2500 ಕೋಟಿ ಸಜ್ಜ ಮಾಡಿ ಇಡ್ರಿ ನಿಮ್ಮನ್ನ ಸಿಎಂ ಮಾಡ್ತೀವಿ : ಯತ್ನಾಳ್
ಬೆಳಗಾವಿ: ದೆಹಲಿಯಿಂದ ಬಂದ ಕೆಲವರು 2500 ಸಾವಿರ ಕೋಟಿ ನೀಡಿ ಸಿಎಂ ಮಾಡುತ್ತೇವೆ ಅಂದಿದ್ದರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ.
ಜಿಲ್ಲೆಯ ರಾಮದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೆಹಲಿಯಿಂದ ಒಂದಿಷ್ಟು ಜನ ನನ್ನ ಬಳಿಯೂ ಬಂದಿದ್ದರು. ನಿಮ್ಮನ್ನು ಸಿಎಂ ಮಾಡುತ್ತೇವೆ 2500 ಕೋಟಿ ಸಜ್ಜ ಮಾಡಿ ಇಡ್ರಿ ಅಂದರು. ನಾ ಅಂದೆ ಮಕ್ಕಳಾ, 2500 ಕೋಟಿ ಅಂದ್ರೆ ಏನ್ ಅಂತಾ ತಿಳಿದಿರಿ. ಆ ಎರಡೂವರೆ ಸಾವಿರ ಕೋಟಿ ಹೆಂಗ್ ಇಡೋದು? ಏನು ಕೋಣೆಯಲ್ಲಿ ಇಡೋದೋ? ಗೋದಾಮಿನಲ್ಲಿ ಇಡೋದೋ? ಎಂದು ಹೇಳಿದ್ದಾರೆ.
ದೆಹಲಿ ಕರೆದುಕೊಂಡು ಹೋಗ್ತೀವಿ, ಸೋನಿಯಾ ಗಾಂಧಿ ಭೇಟಿ ಮಾಡಿಸ್ತೀವಿ. ಜೆ.ಪಿ.ನಡ್ಡಾರನ್ನ ಭೇಟಿ ಮಾಡಿಸ್ತೀವಿ ನಿಮಗೆ ಟಿಕೆಟ್ ಕೊಡಿಸುತ್ತೇವೆ. ಹಂಗ ಟಿಕೆಟ್ ಕೊಡ್ತೀನಿ ಅಂತಾ ರಾಜಕಾರಣದಲ್ಲಿ ಎಲ್ಲಾ ಕಡೆ ಮೋಸ ಮಾಡುತ್ತಾರೆ. ರಾಜಕಾರಣದಲ್ಲಿ ಯಾರೂ ಅಲ್ಲಿ ಇಲ್ಲಿ ಹೋಗಿ ಹಾಳಾಗಬೇಡಿ ಎಂದು ಸೂಚಿಸಿದರು.
ಇನ್ನೂ ನಾನು ವಾಜಪೇಯಿಯವರ ಕೈಯಲ್ಲಿ ಕೆಲಸ ಮಾಡಿದವನು. ಅಡ್ವಾಣಿ, ರಾಜನಾಥಸಿಂಗ್, ಅರುಣ್ ಜೇಟ್ಲಿ ನನ್ನ ಬಸನಗೌಡ ಅಂತಾ ಹೆಸರು ಹೇಳಿ ಕರಿತಿದ್ದರು. ಅಂತಾ ವ್ಯಕ್ತಿಗೆ ಹೇಳತಾರೆ ಎರಡೂಸಾವಿರ ಕೋಟಿ ಸಜ್ಜ ಮಾಡಿ ಇಡಿ ಸಿಎಂ ಮಾಡುತ್ತೇವೆ ಅಂತಾರೆ. ಆಗ ಬಪ್ಪರೇ ಮಗನ ಅಂದೆ ನಾ ಎಂದು ಗರಂ ಆದರು.
ಇನ್ನು ಎಲೆಕ್ಷನ್ ಸಮೀಪಿಸುತ್ತಿದ್ದಂತೆ ನಡ್ಡಾರ ಮನೆಗೆ ಕರೆದುಕೊಂಡು ಹೋಗ್ತೀವಿ, ಅಮಿತ್ ಶಾ ಮನೆಗೆ ಕರೆದುಕೊಂಡು ಹೋಗ್ತೀವಿ ಅಂತಾ ಹಿಂಗಿಲ್ಲಾ ನಡೀತಾವ. ಅಲ್ಲದೇ ಇನ್ನು ಒಂದ್ ವರ್ಷ ಆದ್ರ ಸಾಮೂಹಿಕ ವಿವಾಹ, 151 ಜೋಡಿ ವಿವಾಹ ಮಾಡ್ತೀವಿ ಅಂತಾ ಬರ್ತಾರ. ಅವರು ನಿಮ್ಮ ತಾಳಿ ಕಟ್ಟಿ ಉದ್ದಾರ ಮಾಡಕ್ಕೆ ಬಂದಾರೇನು? ಅಲ್ಲಾ ಮುಂದೆ ಎಂಎಲ್ಎ ಎಲೆಕ್ಷನ್ ನಿಲ್ಲಾಕ ಬರ್ತಾರ ಎಂದರು.
ಅಲ್ಲದೇ ನೋಟ್ ಬುಕ್ ವಿತರಣೆ, ತಾಳಿ ಭಾಗ್ಯ ಅಂತಾ ಮತ್ತೇನೇನೋ ಮಾಡ್ತಾರ. ನಾಟಕ ಇನ್ನ ಚಾಲೂ ಆಯಿತು ಇನ್ನ ಒಂದು ವರ್ಷ. ಯಾರು ಏನೇನೋ ಭಾಗ್ಯ ಕೊಡ್ತಾರೆ ತಗೋಳಿ. ವೋಟ್ ಮಾತ್ರ ಚಲೋ ಭಾಗ್ಯ ಇರೋರಿಗೆ ಕೊಡ್ರಿ. ಹಾಗೇ ದಿಢೀರ್ ಸಾಮಾಜಿಕ ಕಾರ್ಯಕರ್ತರು ಹುಟ್ಟಿಕೊಳ್ತಾರ. ಬೆಂಗಳೂರದವರು ಬರ್ತಾರೆ ನೋಟ್ ಬುಕ್ ವಿತರಣೆ, ಲಗ್ನ ಮಾಡಾಕ ಶುರು ಮಾಡ್ತಾರ ಎಂದ ಹೇಳಿದ್ದಾರೆ.
ನಾನು ರೊಕ್ಕ ಬಿಚ್ಚುದಿಲ್ಲ ಆದರೂ ಮಂದಿ ವೋಟ್ ಹಾಕ್ತಾರ. ಎರಡು ನಾನು ಯಾರಿಗೂ ಕಿರಿಕಿರಿ ಮಾಡಲ್ಲ. ನಾನು ವಿಜಯಪುರದಲ್ಲಿ ಆಂತಲ್ಲಿ ಆರಿಸಿ ಬಂದಿನಿ. ಹೆಚ್ಚು ಕಡಿಮೆ ಪಾಕಿಸ್ತಾನ ಇದ್ದಂಗ ಐತಿ ಅಲ್ಲಿ ಆರಿಸಿ ಬಂದೇನಿ. ಏಕೆಂದರೆ ಅವರದ್ದು ಒಂದು ಲಕ್ಷ ವೋಟ್ ಇದ್ರೆ ನಮ್ದು ಒಂದೂವರೆ ಲಕ್ಷ ವೋಟ್ ಅದಾವ್. ನಮ್ಮ ಮಂದಿ ಹೊರಗೆ ಬರ್ತಿರಲಿಲ್ಲ, ಈ ಸಲ ಹೇಳಿದೆ. ಹೊರಗೆ ಬರದಿದ್ರ ಪಾಕಿಸ್ತಾನ ಆಗ್ತೇತಿ ನೋಡಿ ಎಂದೆ ಆಗ ವೋಟ್ ಹಾಕಿದ್ರು ಎಂದು ತಿಳಿಸಿದರು.