ಮಂಡ್ಯ: ಇತ್ತೀಚೆಗಷ್ಟೇ ನಿಗೂಢವಾಗಿ ನಾಪತ್ತೆಯಾಗಿ ಶವವಾಗಿ ಪತ್ತೆಯಾಗಿದ್ದ ಶಿಕ್ಷಕಿ ಹತ್ಯೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೇಲುಕೋಟೆ (Melukote) ಶಿಕ್ಷಕಿ (Teacher) ದೀಪಿಕಾ(28) ನಾಪತ್ತೆಯಾಗಿ ಕೊಲೆಯಾಗಿದ್ದರು. ಸದ್ಯ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ನಿತೀಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಮಾಣಿಕ್ಯನಹಳ್ಳಿ ಗ್ರಾಮದ ದೀಪಿಕಾಳನ್ನು ಕೊಲೆ ಮಾಡಿ ಆತ ಪರಾರಿಯಾಗಿದ್ದ.
ಶನಿವಾರ ಮಧ್ಯಾಹ್ನ ಶಾಲೆಯಿಂದ ಹೊರಟಿದ್ದ ದೀಪಿಕಾ ನಿಗೂಢವಾಗಿ ನಾಪತ್ತೆಯಾಗಿದ್ದರು. ಆದರೆ, ಸಂಜೆ ಬೆಟ್ಟದ ಹಿಂಭಾಗದ ರಸ್ತೆ ಸಮೀಪ ದೀಪಿಕಾ ಸ್ಕೂಟರ್ ಪತ್ತೆಯಾಗಿತ್ತು. ದೀಪಿಕಾಳನ್ನು ಎಳೆದಾಡುತ್ತಿದ್ದ ದೃಶ್ಯವನ್ನು ಬೆಟ್ಟದ ಮೇಲಿನಿಂದ ಪ್ರವಾಸಿಗರೊಬ್ಬರು ವೀಡಿಯೋ ಮಾಡಿದ್ದರು. ಇದಾದ ನಂತರ ಮೇಲುಕೋಟೆ ಠಾಣೆಗೆ ದೀಪಿಕಾ ಪೋಷಕರು ನಾಪತ್ತೆ ದೂರು ನೀಡಿದ್ದರು. ಆನಂತರ ಸಂಜೆ ದೀಪಿಕಾ ಶವ ಪತ್ತೆಯಾಗಿತ್ತು. ಶವ ಪತ್ತೆಯಾಗುತ್ತಿದ್ದಂತೆ ನಿತೀಶ್ ಪರಾರಿಯಾಗಿದ್ದ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.