`ಸಚಿವರೆಂದರೇ ದೇವಲೋಕದಿಂದ ಇಳಿದು ಬಂದವರಾ’ : ರೇಣುಕಾಚಾರ್ಯ
ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಮೂಲ-ವಲಸಿಗ ಎಂಬ ಗುದ್ದಾಟ ನಡೆಯುತ್ತಲೇ ಇದೆ. ಮೂಲ ಬಿಜೆಪಿಗರನ್ನು ಕಡೆಗಣಿಸಿ ವಲಸೆ ಬಂದವರಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಅಂತಾ ಮೂಲ ಬಿಜೆಪಿ ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ.
ಅದರಲ್ಲೂ ಸುಧಾಕರ್ ಅವರ ವಿರುದ್ಧ ಮೂಲ ಬಿಜೆಪಿ ನಾಯಕರು ಆಗಿಂದಾಗೆ ಆಕ್ರೋಶ ಹೊರಹಾಕುತ್ತಲೇ ಇದ್ದರು. ಅದರ ಮುಂದುವರಿದ ಭಾಗವಾಗಿ ಇದೀಗ ಶಾಸಕ ಎಂ.ಪಿ.ರೇಣುಕಾಚಾರ್ಯ ಸಚಿವ ಕೆ ಸುಧಾಕರ್ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿದ್ದು, “ಮಿನಿಸ್ಟರ್ ಗಳೆಂದರೆ ದೇವಲೋಕದಿಂದ ಇಳಿದು ಬಂದವರಾ ಅಂತಾ ಪ್ರಶ್ನಿಸಿದ್ದಾರೆ.
ಆರೋಗ್ಯ ಸಚಿವರ ಕಾರ್ಯದರ್ಶಿಗೆ ರೇಣುಕಾಚಾರ್ಯ ಧಮಕಿ ಹಾಕಿದ್ದಾರೆ ಅನ್ನೋ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹತ್ತಾರು ಭಾರಿ ಭೇಟಿ ಆಗಿದ್ದೇನೆ. ಪತ್ರ ಬರೆದಿದ್ದೇನೆ, ಏನೂ ಪ್ರಯೋಜನವಾಗಿಲ್ಲ.
ನಾವೇನು ಬಿಟ್ಟಿ ಬಿದ್ದಿದ್ದೀವಾ? ಕೆಲವು ಸಚಿವರು ಕೈಗೇನೇ ಸಿಗಲ್ಲ. ಅವರ ಪಿ.ಎ ಗಳು ಪಿ.ಎಸ್ ಗಳು ಫೋನ್ ರಿಸೀವ್ ಮಾಡುವುದಿಲ್ಲ. ಕಾಂಗ್ರೆಸ್ ಜೆಡಿಎಸ್ ನಿಂದ ಬಂದ ಎಲ್ಲ ಸಚಿವರು ಹೀಗೆ ಎಂದು ನಾನು ಹೇಳಲ್ಲ. ಆದರೆ ಕೆಲವರು ಮಾತ್ರ ನಮಗೆ ಕೈಗೆ ಸಿಗಲ್ಲ ಎಂದು ದೂರಿದ್ರು.
ಇನ್ನು ನಾನು ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಿ ಆಗುವ ಮಾತೇ ಇಲ್ಲ. ನಾನು ಧರಣಿ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆ. ನಿನ್ನೆ ಅವರ ಪಿ.ಎಸ್ ಫೋನ್ ಮಾಡಿ ಕೆಲವು ಕೆಲಸ ಆಗಿದೆ ಅಂತಾ ಹೇಳಿದ್ದಾರೆ.
ಆದರೆ ನನ್ನ ಕೆಲಸ ಆದ ಮಾತ್ರಕ್ಕೆ ನಾನು ಸುಮ್ಮನಿರಲ್ಲ ಎಂದು ತಿಳಿಸಿದ ರೇಣುಕಾಚಾರ್ಯ, ಪಾಪ ನಮ್ಮ ಅನೇಕ ಬಾಯಿ ಇಲ್ಲದ ಶಾಸಕರಿದ್ದಾರೆ, ಅವರ ಕೆಲಸಗಳೂ ಆಗಬೇಕು ಎಂದು ಒತ್ತಾಯಿಸಿದ್ರು.
