ಐಸಿಸಿ ಏಕದಿನ ವಿಶ್ವಕಪ್-2023 ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯ ಇಂದು ನಡೆಯಲಿದ್ದು, ಮಹತ್ವದ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ತಂಡಗಳು ಪ್ರಬಲ ಪೈಪೋಟಿ ನಡೆಸಲು ಸಜ್ಜಾಗಿವೆ.
ಉಭಯ ತಂಡಗಳ ನಡುವಿನ ರೋಚಕ ಹಣಾಹಣಿಗೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ವೇದಿಕೆ ನಿರ್ಮಾಣವಾಗಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಈ ಎರಡು ತಂಡಗಳು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿ ಗುರುತಿಸಿಕೊಂಡಿದ್ದು, ಹೀಗಾಗಿ ಇಂದಿನ ಸೆಮೀಸ್‌ನಲ್ಲಿ ಗೆಲುವಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನೀಡುವ ನಿರೀಕ್ಷೆ ಮೂಡಿಸಿವೆ. ಲೀಗ್ ಹಂತದಲ್ಲಿ ಉಭಯ ತಂಡಗಳು ತಲಾ ಎರಡು ಪಂದ್ಯಗಳಲ್ಲಿ ಸೋಲಿನ ಆಘಾತ ಅನುಭವಿಸಿವೆ.
ಲೀಗ್ ಹಂತದಲ್ಲಿ ನಡೆದ ಎರಡು ತಂಡಗಳ ಮುಖಾಮುಖಿಯಲ್ಲಿ ಸೌತ್ ಆಫ್ರಿಕಾ ಗೆಲುವಿನ ನಗೆಬೀರಿತ್ತು. ಹೀಗಾಗಿ ಸೆಮಿಫೈನಲ್‌ನಲ್ಲೂ ಕೂಡ ಇದೇ ಪ್ರದರ್ಶನ ನೀಡುವ ಲೆಕ್ಕಾಚಾರದೊಂದಿಗೆ ತೆಂಬಾ ಬವುಮಾ ಪಡೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಮತ್ತೊಂದೆಡೆ ಲೀಗ್ ಹಂತದ ಮೊದಲ ಎರಡು ಪಂದ್ಯಗಳಲ್ಲಿ ಸೋಲಿನ ಆಘಾತ ಕಂಡರು ನಂತರದಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿರುವ ಆಸ್ಟ್ರೇಲಿಯಾ, ಸೆಮಿಫೈನಲ್‌ನಲ್ಲಿ ಹರಿಣಗಳ ವಿರುದ್ಧ ಮೇಲುಗೈ ಸಾಧಿಸುವ ಲೆಕ್ಕಾಚಾರದಲ್ಲಿದೆ.
ಆಫ್ರಿಕನ್ನರಿಗೆ ಪ್ರತೀಕಾರದ ಪಂದ್ಯ:
ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ತಂಡಗಳು ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಈ ಹಿಂದೆಯೂ ಎರಡು ಬಾರಿ ಮುಖಾಮುಖಿ ಆಗಿವೆ. ಈ ಹಿಂದೆ 1999 ಹಾಗೂ 2007ರ ವಿಶ್ವಕಪ್ ಆವೃತ್ತಿಗಳಲ್ಲಿ ಉಭಯ ತಂಡಗಳ ನಡುವೆ ನಡೆದ ಸಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಈ ಎರಡು ಸೆಮೀಸ್ ಸೋಲಿಗೆ ಸೇಡುತೀರಿಸಿಕೊಳ್ಳುವ ಲೆಕ್ಕಾಚಾರದೊಂದಿಗೆ ಸೌತ್ ಆಫ್ರಿಕಾ ಇಂದಿನ ಸೆಮಿಫೈನಲ್ ಕಾದಾಟಕ್ಕೆ ತಯಾರಿ ಮಾಡಿಕೊಂಡಿದೆ.
AUS v RSA, Australia, South Africa, Semi-Finals, ODI World Cup