ಪಕ್ಷ, ಸಿದ್ಧಾಂತವನ್ನು ಮೀರಿ ಒಳಿತನ್ನು ಸ್ವೀಕರಿಸುವ ಉದಾರತೆಯ ಪ್ರಬುದ್ಧ ರಾಜಕಾರಣಿ ಅಟಲ್ ಜಿ: ಡಾ.ಅರುಣ್ ಸೋಮಣ್ಣ Atal ji saaksha tv
ಬೆಂಗಳೂರು- ಪಕ್ಷ ಹಾಗೂ ಸಿದ್ಧಾಂತವನ್ನು ಮೀರಿ ಒಳಿತನ್ನು ಸ್ವೀಕರಿಸುವ ಉದಾರ ಗುಣ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಲ್ಲಿತ್ತು. ಇದೇ ಕಾರಣದಿಂದ ಅವರು ಅಜಾತಶತ್ರುವಾಗಿದ್ದರು ಎಂದು ಬಿಜೆಪಿ ಯುವ ಮುಖಂಡ ಡಾ.ಅರುಣ್ ಸೋಮಣ್ಣ ಹೇಳಿದ್ದಾರೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿಯಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ ಅವರು ಮಾತನಾಡಿದರು.
ವಾಜಪೇಯಿ ಅವರು ಭಾರತದ ಅಭಿವೃದ್ಧಿಯ ಬಗ್ಗೆ ಹಲವು ಕನಸುಗಳನ್ನು ಕಂಡು ಅದರ ಸಾಕಾರಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ಪ್ರೋಖ್ರಾನ್ ಅಣು ಪರೀಕ್ಷೆ, ಪಾಕಿಸ್ತಾನದೊಂದಿಗೆ ಬಾಂಧವ್ಯ ಬೆಸೆಯುವ ಸಾರಿಗೆ ವ್ಯವಸ್ಥೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಸುವರ್ಣ ಚತುಷ್ಪತ ಯೋಜನೆ, ಸರ್ವ ಶಿಕ್ಷಣ ಅಭಿಯಾನ ವಾಜಪೇಯಿ ಅವರ ದೂರದೃಷ್ಟಿಯ ಫಲವಾಗಿವೆ.
ವರ್ಷಗಳ ಕಾಲ ಸ್ವಚ್ಛ ರಾಜಕೀಯ ಬದುಕು ಕಂಡ ಕವಿ ಹೃದಯದ ಶ್ರೇಷ್ಠ ವಾಗ್ಮಿ. ಚಿಂತಕ, ಮಾನವತಾವಾದಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣಗಳು ಏಷ್ಟೋ ಪೀಳಿಗೆಯನು ಬಡಿದೆಬ್ಬಿಸಿದ್ದು ಸುಳ್ಳಲ್ಲ.
ಅಟಲ್ 1942ರಲ್ಲಿ ಕ್ವಿಟ್ ಇಂಡಿಯ ಚಳವಳಿಯ ಮೂಲಕ, ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನಿಕಟವರ್ತಿಯಾಗಿ ಬೆಳೆದರು. ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸೇರಿದರು. ‘ವೀರ ಅರ್ಜುನ’ ಹಾಗೂ ‘ಪಾಂಚಜನ್ಯ’ ಎನ್ನುವ 2 ಪತ್ರಿಕೆಗಳಿಗೆ ಪತ್ರಕರ್ತರಾಗಿ ಸೇವೆ ಸಲ್ಲಿಸಿದರು.
ಭಾರತದ ಪ್ರಧಾನಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ, ಸಂಸತ್ತಿನ ವಿವಿಧ ಮುಖ್ಯ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿ ಹಾಗೂ ವಿರೋಧಪಕ್ಷದ ನಾಯಕರಾಗಿ ಅವರು ಭಾರತದ ಸ್ವಾತಂತ್ರ್ಯಾ ನಂತರ ದೇಶೀಯ ಮತ್ತು ವಿದೇಶಿ ನೀತಿಗಳಿಗೆ ಸ್ಪಷ್ಟ ರೂಪ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ವಾಜಪೇಯಿ ಒಬ್ಬ ವಿಚಾರವಂತ ಲೇಖಕ, ಸಂವೇದನಾಶೀಲ ಕವಿ ಮತ್ತು ಸೋಲರಿಯದ ವಾಗ್ಮಿ, ಇವೆಲ್ಲಕ್ಕಿಂತ ಹೆಚ್ಚಾಗಿ ಓರ್ವ ಉತ್ತಮ ಮನುಷ್ಯ. ಯಾವುದೇ ರಾಜಕೀಯ ಹಿನ್ನೆಲೆಯಾಗಲಿ ಅನುಭವವಾಗಲಿ ಇಲ್ಲದೆ ಕೇವಲ ನಾಲ್ಕು ಜನ ಸದಸ್ಯರನ್ನು ಹೊಂದಿದ್ದ ಪಕ್ಷವೊಂದರಿಂದ ಆರಿಸಿಬಂದ ವಾಜಪೇಯಿ ಮೊದಲ ಬಾರಿಗೇ ನೆಹರು ಗಮನಸೆಳೆಯುವುದರಲ್ಲಿ ಮಾತ್ರವಲ್ಲದೆ, ತನ್ನ ವಿಚಾರಗಳಿಗೆ ಮನ್ನಣೆ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಇ೦ಥ ಮಹಾನ್ ನಾಯಕರ ಆಶಯವನ್ನು ಈಡೇರಿಸುವ ಸಂಕಲ್ಪದಲ್ಲಿ ಇಂದು ಗೋವಿಂದರಾಜನಗರ ಕ್ಷೇತ್ರದಲ್ಲಿ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸರ್ಕಾರಿ ಶಾಲೆಗಳ ನವೀಕರಣ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ, ಪೊಲೀಸ್ ಠಾಣೆಯ ನಿರ್ಮಾಣ, ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ, ಕ್ರೀಡಾಸೌಧಗಳು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ಮೂಲಕ ಗೋವಿಂದರಾಜನಗರವನ್ನು ಮಾದರಿ ಕ್ಷೇತ್ರವನ್ನಾಗಿಸುವಲ್ಲಿ ಶ್ರಮ ವಹಿಸಿದ ವಿ.ಸೋಮಣ್ಣ ಅವರಿಗೆ ತುಂಬುಹೃದಯದ ಧನ್ಯವಾದಗಳು ಎಂದು ಹೇಳಿದರು.