ಆಸ್ಟ್ರೇಲಿಯಾ ವಿರುದ್ಧ ಪಾಕ್ ತೀವ್ರ ಮುಖಭಂಗ ಅನುಭವಿಸಿದೆ. ಪಾಕ್ ನ್ನು ವೈಟ್ ವಾಶ್ ಮಾಡುವುದರ ಮೂಲಕ ಆಸ್ಟ್ರೇಲಿಯಾ ಭರ್ಜರಿ ಜಯ ದಾಖಲಿಸಿದೆ.
ಟಾಸ್ ಗೆದ್ದಿದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದರು. ಪಾಕಿಸ್ತಾನ್ ತಂಡವು ಕಮಿನ್ಸ್ ಅವರ ಮಾರಕ ದಾಳಿಗೆ ತತ್ತರಿಸಿತು. ಪರಿಣಾಮ 227 ರನ್ಗಳಿಗೆ 9 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಮೀರ್ ಜಮಾಲ್ 97 ಎಸೆತಗಳಲ್ಲಿ 82 ರನ್ ಬಾರಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.
ಕೊನೆಗೆ ಪಾಕ್ ತಂಡ 313 ರನ್ಗಳಿಸಿ ಮೊದಲ ಇನಿಂಗ್ಸ್ ಮುಗಿಸಿತ್ತು. ಪ್ಯಾಟ್ ಕಮಿನ್ಸ್ 5 ವಿಕೆಟ್ ಪಡೆದರು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 299 ರನ್ ಗಳಿಸಿತ್ತು. 14 ರನ್ ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಪಾಕ್, ಹ್ಯಾಝಲ್ವುಡ್ ಹಾಗೂ ನಾಥನ್ ಲಿಯಾನ್ ದಾಳಿಗೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದ ಪಾಕ್ ಬ್ಯಾಟರ್ಗಳು 115 ರನ್ಗಳಿಗೆ ಆಲೌಟ್ ಆಗಿದ್ದರು. ಆಸೀಸ್ ಪರ ಹ್ಯಾಝಲ್ವುಡ್ 4 ವಿಕೆಟ್ ಪಡೆದರೆ, ಲಿಯಾನ್ 3 ವಿಕೆಟ್ ಪಡೆದು ಮಿಂಚಿದರು.
ದ್ವಿತೀಯ ಇನಿಂಗ್ಸ್ ನಲ್ಲಿ 130 ರನ್ ಗಳ ಗುರಿ ಪಡೆದ ಆಸ್ಟ್ರೇಲಿಯಾ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಈ ಮೂಲಕ 3ನೇ ಪಂದ್ಯವನ್ನು ಕೂಡ ಆಸ್ಟ್ರೇಲಿಯಾ 8 ವಿಕೆಟ್ ಗಳಿಂದ ಗೆದ್ದು ಬೀಗಿತು.








