ಶುಕ್ರವಾರದ ಸಭೆಯಲ್ಲಿ ಜನಪರವಾದ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ: ಸಿಎಂ ಬೊಮ್ಮಾಯಿ Saaksha Tv
ಬೆಂಗಳೂರು: ಶುಕ್ರವಾರ ನಡೆಯಲಿರುವ ಸಭೆಯಲ್ಲಿ ತಜ್ಞರು ನೀಡಿರುವ ಶಿಫಾರಸ್ಸುಗಳ ಸಾಧಕಬಾಧಕಗಳ ಕುರಿತು ಚರ್ಚಿಸಿ ಅಂತಿಮವಾಗಿ ಜನಪರವಾದ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ತಮ್ಮ ನಿವಾಸದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಸರಕಾರಕ್ಕೆ ಹಲವು ಸಲಹೆಗಳನ್ನು ನೀಡಿದ್ದು, ಬೇರೆ ರಾಜ್ಯಗಳಲ್ಲಿರುವ ಕೊರೊನಾ ಸ್ಥಿತಿಗತಿ ಕುರಿತು ಸರ್ಕಾರಕ್ಕೆ ತಜ್ಞರು ತಮ್ಮದೇ ಆದ ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಪರಾಮರ್ಶಿಸಿ, ಶುಕ್ರವಾರದಂದು ಬರಲಿರುವ ಕೊರೊನಾ ಸೋಂಕು ಪ್ರಕರಣಗಳು ಹಾಗೂ ಪಾಸಿಟಿವಿಟಿ ದರ ನೋಡಿಕೊಂಡು ತೀರ್ಮಾನಿಸಾಗುವುದು ಎಂದರು.
ಕಳೆದ ಎರಡು ವಾರಗಳಿಂದ ವಾರಾಂತ್ಯದ ಲಾಕ್ಡೌನ್ ಮತ್ತು ರಾತ್ರಿ ಕರ್ಫ್ಯು ಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮ ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳಲು ಮುಕ್ತವಾದ ಸ್ವಾತಂತ್ರ್ಯವಿದೆ. ಆದರೆ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಯಲು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಹಾಗಾಗಿ ಲಾಕ್ಡೌನ್ ಮತ್ತು ವೀಕೆಂಡ್ ಕರ್ಫ್ಯು ಅನಿವಾರ್ಯವಾಗಿದೆ ಎಂದರು.
ಒಂದೆಡೆ ಕೊರೊನಾ ಮೂರನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಿರುವಾಗ ವೀಕೆಂಡ್ ಕರ್ಫ್ಯು, ನೈಟ್ ಕರ್ಫ್ಯು ಮುಂದುವರಿಸಬೇಕಾ ಅಥವಾ ರದ್ದುಪಡಿಸಬೇಕಾ ಎಂಬ ಗೊಂದಲದಲ್ಲಿ ಸರಕಾರವಿದೆ. ಹೀಗಿರುವಾಗ ಇನ್ನೆರಡು ದಿನಗಳಲ್ಲಿ ತಜ್ಞರು, ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ, ಮತ್ತು ನಮ್ಮ ರಾಜ್ಯದ ಜಿಲ್ಲೆಗಳಲ್ಲಿನ ಸ್ಥಿತಿಗತಿ ನೋಡಿಕೊಂಡು ವರದಿ ತಯಾರಿಸುತ್ತಿದ್ದಾರೆ. ಅವರು ಶುಕ್ರವಾರ ವರದಿ ನೀಡಲಿದ್ದು ಅದರ ಆಧಾರದ ಮೇಲೆ ಚರ್ಚೆ ಮಾಡಿ ಅಂದೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.