ಬೆಂಗಳೂರು : ಜನರ ಆರೋಗ್ಯ ಪರಿಸ್ಥಿತಿ ಬಗ್ಗೆ ಹೆಲ್ತ್ ರಿಪೋರ್ಟ್ ಸಂಗ್ರಹಿಸಲು ತೆರಳಿದ್ದ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿದ್ದನ್ನು ಡಿಸಿಎಂ ಅಶ್ವತ್ಥ್ ನಾರಾಯಣ್ ತೀವ್ರವಾಗಿ ಖಂಡಿಸಿದ್ದಾರೆ.
ನಿನ್ನೆ ಬ್ಯಾಟರಾಯನಪುರ ಸಮೀಪದ ಸಾರಾಯಿ ಪಾಳ್ಯದ ಸಾದಿಕ್ ಲೇಔಟ್ ನಲ್ಲಿ ಕೊರೊನಾ ಸೋಂಕು ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಹೆಲ್ತ್ ರಿಪೋರ್ಟ್ ಪಡೆಯಲು ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರು ತೆರಳಿದ್ದರು. ಈ ವೇಳೆ, ಕೆಲ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಲ್ಲದೇ, ಯಾರಿಗೂ ಮಾಹಿತಿ ಕೊಡಬೇಡಿ ಎಂದು ಆವಾಜ್ ಹಾಕಿ ಮೊಬೈಲ್, ಬ್ಯಾಗ್ ನ್ನು ಕಿತ್ತುಕೊಂಡು ಹೆಲ್ತ್ ರಿಪೋರ್ಟ್ ನ್ನು ಹರಿದುಹಾಕಿದ್ದರು.
ಈ ಕುರಿತು ಮಾಧ್ಯಮಗಳಲ್ಲಿ ಇಂದು ಸುದ್ದಿ ಪ್ರಸಾರವಾಗುತ್ತಿದ್ದಂತೆ ಡಿಸಿಎಂ ಅಶ್ವತ್ಥ್ ನಾರಾಯಣ್ ಸಾದಿಕ್ ಲೇಔಟ್ ಗೆ ತೆರಳಿ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯ ಆರೋಗ್ಯ ವಿಚಾರಿಸಿ, ಘಟನೆ ಕುರಿತು ಮಾಹಿತಿ ಪಡೆದುಕೊಂಡರು.
ಈ ವೇಳೆ ಡಿಸಿಎಂ ಬಳಿ ಆಶಾ ಕಾರ್ಯಕರ್ತೆ ಕಣ್ಣೀರು ಹಾಕುತ್ತಾ ಹಲ್ಲೆ ನಡೆದ ಬಗ್ಗೆ ಮಾಹಿತಿ ನೀಡಿದ್ರು. ಅಲ್ಲದೆ ಹಲ್ಲೆ ಬಗ್ಗೆ ಆರೋಗ್ಯಾಧಿಕಾರಿಗಳಿಗೆ ತಿಳಿಸಿದ್ರೂ ಯಾರು ಸ್ಪಂದಿಸಿಲ್ಲ ಎಂದು ದೂರಿದ್ರು.
ಈ ವೇಳೆ ಆಕೆಯನ್ನು ಸಮಾಧಾನ ಪಡಿಸಿದ ಡಿಸಿಎಂ ಅಶ್ವತ್ಥ ನಾರಾಯಣ, ನಿಮಗೆ ಎಲ್ಲ ರೀತಿಯ ಸಹಕಾರ, ಬೆಂಬಲ ನೀಡುತ್ತೇವೆ. ನೀವು ಧೈರ್ಯವಾಗಿರಿ. ಎದೆಗುಂದ ಬೇಡಿ ಎಂದು ತಿಳಿಸಿದರು. ಅಲ್ಲದೇ, ಡಿಸಿಪಿ ಜೊತೆ ಮಾತನಾಡಿ, ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ, ದೂರು ಸ್ವೀಕರಿಸಿದ ಪೊಲೀಸರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.