Assam : ಬಾಲ್ಯ ವಿವಾದ ವಿರುದ್ಧ ಶೂನ್ಯ ಸಹಿಷ್ಣುತೆ : 1,800ಕ್ಕೂ ಹೆಚ್ಚು ಜನರ ಬಂಧನ…
ಅಸ್ಸಾಂನಲ್ಲಿ ಇದುವರೆಗೆ ಬಾಲ್ಯ ವಿವಾಹ ತಡೆಗಾಗಿ 1,800 ಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇಂದು ತಿಳಿಸಿದ್ದಾರೆ. ಇಂದು ಮುಂಜಾನೆಯಿಂದಲೇ ಕಾರ್ಯಾಚರಣೆ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಇದು ಮುಂದುವರಿಯಲಿದೆ.
“ಶೂನ್ಯ ಸಹಿಷ್ಣುತೆಯ ಮನೋಭಾವ” ದಿಂದ ಬಾಲ್ಯ ವಿವಾಹದ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಸ್ಸಾಂ ಪೊಲೀಸರಿಗೆ ಹೇಳಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
“ಬಾಲ್ಯ ವಿವಾಹ ನಿಷೇಧ ಕಾಯಿದೆಯ ನಿಬಂಧನೆಗಳನ್ನ ಉಲ್ಲಂಘಿಸುವವರ ವಿರುದ್ಧ ಪ್ರಸ್ತುತ ರಾಜ್ಯಾದ್ಯಂತ ಬಂಧನಗಳು ನಡೆಯುತ್ತಿವೆ. 1800 ಕ್ಕೂ ಹೆಚ್ಚು ಜನರನ್ನ ಇಲ್ಲಿಯವರೆಗೆ ಬಂಧಿಸಲಾಗಿದೆ. ಮಹಿಳೆಯರ ಮೇಲಿನ ಅಕ್ಷಮ್ಯ ಮತ್ತು ಘೋರ ಅಪರಾಧದ ವಿರುದ್ಧ ಶೂನ್ಯ ಸಹಿಷ್ಣುತೆಯ ಮನೋಭಾವದಿಂದ ವರ್ತಿಸುವಂತೆ ನಾನು ಅಸ್ಸಾಂ ಪೊಲೀಸರಿಗೆ ಕೇಳಿದ್ದೇನೆ” ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.
ಹದಿನೈದು ದಿನದ ಒಳಗಡೆ ಅಸ್ಸಾಂನಾದ್ಯಂತ ದಾಖಲಾಗಿರುವ 4,000 ಕ್ಕೂ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳನ್ನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶುಕ್ರವಾರದಿಂದ ಶಿಸ್ತುಕ್ರಮ ಪ್ರಾರಂಭವಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಅಸ್ಸಾಂನಲ್ಲಿ ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ಹೆಚ್ಚಾಗಿದ್ದು, ಇದಕ್ಕೆ ಬಾಲ್ಯ ವಿವಾಹವು ಪ್ರಾಥಮಿಕ ಕಾರಣವಾಗಿದೆ. ರಾಜ್ಯದಲ್ಲಿ ಶೇಕಡಾ 31 % ನಷ್ಟು ಬಾಲ್ಯ ವಿವಾಹವಾಗುತ್ತಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
Assam : Over 1,800 Arrested Across Assam Over Child Marriages








