ಮೆಲ್ಬರ್ನ್: ಭಾರತ (Team India) ಮತ್ತು ಆಸ್ಟ್ರೇಲಿಯಾ (Australia) ಮಧ್ಯೆ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ (Virat Kohli) ಮತ್ತು 19 ವರ್ಷದ ಸ್ಯಾಮ್ ಕಾನ್ಸ್ಟಸ್ (Sam Konstas) ಮಧ್ಯೆ ಕಿತ್ತಾಟ ನಡೆದಿದೆ. ಹೀಗಾಗಿ ಕೊಹ್ಲಿಗೆ ದಂಡ ವಿಧಿಸಲಾಗಿದೆ.
ಜಗಳ ನಡೆಯುತ್ತಿದ್ದಂತೆ ಅಂಪೈರ್‌ಗಳು ಮತ್ತು ಇತರ ಆಟಗಾರರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social Media) ಇವರಿಬ್ಬರ ಕಿತ್ತಾಟದ ವಿಡಿಯೋ ವೈರಲ್ ಆಗಿದೆ.
ಜಸ್ಪ್ರೀತ್ ಬುಮ್ರಾ (Jasprit Bumrah) ಇನಿಂಗ್ಸ್‌ನ 11ನೇ ಓವರ್ ಎಸೆಯುತ್ತಿದ್ದ ಸಂದರ್ಭದಲ್ಲಿ ಕೊಹ್ಲಿ ಕೀಪರ್ ಪಂತ್ ಕಡೆಗೆ ಬಾಲ್ ಹಿಡಿದುಕೊಂಡು ಬರುತ್ತಿದ್ದಾಗ ಸ್ಯಾಮ್‌ಗೆ ಭುಜದಿಂದ ಡಿಕ್ಕಿ ಹೊಡೆದಿದ್ದಾರೆ. ಕೂಡಲೇ ಸಿಟ್ಟಾದ ಸ್ಯಾಮ್ ಕೊಹ್ಲಿಯನ್ನು ದಿಟ್ಟಿಸಿ ನೋಡಿದ್ದಾರೆ. ಆಗ ಕೊಹ್ಲಿ ಸ್ಯಾಮ್ ಜೊತೆ ಜಗಳಕ್ಕೆ ಇಳಿದಿದ್ದಾರೆ. ಕೊನೆಗೆ ಆರಂಭಿಕ ಆಟಗಾರ ಖವಾಜ ಹಾಗೂ ಅಂಪೈರ್ಗಳು ಬಂದು ಸಮಾಧಾನ ಮಾಡಿದ್ದಾರೆ.
ಆಟಗಾರನು ಸಹ ಆಟಗಾರ, ಎದುರಾಳಿ, ಆಟಗಾರನ ಸಹಾಯಕ್ಕೆ ಬರುವ ಸಿಬ್ಬಂದಿ, ಅಂಪೈರ್, ಮ್ಯಾಚ್ ರೆಫ್ರಿ ಅಥವಾ ಮೈದಾನದಲ್ಲಿ ಯಾವುದೇ ಇತರೆ ವ್ಯಕ್ತಿಯೊಂದಿಗೆ ಅನುಚಿತವಾಗಿ ವರ್ತನೆ ಮಾಡುವಂತಿಲ್ಲ. ದೈಹಿಕವಾಗಿ ಹಲ್ಲೆ ಅಥವಾ ನಿಂದಿಸಿದರೆ ಶಿಕ್ಷೆ ವಿಧಿಸಬಹುದು. ಸದ್ಯ ಕೊಹ್ಲಿ ಈ ನಿಯಮ ಉಲ್ಲಂಘಿಸಿದ್ದಕ್ಕೆ ಪಂದ್ಯದ 20% ಶುಲ್ಕ ಹಾಗೂ ಡಿಮೆರಿಟ್ ಪಾಯಿಂಟ್ ನೀಡಲಾಗಿದೆ ಎಂದು ವರದಿಯಾಗಿದೆ.