ದಾವಣಗೆರೆ: ವೈದ್ಯರ ಸಲಹೆ ಇಲ್ಲದೆ ನಿದ್ದೆ ಮಾತ್ರೆ ನೀಡುವುದಿಲ್ಲ ಎಂದಿದ್ದಕ್ಕೆ ಸಿಟಿಗೆದ್ದ ಯುವಕನೊಬ್ಬ ಮೆಡಿಕಲ್ ಶಾಪ್ (Medical Shop) ಗ್ಲಾಸ್ ಒಡೆದು ಮಾಲೀಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಹರಿಹರ ನಗರದ ಇಕ್ರಾ ಮೆಡಿಕಲ್ ಶಾಪ್ನಲ್ಲಿ ನಡೆದಿದೆ. ಹಲ್ಲೆ ನಡೆಸಿದ ನಂತರ ಪರಾರಿಯಾಗಲು ಯತ್ನಿಸಿದ ಯುವಕನನ್ನು ಸ್ಥಳೀಯರು ಹಿಡಿದಿದ್ದಾರೆ. ಮೆಡಿಕಲ್ ಶಾಪ್ ಮಾಲೀಕ ಅಮಾನುದ್ದೀನ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾನೆ.
ಇಕ್ರಾ ಮೆಡಿಕಲ್ ಶಾಪ್ಗೆ ಬಂದ ಯುವಕನೋರ್ವ ವೈದ್ಯರ ಚೀಟಿ ತೋರಿಸದೆ ನಿದ್ದೆ ಮಾತ್ರ ಕೇಳಿದ್ದ. ಆದರೆ ಚೀಟಿ ಇಲ್ಲದೆ ನಿದ್ದೆ ಮಾತ್ರ ನೀಡುವಂತಿಲ್ಲ. ಹೀಗಾಗಿ ಮೆಡಿಕಲ್ ಶಾಪ್ ಮಾಲೀಕ ಮಾತ್ರೆ ನೀಡಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡು ಹಲ್ಲೆ ನಡೆಸಿದ್ದಾನೆ. ಸದ್ಯ ಯುವಕನ ವರ್ತನೆಯಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.