ಆದ್ರೆ ಇನ್ನುಳಿದವರಿಗೆ ಅಪರಿಚಿತವಾಗಿತ್ತು. ಆದ್ರೆ ಕೆಲವು ದಿನಗಳಿಂದ ಅರವಿಂದ ಕೆ.ಪಿ. ಅನ್ನೋ ಕರ್ನಾಟಕದ ಮನೆ ಮನೆಗಳಲ್ಲೂ ಪರಿಚಿತವಾಗಿದೆ.
ಕಾರಣ ಬಿಗ್ ಬಾಸ್. ಹೌದು, ಬಿಗ್ ಬಾಸ್ ಮನೆಯಲ್ಲಿ ಲವ್ವರ್ ಬಾಯ್ ಆಗಿರುವ ಅರವಿಂದ್ ಕೆ.ಪಿ. ಒಬ್ಬ ಅದ್ಭುತ ಕ್ರೀಡಾಪಟು. ದಿವ್ಯಾ ಉರುಡುಗ ಅವರ ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಅರವಿಂದ್ ನೇರ ನಡೆ ನುಡಿಯ ವ್ಯಕ್ತಿ. ಇದ್ದದ್ದನ್ನು ಇದ್ದ ಹಾಗೇ ಹೇಳುವ ಅರವಿಂದ್ ಒಬ್ಬ ಬೈಕ್ ರೇಸರ್. ಅದಕ್ಕಿಂತ ಮುನ್ನ ರಾಷ್ಟ್ರೀಯ ಈಜುಪಟು. ಅದಕ್ಕಿಂತ ಮುನ್ನ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ.
ಸಮಯ – ಅವಕಾಶ… ಅದೃಷ್ಟ… ಇದು ಎಲ್ಲರಿಗೂ ಒಟ್ಟಿಗೆ ಸಿಗೋಲ್ಲ. ಸಿಕ್ರೂ ಅದನ್ನು ಸದುಪಯೋಗಪಡಿಸಿಕೊಳ್ಳುವ ಛಲವಿರಬೇಕು. ಆಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ.
ಅದೇ ರೀತಿ ಅರವಿಂದ್ ಅವರ ಬದುಕು ಕೂಡ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅರವಿಂದ ಉನ್ನತ್ತ ವ್ಯಾಸಂಗ ಮಾಡಬೇಕು.. ಉನ್ನತ ಹುದ್ದೆ ಪಡೆಯಬೇಕು ಎಂಬುದು ಅವರ ಮನೆಯವರ ಆಸೆಯಾಗಿತ್ತು. ಅದಕ್ಕಾಗಿ ಮಗನ ಜೊತೆ ಅಪ್ಪ -ಅಮ್ಮ ಚಾಲೆಂಜ್ ಕೂಡ ಮಾಡಿದ್ದರು. 1999ರಲ್ಲಿ ಪಿಯೂಸಿ ಪರೀಕ್ಷೆಯಲ್ಲಿ ಶೇ.80ರಷ್ಟು ಅಂಕ ಬಂದ್ರೆ ನಿನಗೆ ಬೈಕ್ ಕೊಡಿಸುವುದಾಗಿ ಅಪ್ಪ ಅಮ್ಮ ಹೇಳಿದ್ದಾಗಲೇ ಅರವಿಂದ ಅವರಲ್ಲಿದ್ದ ಅಪ್ಪಟ ಪ್ರತಿಭೆ ಹೊರಬಂದಿದ್ದು.
ಅಪ್ಪ ಅಮ್ಮನ ಆಸೆಯಂತೆ ಅರವಿಂದ್ ಪಿಯೂಸಿಯಲ್ಲಿ 84.09 ಶೇ ಅಂಕ ಪಡೆದ್ರು. ಜೊತೆಗೆ ಯಮಹಾ ಆರ್ ಎಕ್ಸ್ 135 ಬೈಕ್ ಅನ್ನು ಪಡೆದುಕೊಂಡ್ರು.
ಅಷ್ಟೇ ಅಲ್ಲ, ತನ್ನಲ್ಲಿದ್ದ ಆಗಾಧ ಮತ್ತು ಸಾಹಸಮಯ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಗಿಸಿದ್ದು ಅದೇ ಆರ್ ಎಕ್ಸ್ 135 ಬೈಕ್. ಮನೆಯವರಿಗೆ ಗೊತ್ತಿಲ್ಲದೆ ಅರವಿಂದ್ ಬೈಕ್ ರೇಸ್ ನಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದುಕೊಂಡ್ರು. ಆರಂಭದಲ್ಲಿ ಸ್ಥಳೀಯ ಬೈಕ್ ರೇಸ್ ಗಳಲ್ಲಿ ಭಾಗವಹಿಸುತ್ತಿದ್ದ ಅರವಿಂದ್ ನೋಡ ನೋಡುತ್ತಿದ್ದಂತೆ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಬೈಕ್ ರೇಸ್ ಗಳಲ್ಲಿ ಸ್ಪರ್ಧಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಅದ್ರಲ್ಲೂ 2005ರರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ರೇಮಂಡ್ ಕ್ಲಾಸಿಕ್ ಬೈಕ್ ರೇಸ್ ಚಾಂಪಿಯನ್ ನಲ್ಲಿ ಪ್ರಶಸ್ತಿ ಗೆದ್ದ ನಂತರ ಅರವಿಂದ ಅವರ ಅದೃಷ್ಟದ ಬಾಗಿಲು ತೆರೆದುಕೊಂಡಿತ್ತು.
Aravind KP From Bigg Boss Kannada 8 Who Holds 17 National Titles
ಟಿವಿಎಸ್ ರೇಸ್ ತಂಡವನ್ನು ಪ್ರತಿನಿಧಿಸುವ ಅರವಿಂದ್, ಡಕಾರ್ ರ್ಯಾಲಿ ರೇಸ್, ರೇಡ್ ದಿ ಹಿಮಾಲಯ, ಡೆಸರ್ಟ್ ಸ್ಟಾರ್ಮ್, ದಕ್ಷೀಣ್ ಡೇರ್ ರೇಸ್, ಎಮ್ ಆರ್ ಎಫ್ ಸೂಪರ್ ಕ್ರಾಸ್ ಚಾಂಪಿಯನ್ ಷಿಪ್, ಕೇರಳ ಸೂಪರ್ ಕ್ರಾಸ್, ಬಾಜಾ ರ್ಯಾಲಿಗಳಲ್ಲಿ ಅರವಿಂದ್ ಮಿಂಚು ಹರಿಸಿದ್ದರು. ಅಷ್ಟೇ ಅಲ್ಲ, 2015ರಲ್ಲಿ ದೇಶದಲ್ಲಿ ನಡೆದಿದ್ದ ಪ್ರಮುಖ ಬೈಕ್ ರೇಸ್ ಗಳಲ್ಲಿ ಸ್ಪರ್ಧೆ ಮಾಡಿ ಪ್ರಶಸ್ತಿ ಗೆದ್ದು ನಂಬರ್ ವನ್ ರೇಸರ್ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
ಉಡುಪಿ ಮೂಲದ ಅರವಿಂದ್, ಸಾಹಸಮಯ ಬೈಕ್ ರೇಸ್ ನಲ್ಲಿ ಹಲವು ಬಾರಿ ಅಪಘಾತ ಮಾಡಿಕೊಂಡಿದ್ದಾರೆ. ತನ್ನ ದೇಹದಲ್ಲಿ ನಟ್ಟು ಬೋಲ್ಟ್ ಗಳಿವೆ. ಸುಮಾರು 12ಕ್ಕಿಂತ ಹೆಚ್ಚು ನಟ್ಟು ಬಾಲ್ಟ್ ಗಳು ಅವರ ದೇಹದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಆದ್ರೂ ಛಲ, ಹಠ ಬಿಡದ ಅರವಿಂದ್ ಬದುಕು ಕಲ್ಪಿಸಿಕೊಟ್ಟ ಬೈಕ್ ರೇಸ್ ಅನ್ನು ಕೈಬಿಡಲಿಲ್ಲ. ನೋವಿನಲ್ಲೂ ಛಲ ಬಿಡದ ತ್ರಿವಿಕ್ರಮನಂತೆ ಸಾಧನೆಯ ಮೆಟ್ಟಲುಗಳನ್ನು ಹತ್ತುತ್ತಿದ್ದಾರೆ. 2012ರಲ್ಲಿ ಶ್ರೀಲಂಕಾದಲ್ಲಿ ನಡೆದಿದ್ದ ಸೂಪರ್ ಕ್ರಾಸ್ ತರಬೇತಿಯ ವೇಳೆ ಸ್ಟಂಟ್ ಜಂಪ್ ನಲ್ಲಿ ಬೈಕ್ ಕೈಕೊಟ್ಟು ಬಿಟ್ಟಿತ್ತು. ಹೀಗಾಗಿ ಆಯಾ ತಪ್ಪಿ ನೆಲಕ್ಕೆ ಬಿದ್ದಾಗ ತನ್ನ ಪ್ರೀತಿಯ ಬೈಕ್ ಕೂಡ ತನ್ನ ದೇಹದ ಮೇಲೆ ಬಿದ್ದಾಗ ಸೊಂಟದ ಮೂಳೆ ಕೂಡ ಮುರಿದು ಹೋಗಿತ್ತು.
ಆಗ ಅರವಿಂದ್ ಅವರ ಬದುಕು ಕಮರಿ ಹೋಯ್ತು ಅನ್ನುವಷ್ಟರಲ್ಲಿ ಮತ್ತೆ ಫಿನಿಕ್ಸ್ ನಂತೆ ಮೇಲೆದ್ದು ಬಂದ್ರು. ಅದಕ್ಕೆ ಕಾರಣ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಆರ್ಥೋ ತಜ್ಞ ಶಿರೀಸ್. ನಟ್ಟು ಬೋಲ್ಟ್ ಗಳ ಮೂಲಕ ಮುರಿದು ಹೋಗಿದ್ದ ಸೋಂಟವನ್ನು ಸರಿ ಮಾಡಿಕೊಂಡು ಮತ್ತೆ ಬೈಕ್ ರೇಸ್ ನಲ್ಲಿ ಸ್ಪರ್ಧಿಸಿ ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ್ದರು.
ತನ್ನ ದೇಹದೊಳಗೆ ನಟ್ಟು ಬೋಲ್ಟ್ ಗಳಿದ್ರೂ ಅದನ್ನು ಲೆಕ್ಕಿಸದೇ ಬೈಕ್ ರೇಸ್ ಅನ್ನೇ ತನ್ನ ವೃತ್ತಿ ಬದುಕು ಅಂತ ನಂಬಿಕೊಂಡು ಬಂದಿದ್ದಾರೆ ಅರವಿಂದ್ ಕೆ.ಪಿ. ಇದೀಗ ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಮನೆ ಗೆದ್ದಿರುವ ಅರವಿಂದ್, ವೀಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಆಲ್ ದಿ ಬೆಸ್ಟ್ ಅರವಿಂದ್..