ಪ್ರಿನ್ಸಿಪಾಲ್ ರಿಗೆ ಆ್ಯಸಿಡ್ ಎರಚಿ ಹಲ್ಲೆ ಮಾಡಲು ಯತ್ನಿಸಿದ ಸಹಾಯಕ ಪ್ರಾಧ್ಯಾಪಕ
ಕಲಬುರಗಿ: ಸಹಾಯಕ ಪ್ರಾಧ್ಯಾಪಕನೋರ್ವ ತನ್ನ ಉನ್ನತ ಹುದ್ದೆಯನ್ನು ಪ್ರಿನ್ಸಿಪಾಲ್ ತಪ್ಪಿಸಿದನೆಂದು, ಪ್ರಿನ್ಸಿಪಾಲ್ ಮೇಲೆ ಆ್ಯಸಿಡ್ ಎರಚಿ ಹಲ್ಲೆ ಮಾಡಲು ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಾರ್ಚ್ 21 ರಂದು ಹೆಚ್ಕೆಇ ಸೊಸೈಟಿಯ ಫಾರ್ಮಸಿ ಕಾಲೇಜ್ನ ಸಹಾಯಕ ಪ್ರಾಧ್ಯಾಪಕ ಶಾಂತವೀರ ಸಲಗಾರ, ಪ್ರಿನ್ಸಿಪಾಲ್ ಡಾ.ಅರುಣ್ ಕುಮಾರ್ ಬೆನಕಳ ಅವರ ಮೇಲೆ ಆ್ಯಸಿಡ್ ಎರಚಿ ಹಲ್ಲೆ ಮಾಡಲು ಯತ್ನಿಸಿದ್ದಾರೆ.
ಶಾಂತವೀರ ಪರೀವಿಕ್ಷಣಾ ಇನ್ಸ್ಪೆಕ್ಟರ್ ಆಗಿ ನೇಮಕವಾಗಬೇಕಾಗಿತ್ತು. ಆದರೆ ಪ್ರಿನ್ಸಿಪಾಲ್ ಅರುಣ್ ಕುಮಾರ್ ತಮ್ಮ ಕೈವಾಡದಿಂದ ಹುದ್ದೆ ತಪ್ಪಿಸಿದ್ದಾರೆ ಎಂದು ಗ್ರಹಿಸಿಕೊಂಡು ಶಾಂತವೀರ ಆ್ಯಸಿಡ್ ದಾಳಿ ನಡೆಸಲು ಮುಂದಾಗಿದ್ದಾರೆ. ಎಚ್ಕೆಇ ಫಾರ್ಮಸಿ ಕಾಲೇಜ್ ಆವರಣದಲ್ಲಿಯೇ ಆ್ಯಸಿಡ್ ಎರಚಲು ಶಾಂತವೀರ ಮುಂದಾಗಿದ್ದರು.
ಅಲ್ಲದೇ ಅವಾಚ್ಯ ಶಬ್ದಗಳಿಂದ ಪ್ರಿನ್ಸಿಪಾಲ್ರನ್ನು ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಹಾಗೇ ತನ್ನ ಕಾರಿನಿಂದ ಡಿಕ್ಕಿ ಹೊಡೆದು ಅಪಘಾತಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಕೆಲ ಪ್ರಾಧ್ಯಾಪಕರು ಪ್ರಿನ್ಸಿಪಾಲ್ರನ್ನು ರಕ್ಷಣೆ ಮಾಡಿ ಮನೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಶಾಂತವೀರ ಸಲಗಾರ ಆ್ಯಸಿಡ್ ಎರಚಲು ಪ್ರಯತ್ನ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಈ ಕುರಿತು ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.