ಆಸ್ತಿಗಾಗಿ ತಂದೆಗೆ ಮಕ್ಕಳಿಂದಲೇ ಕಿರುಕುಳ : ಹಿರಿಯ ನಟರ ಗೋಳಾಟ
ಚಂದನವನದ ಹಿರಿಯ ನಟ ಅಶ್ವತ್ಥನಾರಾಯಣ್ ಅವರು ತಮ್ಮ ಮಕ್ಕಳ ವಿರುದ್ಧವೇ ಹತ್ಯೆಗೆ ಸಂಚು ರೂಪಿಸಿದ್ಧಾಗಿ ದೂರು ದಾಖಲಿಸಿದ್ದಾರೆ.. ಹೌದು ಕನ್ನಡದ ಸುಮಾರು 300 ಕ್ಕೂ ಸಿನಿಮಾಗಳಲ್ಲಿ ನಟಿಸಿರುವ ಅಶ್ವತ್ಥನಾರಾಯಣ್ ಅವರು ತಮ್ಮ ಮಗಳಿಂದಲೇ ಕಿರುಕುಳ ಅನುಭವಿಸಿರೋದಾಗಿ ದೂರಿದ್ದಾರೆ.
ಅಶ್ವತ್ಥನಾರಾಯಣ್ ಅವರು ತಮ್ಮ ಮಕ್ಕಳೊಂದಿಗೆ ವಾಸವಿದ್ದರು. ಆದರೆ ಅವರ ಮಕ್ಕಳಾದ ಉದಯ್ ಹಾಗೂ ಮಗಳು ವಸುಂಧರಾ ಕಳೆದ ಕೆಲವು ದಿನಗಳಿಂದ ಸರಿಯಾಗಿ ಊಟ ನೀರು ನೀಡದೇ ಕಿರುಕುಳ ಕೊಟ್ಟಿದ್ದಾರೆ.. ಅಲ್ಲದೆ ವಿವಿಧ ಮಾತ್ರೆಗಳು, ಚುಚ್ಚುಮದ್ದುಗಳನ್ನು ನೀಡಿ ಕೊಲ್ಲಲು ಯತ್ನಿಸಿದ್ದಾರೆ ಎಂದು ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಅಶ್ವತ್ಥ್ ನಾರಾಯಣ್ ಅವರು ದೂರು ನೀಡಿದ್ದಾರೆ.
ದೂರಿನಲ್ಲಿ , ತಮಗೆ ಮನೆಗೆ ಹೋಗಲು ಇಷ್ಟವಿಲ್ಲ. ನನ್ನನ್ನು ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಸಿ ಎಂದು ಪೊಲೀಸರ ಬಳಿ ಮನವಿ ಮಾಡಿ ಉಲ್ಲೇಖಿಸಿದ್ದಾರೆ.. ಅಶ್ವತ್ಥ್ ನಾರಾಯಣ್ ಗೆ ಮೂವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ ಇದ್ದು, ವಸುಂಧರಾಗೆ ಮದುವೆಯಾಗಿದೆ.. ಆದರೆ ಆಕೆ ಪ್ರಸ್ತುತ ತಂದೆಯ ಮನೆಯಲ್ಲಿಯೇ ವಾಸವಿದ್ದು, ಸಹೋದರ ಉದಯ್‌ಕುಮಾರ್ ಜೊತೆ ಸೇರಿಕೊಂಡು ತಂದೆಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಶ್ವತ್ಥ್ ನಾರಾಯಣ್ ಅವರಿಗೆ ಸರಿಯಾಗಿ ಊಟ ಸಿಗದ ಕಾರಣ ಅವರು ನೆರೆ-ಹೊರೆಯವರ ಬಳಿ ಊಟ ಕೇಳಿ ಪಡೆದು ತಿಂದಿದ್ದೂ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.. ಆದ್ರೆ ಅವರಿಗೆ ಸಹಾಯ ಮಾಡಿದಕ್ಕೆ ನೆರೆ-ಹೊರೆಯವರ ಮೇಲೂ ಅಶ್ವತ್ಥ್ ನಾರಾಯಣ್ ಮಕ್ಕಳು ಗಲಾಟೆ ಮಾಡಿದ್ದಾರೆ ಎಂದಿದ್ದಾರೆ. ಅಲ್ಲದೇ ಅವರ ಕಿರುಕುಳದಿಂದ ಬೇಸತ್ತು ರಾತ್ರೋರಾತ್ರಿ ಮನೆ ಬಿಟ್ಟು ಬಂದು ಬಸವೇಶ್ವರ ನಗರ ಪೊಲೀಸ್ ಠಾಣೆ ತಲುಪಿ ಮಕ್ಕಳ ವಿರುದ್ಧ ದೂರು ದಾಖಲಿಸಿದ್ದಾರೆ.
ಅಷ್ಟೇ ಅಲ್ಲದೇ ಪತ್ನಿಯ ಬಗ್ಗೆಯೂ ದೂರಿನಲ್ಲಿ ಆರೋಪಿಸಿರುವ ಅಶ್ವತ್ಥ್ ನಾರಾಯಣ್, ಪತ್ನಿಯೂ ಕೂಡ ನನ್ನನ್ನ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ತಾನು ನಟಿಸಿ ಹಣ ಸಂಪಾದಿಸಿ ಬೆಂಗಳೂರಿನಲ್ಲಿ ಸೈಟು ಖರೀದಿಸಿ ಮನೆ ಕಟ್ಟಿದ್ದೇನೆ. ಹೆಣ್ಣು ಮಕ್ಕಳ ಮದುವೆ ಮಾಡಿದ್ದೇನೆ. ಆದರೆ ಮಕ್ಕಳು, ಹೆಂಡತಿ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಊಟದಲ್ಲಿ ಮಾತ್ರೆಗಳನ್ನು ಬೆರೆಸಿ ಕೊಲ್ಲಲು ನೋಡುತ್ತಿದ್ದಾರೆ ಹಾಗಾಗಿ ನನ್ನನ್ನು ವೃದ್ಧಾಶ್ರಮಕ್ಕೆ ಸೇರಿಸಿ ಎಂದು ಅಶ್ವತ್ಥ್ ನಾರಾಯಣ್ ಮನವಿ ಮಾಡಿದ್ದಾರೆ.