ಪಾಕಿಸ್ತಾನದ ಕರಾಚಿ ಸ್ಟಾಕ್ ಎಕ್ಸ್ಚೇಂಜ್ ಮೇಲೆ ಉಗ್ರರ ದಾಳಿ
ಕರಾಚಿ, ಜೂನ್ 29: ಇಂದು ಬೆಳಗ್ಗೆ ಪಾಕಿಸ್ತಾನದ ಬಂದರು ನಗರಿ ಕರಾಚಿಯಲ್ಲಿರುವ ಸ್ಟಾಕ್ ಎಕ್ಸ್ಚೇಂಜ್ ಮಾರುಕಟ್ಟೆ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. 7 ಜನರು ಗಾಯಗೊಂಡಿದ್ದಾರೆ.
ಸುಮಾರು 9 ಗಂಟೆಗೆ ವಾಹನವೊಂದರಿಂದ ಇಳಿದು ಬಂದ ನಾಲ್ವರು ಭಯೋತ್ಪಾದಕರು, ಮೊದಲು ಹ್ಯಾಂಡ್ ಗ್ರೆನೇಡ್ ಎಸೆದು ಸ್ಫೋಟ ನಡೆಸಿದ್ದಾರೆ. ಬಳಿಕ ಒಳ ನುಗ್ಗಿದ ನಾಲ್ವರು ಬಂದೂಕು ಧಾರಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಲ್ಲಿನ ರಾಷ್ಟ್ರೀಯ ಮಾಧ್ಯಮ ಡಾನ್ ವರದಿ ಮಾಡಿದೆ. ಗನ್ ಮ್ಯಾನ್ಗಳು ನಡೆಸಿದ ಪ್ರತಿ ದಾಳಿಗೆ ಸ್ಥಳದಲ್ಲೇ ಇಬ್ಬರು ಭಯೋತ್ಪಾಕರು ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ಅಲ್ಲದೇ, ಸಾವನ್ನಪ್ಪಿದವರಲ್ಲಿ ಮೂವರು ಸೆಕ್ಯೂರಿಟಿ ಗಾರ್ಡ್ ಮತ್ತು ಓರ್ವ ಪೊಲೀಸ್ ಆಫೀಸರ್ ಇದ್ದರೆನ್ನಲಾಗಿದೆ. ಗಾಯಗೊಂಡ ಏಳು ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕರಾಚಿ ಸಿವಿಲ್ ಆಸ್ಪತ್ರೆಗೆ ಐದು ಶವಗಳನ್ನು ಹಾಗೂ ಏಳು ಮಂದಿ ಗಾಯಗೊಂಡವರನ್ನು ಕರೆ ತರಲಾಗಿದೆ ಎಂದು ಸ್ಥಳೀಯ ಪೊಲೀಸ್ ಸರ್ಜನ್ ಡಾ. ಕತಾರ್ ಅಹಮದ್ ಅಬ್ಬಾಸಿ ತಿಳಿಸಿರುವುದಾಗಿ ಡಾನ್ ವರದಿ ಮಾಡಿದೆ. ದಾಳಿಯ ಉದ್ದೇಶ ಮತ್ತು ದಾಳಿಕೋರರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರ ಬರಬೇಕಿದ್ದು, ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.