ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಇಂದು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದ್ದು, ಉಭಯ ತಂಡಗಳ ನಡುವಿನ ಮಹತ್ವದ ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವೇದಿಕೆ ನಿರ್ಮಾಣವಾಗಿದೆ.
ಇಂದಿನ ಹೈವೋಲ್ಟೇಜ್ ಪಂದ್ಯಕ್ಕಾಗಿ ಎರಡು ತಂಡಗಳು ತಮ್ಮ ತಯಾರಿ ಮಾಡಿಕೊಂಡಿದ್ದು, ಗೆಲುವಿನ ನಿರೀಕ್ಷೆ ಹೊಂದಿವೆ. ಮುಖ್ಯವಾಗಿ ಪ್ರಸಕ್ತ ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿರುವ ಆಸೀಸ್‌ಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು, ಟೂರ್ನಿಯ ಸೆಮಿಫೈನಲ್ ಆಸೆ ಜೀವಂತ ಇರಬೇಕಾದಲ್ಲಿ ಪಾಕಿಸ್ತಾನ ವಿರುದ್ಧದ ಈ ಪಂದ್ಯದ ಗೆಲುವು ಕಾಂಗರೂ ಪಡೆಗೆ ಅತ್ಯಂತ ಪ್ರಮುಖವಾಗಲಿದೆ.
ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಭಾರತ ಹಾಗೂ ಸೌತ್ ಆಫ್ರಿಕಾ ತಂಡಗಳ ವಿರುದ್ಧ ಸೋತು ಆಘಾತ ಅನುಭವಿಸಿದ್ದ ಆಸೀಸ್, 3ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಜಯದ ಹಾದಿ ಕಂಡುಕೊಂಡಿದೆ. ಒಂದೊಮ್ಮೆ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದ್ದೇ ಆದಲ್ಲಿ ಐದು ಬಾರಿಯ ಚಾಂಪಿಯನ್ ಆಸೀಸ್ ತಂಡದ ಸೆಮೀಸ್ ಪ್ರವೇಶದ ಹಾದಿ ಮತ್ತಷ್ಟು ಕಠಿಣಗೊಳ್ಳಲಿದೆ. ಹೀಗಾಗಿ ಪಾಕ್ ವಿರುದ್ಧದ ಈ ಪಂದ್ಯದಲ್ಲಿ ಇದೇ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಹೊತ್ತು ಪ್ಯಾಟ್ ಕಮ್ಮಿನ್ಸ್ ಪಡೆ ಅಖಾಡಕ್ಕಿಳಿಯಲು ಸಜ್ಜಾಗಿದೆ.
ಮತ್ತೊಂದೆಡೆ ಟೂರ್ನಿಯ ಆರಂಭಿಕ ಎರಡು ಪಂದ್ಯದಲ್ಲಿ ನೆದರ್ಲೆಂಡ್ಸ್ ಹಾಗೂ ಶ್ರೀಲಂಕಾ ವಿರುದ್ಧ ಗೆದ್ದುಬೀಗಿದ್ದ ಪಾಕಿಸ್ತಾನ, ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಸೋಲಿನ ಆಘಾತ ಕಂಡಿದೆ. ಅಲ್ಲದೇ ಆರು ದಿನಗಳ ವಿಶ್ರಾಂತಿ ಬಳಿಕ ಬಾಬರ್ ಆಜ಼ಂ ಪಡೆ ಮೈದಾನಕ್ಕಿಳಿಯುತ್ತಿದ್ದು, ಹೈವೋಲ್ಟೇಜ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನ ಸೋಲಿಸುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯುತ್ತಿದೆ. ನಿರೀಕ್ಷೆಯಂತೆ ಆಸೀಸ್ ವಿರುದ್ಧ ಗೆಲುವು ಸಾಧಿಸಿದರೆ ಪಾಕ್ ತಂಡದ ಸೆಮಿಫೈನಲ್ ಪ್ರವೇಶದ ದಾರಿ ಸುಲಭವಾಗಲಿದೆ.
ಪ್ರಮುಖ ಆಟಗಾರರು:
ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯಕ್ಕಾಗಿ ಎರಡು ತಂಡಗಳ ಆಟಗಾರರು ಭರ್ಜರಿ ತಯಾರಿ ಮಾಡಿಕೊಂಡು ಸಜ್ಜಾಗಿದ್ದಾರೆ. ಈ ನಡುವೆ ಇಂದಿನ ರೋಚಕ ಪಂದ್ಯದಲ್ಲಿ ಉಭಯ ತಂಡಗಳ ಪ್ರಮುಖ ಆಟಗಾರರ ಪ್ರದರ್ಶನದ ಮೇಲೆ ಹೆಚ್ಚು ನಿರೀಕ್ಷೆ ಇದೆ. ಆಸೀಸ್ ತಂಡದ ಪರ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಮಾರ್ಷ್, ಆಡಂ ಜ್ಹಂಪ ಹಾಗೂ ಸ್ಟೀವ್ ಸ್ಮಿತ್ ಮೇಲೆ ಎಲ್ಲರ ಗಮನ ನೆಟ್ಟಿದೆ. ಇತ್ತ ಪಾಕ್ ತಂಡದ ಪರ ನಾಯಕ ಬಾಬರ್ ಆಜ಼ಂ, ಮೊಹಮ್ಮದ್ ರಿಜ್ವಾನ್ ಹಾಗೂ ಶಾಹೀನ್ ಅಫ್ರಿದಿ ಇಂದಿನ ಪಂದ್ಯದಲ್ಲಿ ಮಿಂಚುವ ನಿರೀಕ್ಷೆ ಇದೆ.
ಆಸ್ಟ್ರೇಲಿಯಾ ತಂಡ:
ಪ್ಯಾಟ್ ಕಮ್ಮಿನ್ಸ್, ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಮಾರ್ನಸ್ ಲಬುಶೇನ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಜಂಪಾ, ಮಿಚೆಲ್ ಸ್ಟಾರ್ಕ್.
ಪಾಕಿಸ್ತಾನ ತಂಡ:
ಬಾಬರ್ ಅಜಮ್, ಶಾದಾಬ್ ಖಾನ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಸಲ್ಮಾನ್ ಅಲಿ ಅಘಾ, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರೌಫ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಂ.
AUS v PAK, Australia, Pakistan, ODI Cricket, World Cup