Author Special : ಲೇಖಕರ ಕಲ್ಪನೆಯ ಹಾರರ್ ಕಥೆ..!! ‘ ರೈಲ್ವೇ ಮೋಹಿನಿ’
ಖಾಲಿ ರೈಲು ನಿಲ್ದಾಣ ನಡುರಾತ್ರಿ ಸಮಯ 11 ಗಂಟೆ… ಇನ್ನೇನು 12 ಗಂಟೆಗಿನ್ನೊಂದು ಗಂಟೆಯಷ್ಟೇ ಬಾಕಿಯಿದೆ.. ಆದ್ರೆ ರೈಲು ನಿಲ್ದಾಣದಲ್ಲಿ ಮಾತ್ರ ಒಂದೇ ಒಂದು ನರಪಿಳ್ಳೆಯೂ ಕಾಣಿಸುತ್ತಿಲ್ಲ…
ಅದು ಉತ್ತರಪ್ರದೇಶದ ಸಮೀಪದಲ್ಲಿದ್ದ ಜಖಾರಾ ( ಕಾಲ್ಪನಿಕ) ರೈಲು ನಿಲ್ದಾಣ… ಸುತ್ತ 40 ಹಳ್ಳಿಗಳ ಜನರು ಕತ್ತಲಾದ ನಂತರ ಅತ್ತ ತಲೆ ಹಾಕಿಯೂ ಮಲಗಲ್ಲ… ಇಲ್ಲಿ ಮೋಹಿನಿಯ ಕಾಟ ಎಂಬ ನಂಬಿಕೆಯೋ , ಕಟ್ಟುಕಥೆಯೋ , ಕೆಲ ಘಟನೆಗಳಿಂದ ಕಾಕತಾಳಿಯವೂ ಆಗಿ ಜನ ಹೆದರಿರಬಹುದೇನೋ… ಆದ್ರೆ ಕತ್ತಲಾದ ಮೇಲೆ ಆ ರೈಲು ನಿಲ್ದಾಣಕ್ಕೆ ಹೋಗುತ್ತಿದ್ದ ಯಾವೊಬ್ಬ ಗಂಡಸರೂ ಜೀವಂತವಾಗಿ ಬರುತ್ತಿರಲಿಲ್ಲ.. ಆದ್ರೆ ಮೋಹಿನಿಯೇ ಕೊಂದಿದ್ದಾಳೆಂದು ನಂಬುತ್ತಿದ್ದರು..
ಒಂದು ವರ್ಷದಿಂದ ಇಲ್ಲಿ ಈ ರೀತಿ ಆತಂಕ ಶುರುವಾಗಿದ್ದು… ಅದಕ್ಕೂ ಮುಂಚೆ ಎಲ್ಲವೂ ಸರಿ ಇತ್ತು…
ರೈಲು ಮಾತ್ರ ಆ ಸ್ಟೇಷನ್ ನಲ್ಲಿ ನಿಲ್ಲಿಸದೇ ಹೋಗುವುದಿಲ್ಲ… ಅಂಗಡಿಗಳಿರುವುದಿಲ್ಲ.. ಫ್ಲಾಟ್ ಫಾರ್ಮ್ ಖಾಲಿ , ಜನ ಇಲ್ಲಿ ಇಳಿಯಲ್ಲ, ಹತ್ತಲ್ಲ ಸ್ಟೇಷನ್ ಮಾಸ್ಟರ್ ಕೂಡ ಇರಲ್ಲ , ಆದ್ರೂ 2 ನಿಮಿಷ ಕೇವಲ 2 ನಿಮಿಷ ಇಲ್ಲಿ ರೈಲು ನಿಲ್ಲುತ್ತದೆ…
ಈ ರೈಲುನಿಲ್ದಾಣದಲ್ಲೇ ಇಳಿಯಬೇಕಾದವರೂ ಮುಂದಿನ ರೈಲು ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಬಳಸಿಕೊಂಡು ತಮ್ಮ ಊರುಗಳಿಗೆ ತೆರಳುತ್ತಾರೆ..
ಆದ್ರೆ ಈ ಗ್ರಾಮದವರಲ್ಲದ ಇಲ್ಲಿನ ಬಗ್ಗೆ ತಿಳಿಯದ ಒಂದಷ್ಟು ಮಂದಿ ಆಗಾಗ ಇಷ್ಟು ಹೊತ್ತಲ್ಲೂ ಈ ರೈಲು ನಿಲ್ದಾಣಕ್ಕೆ ಬಂದು ಅಪಾಯಕ್ಕೆ ತಾವೇ ಬುಲಾವ್ ನೀಡ್ತಾರೆ…
ಹಾಗೆಯೇ ಒಬ್ಬ ಇಲ್ಲಿನ ಬಗ್ಗೆ ತಿಳಿಯದವ ಬಂದು ಸೀಟ್ ಮೇಲೆ ಕುಳಿತಿದ್ದಾನೆ ಸಿಗರೇಟ್ ಸೇದುತ್ತಿದ್ದಾನೆ… 8 ಗಂಟೆಗೆ ಟಿಕೆಟ್ ಕೌಂಟರ್ ಬಂದ್ ಆಗಿದೆ… ಈತ ಟಿಕೆಟ್ ಇಲ್ಲದೇ ಪ್ರಯಾಣಿಸುವ ಕ್ಯಾಟಗರಿಯವ…
ನೋಡಿದರೆ ಹೇಳಬಹುದು… ಕಂಠ ಪೂರ್ತಿ ಕುಡಿದಿದ್ದಾನೆ… ಗೂಂಡಾ ರೀತಿ ಕಾಣಿಸುತ್ತಿದ್ದಾನೆ… ಟ್ರೈನ್ ಬರಲಿಕ್ಕೆ ಇನ್ನೂ ಒಂದು ಗಂಟೆ ಸಮಯ ಇದೆ…
ಕುಳಿತಿದ್ದವ ಒಂದೇ ಸಮನೇ ಸಿಗರೇಟ್ ಸೇದುತ್ತಿದ್ದಾನೆ… ಆಗಲೇ ಯಾವುದೋ ಹುಡುಗಿ ಗೋಳಾಡುತ್ತಿರುವ ಧ್ವನಿ ಕೇಳಿ ಬಾಯಿಗೆ ಸಿಗರೇಟ್ ಇಡಲು ಹೊರಟವನ ಕೈ ನಿಂತಿತ್ತು… ಗಾಬರಿಯಾಗಿ ಅತ್ತಿತ್ತ ನೋಡಿದ…
ಯಾರೂ ಕಾಣಿಸುತ್ತಿಲ್ಲ… ಕುಡಿದಿರೋದು ಹೆಚ್ಚಾಗಿರಬೇಕು ಬಿಡು ಎಂದುಕೊಂಡವ ಸುಮ್ಮನಾದ… ಮತ್ತೆ ಬಿಕ್ಕಿ ಬಿಕ್ಕಿ ಅಳುತ್ತಿರುವ ಧ್ವನಿ.. ಈ ಬಾರಿ ಕರ್ಕಶವಾಗಿತ್ತು… ಭಯ ಹುಟ್ಟಿಸುವಂತಿತ್ತು…
ತಾನು ಕೂತಿರುವ ಪ್ಲಾಟ್ ಫಾರ್ಮ್ ನಲ್ಲಷ್ಟೇ ಬೆಳಕು.. ದೂರ ದೂರದ ವರೆಗೂ ಕತ್ತಲೆ ಬಿಟ್ಟರೆ ಇನ್ನೇನು ಕಾಣುತ್ತಿಲ್ಲ… ಭಯಕ್ಕೆ ಅವನ ಉಸಿರು ಎಷ್ಟರ ಮಟ್ಟಿಗೆ ಜೋರಾಗಿದೆ ಎಂದ್ರೆ ಅವನ ಉಸಿರಾಟದ ಸದ್ದು ಖುದ್ದು ಅವನಿಗೆ ಕೇಳಿಸುತ್ತಿದೆ.. ಮೈ ನಡುಗುತ್ತಿದೆ… ಅವನ ಕೈನಲ್ಲಿದ್ದ ಸಿಗರೇಟ್ ಕೆಳಗೆ ಜಾರಿಬಿಟ್ಟಿತ್ತು…
ಗಂಟಲು ನೋಯುತ್ತಿದೆ..ಸುತ್ತಲೂ ನೋಡುತ್ತಿದ್ದಾನೆ… ಕರ್ಕಶಾವಾಗಿ ಆ ಹುಡುಗಿಯ ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿರುವ ಧ್ವನಿ ಕೇಳುತ್ತಿದೆ.. ಈತನಿಗೋ ಭಯಕ್ಕೆ ಸಂಪೂರ್ಣ ನಶೆ ಇಳಿದುಹೋಗಿದೆ..
ಧೈರ್ಯ ಮಾಡಿ ಅತ್ತಿತ್ತ ಸುತ್ತ ಕಣ್ಹಾಯಿಸಿದವನಿಗೆ ದೂರದಲ್ಲೊಬ್ಬ ಹುಡುಗಿ ಅತ್ತ ತಿರುಗಿ ಅಳುತ್ತಿರುವುದು ಕಾಣಿಸಿತ್ತು..
ಗಂಟಲೊಳಗೆ ಲಾಲಾರಸ ಇಳಿಸುತ್ತಾ ಒಂದೊಂದೆ ಹೆಜ್ಜೆ ಮುಂದಿಡುತ್ತಾ ಹೋದ ಹೋದ ಹೋದ..!!! ಅವಳ ಸನಿಹಕ್ಕೆ ಹೋಗಿ ನಡುಗುತ್ತಿರುವ ಕೈ ಮುಂದೆ ಚಾಚುತ್ತಾ, ಯಾ…. ಯಾರ್ ನೀನು ಹುಡುಗಿ ಎಂದು ಅವಳನ್ನ ಮುಟ್ಟಿದ್ದ,,,
ಅವಳು ಅವನತ್ತ ತಿರುಗಿಬಿಡುವಳು..!!!! ಅತ್ಯಂತ ಸುಂದರಿ….!!!! ಅಪ್ಸರೆ…. ಮಧುಮಗಳಂತೆ ತಯಾರಾಗಿದ್ದ ಹುಡುಗಿ ಒಂದೇ ಕ್ಷಣದಲ್ಲಿ ಎಂಥವರನ್ನೂ ಆಕರ್ಶಿಸಬಲ್ಲ ಸೌಂದರ್ಯವತಿ…
ಅವಳನ್ನ ನೋಡಿ ಈ ಕುಡುಕನಿಗೂ ಒಳಗೊಳಗೆ ದುರಾಲೋಚನೆ ಕೆಟ್ಟ ಆಸೆ ಮೊಳಕೆ ಹೊಡೆದಿತ್ತು… ಹುಡುಗಿ ಅಳುತ್ತಾ ನುಡಿದಳು, ಅಣ್ಣ ನಾ ಪ್ರೀತಿ ಮಾಡ್ತಿದ್ದ ಹುಡುಗ ಇವತ್ತು ಮದ್ವೆಯಾಗ್ತೀನಿ ಅಂತ ಹೇಳಿದ್ದ… ಮೋಸ ಮಾಡಿದ್ದಾನೆ… ಬಂದೇ ಇಲ್ಲ… ನಾನು ಅಪ್ಪ , ಅಮ್ಮ ಎಲ್ಲಾ ಬಿಟ್ಟು ಬಂದೆ… ಇಲ್ಲಿ ನನ್ನ ಪರ್ಸ್ , ಲೆಗೇಜ್ , ಫೋನ್ ಎಲ್ಲಾ ಕಳ್ಳತನ ಆಗೋಯ್ತು… ನನ್ನ ಮನೆಗೆ ಸೇರಿಸಿ ಅಣ್ಣ ಎಂದವಳ ಅಸಹಾಯಕತೆಗೆ ಒಳಗೊಳಗೆ ಖುಷಿ ಪಟ್ಟು ವಿಕೃತ ಆಸೆಗಳಿಗೆ ಜನ್ಮ ನೀಡಿದ್ದ ಈತ ಸರಿ ಕಣಮ್ಮ ಭಯ ಬೀಳಬೇಡ ಎಲ್ಲಿ ಹೇಳು ನಾನು ನಿಮ್ಮ ಮನೆಗೆ ಸೇರಿಸ್ತೀನಿ ಎಂದವ ಅವಳ ಕೈ ಹಿಡಿದು ಸವರುತ್ತಾ , ಕೆಟ್ಟದಾಗಿ ಅಶ್ಲೀಲವಾಗಿ ಸ್ಪರ್ಷಿಸುತ್ತಿದ್ದವನ ಮುಖಭಾವ ಬದಲಾಗಿತ್ತು…
ಅವನಲ್ಲಿನ ಕಾಮೇಚ್ಛೆ ,ಅವನ ಮೊಗದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ… ನಾಲಿಗೆ ಸವರಿಕೊಳ್ತಿದ್ದವ ನಾನಿದ್ದೀನಿ ಬಾ ಈಗ ಹೆದರಬೇಡ ಎಂದವ ಅವಳ ಕೈ ಹಿಡಿಯುವನು.. ಬಾ ಊಟ ಮಾಡಿಲ್ಲ ಅನ್ಸುತ್ತೆ… ಇನ್ನು ಟ್ರೈನ್ ಬರೋಕೆ ಟೈಮ್ ಇದೆ. ಇಲ್ಲೇ ಹತ್ತಿರದಲ್ಲೇ ಹೋಟೆಲ್ ಇದೆ.. ಇಷ್ಟು ಹೊತ್ತಿನಲ್ಲೂ ಇರುತ್ತದೆ .. ಏನಾದ್ರೂ ತಿಂದು ಬರೋಣ ಎಂದವನ ಮಾತಿಗೆ ಒಪ್ಪಿದ್ದಳು..
ಅವಳೂ ಅವನಿಗೆ ಕೈ ಕೊಟ್ಟಳು , ಅವಳ ಕೈ ಹಿಡಿದು ಮುಂದೆ ಮುಂದೆ ಸಗ್ತಿದ್ದಾನೆ ಫ್ಲಾಟ್ ಫಾರ್ಮ್ ನಿಂದ ಮುಂದೆ ಕತ್ತಲಿನೆಡೆಗೆ ಮುಂದೆ ಸಾಗ್ತಾ ಸಾಗ್ತಾ ವಿಕೃತ ಆಸೆ ಹೆಚ್ಚಾದಂತೆಲ್ಲಾ ಅವನಿಗೆ ತನ್ನ ಕೈಗೆ ಯಾಕೋ ಭಾರ ಹೆಚ್ಚಾಗ್ತಿದೆ ಅನ್ನಿಸುತ್ತಿದೆ…
ಅಯ್ಯೋ ಇದ್ಯೋಕೆ ಇಷ್ಟು ಭಾರ ಭಾರ ಎನಿಸುತ್ತಿದೆಯಲ್ಲ ಎಂದುಕೊಂಡರೂ ಮುಂದೆ ಸಾಗ್ತಿದ್ದ… ಆದ್ರೆ ಈಗ ಅವನು ಮುಂದೆ ಸಾಗೋಕಾಗ್ತಿಲ್ಲ ಹುಡುಗಿಯೂ ಮುಂದೆ ಚಲಿಸುತ್ತಿಲ್ಲ… ಆಕೆ ಮಾತೂ ಆಡುತ್ತಿಲ್ಲ.. ಏನಾಯ್ತು ಎಂದು ಕೇಳುತ್ತಲೇ ಹಿಂದುರಿಗಿ ನೋಡಿದವನಿಗೆ ಹೃದಯಾಘಾತವೇ ಆಗಬೇಕಿತ್ತು… ಅಲ್ಲಿನ ದೃಶ್ಯ ನೋಡಿ…
ಅವನ ಕೈ ಹಿಡಿದಿದ್ದ ಅಪ್ಸರೆಯಂತಹ ಹುಡುಗಿ ಜಾಗದಲ್ಲಿ ಓರ್ವ ವಿಕಾರ ಹುಡುಗಿಯಿದ್ದಾಳೆ…ಭಯದಲ್ಲಿ ಕೈಬಿಟ್ಟವ ಹೌಹಾರಿದ್ದ. ಅತ್ಯಂತ ಭಯಾನಕ , ಭೀಭತ್ಸವಾಗಿದೆ ಅವಳ ದೇಹ , ಮೂಳೆ, ಮಾಂಸ ,ಕಣ್ಣುಗಳ ಗುಡ್ಡೆ , ತಲೆಯಿಂದ ಮೆದುಳು ಆಚೆ ಬಂದಿದೆ… ಬಟ್ಟೆಯಲ್ಲ ಹರಿದಿದೆ… ಮುಕ್ಕಾಲು ಕೂದಲು ಕಿತ್ತುಕೊಂಡು ತುಟಿ , ದವಡೆ ಒಡೆದುಹೋಗಿದೆ.. ರಕ್ತ ದೇಹದಿಂದ ತೊಟ್ಟಿಡುತ್ತಿದೆ… ಈ ದೃಶ್ಯ ನೋಡಿದವನ ಎದೆ ಕಂಪಿಸಿ ಜೋರಾಗಿ ಚೀರಾಡುತ್ತಾ ಅವಳ ಕೈ ಬಿಟ್ಟು ಓಡೋಡಿ ಹೋಗ್ತಿದ್ದಾನೆ… ಓಡಿ ಓಡಿ ಹೋಗ್ತಿದ್ದವನ ಮುಂದೆ ಪ್ರತ್ಯಕ್ಷವಾಗಿಬಿಟ್ಟ ಆ ಹುಡುಗಿ ಗಹಗಹಿಸಿ ನಗುತ್ತಿದ್ದಾಳೆ..
ಹ್…ಹ್ಮ್ಹ್ಮ್…!!! ಹೆಣ್ಣು ಅಂದ್ರೆ ಭೋಗದ ವಸ್ತು ಅಂದ್ ಕೊಂಡಿದ್ದಿರೇನೋ ನೀವುಗಳು ನಾಯಿಗಳ ಥೂ..!! ಬೇರೆ ಅವರ ಮನೆ ಹೆಣ್ಮಕ್ಕಳಂದ್ರೆ ಅಷ್ಟು ಸದರನಾ..??? ನಿಮಗೆ…. ಎಂದು ಅತಿ ಕರ್ಕಶವಾಗಿ ಅತಿ ಭಯಾನಕವಾಗಿ ನುಡಿದವಳ ಮಾತು ಇಡೀ ರೈಲ್ವೇ ನಿಲ್ದಾಣದಲ್ಲಿ ಪ್ರತಿನಿಧಿಸುತ್ತಿದೆ…
ಸಹಾಯ ಮಾಡೋ ನೆಪದಲ್ಲಿ ನನ್ನ ಮೇಲೆ ನಿನ್ನ ಕಾಮತೃಷೆ ತೀರಿಸಿಕೊಳ್ಳುವ ಹುನ್ನಾರ ರೂಪಿಸಿಕೊಂಡಿದ್ದೆ ಅಲ್ವಾ..???? ನಿನ್ನಂತವನಿಗೆ ಬದುಕೋಕೆ ಅರ್ಹತೆಯಿಲ್ಲ ಸಾಯಿ ಎಂದವಳ ಮಾತಿಗೆ ಬೆಚ್ಚಿ ಬಿದ್ದವ… ಕ್ಷಮಿಸಿಬಿಡು ನನ್ನ ತಪ್ಪಾಯ್ತು ಪ್ಲೀಸ್ ಎಂದವ ಎಷ್ಟೇ ಬೇಡಿಕೊಂಡರೂ ಗಹಗಹಿಸಿ ನಕ್ಕಳು ಬಿಟ್ಟರೆ ಕರುಣೆ ಉಕ್ಕಲಿಲ್ಲ.. ಇಷ್ಟು ವಿಕಾರ ರೂಪದಲ್ಲೂ ಅವಳ ದುಃಖ ಕಾಣಿಸುತ್ತಿದೆ…
ಬಿಡಲ್ಲಾ ನಾನು ನಿನ್ನಂತ ಯಾವ ಗಂಡಸರನ್ನೂ ಬಿಡಲ್ಲ ಎಂದವಳ ಮಾತು ಕೇಳಿ ಆತ ನಡುಗುತ್ತಾ ಕೈಮುಗಿಯುತ್ತಿದ್ದಾನೆ…
ಆಗಲೇ ಆಕಡೆಯಿಂದ ಟ್ರೈನ್ ಬರುತ್ತಿದೆ… ಗಹಗಹಿಸಿ ನಗುತ್ತಲೇ ಅವನ ಕತ್ತು ಹಿಡಿದು ಎಳೆದುಕೊಂಡು ರಾಕೆಟ್ ಸ್ಫೀಡಲ್ಲಿ ಹೋದವಳು ಟ್ರೈನ್ ಸ್ಟೇಷನ್ ತಲುಪುವ ಮೊದಲೇ ಆ ವ್ಯಕ್ತಿಯನ್ನ ಒಂದೇ ಕೈನಲ್ಲೇ ಹಿಡಿದು ಟ್ರೈನ್ ಮುಂದೆ ಬಿಸಾಡಿದ್ದಳು..
ಟ್ರೈನ್ ಸೀದಾ ಅವನಿಗೆ ಡಿಕ್ಕಿ ಹೊಡೆದು ಫ್ಲಾಟ್ ಫಾರ್ಮ್ ತಲುಪಿತ್ತು… ಅವಳ ಆತ್ಮ ಕಣ್ಮರೆಯಾಗಿತ್ತು…
@@@@@@@@@@@@@@@@@@@@@@
ಎರೆಡು ದಿನಗಳ ನಂತರ…!!!
ಅದೇ ರೈಲು ನಿಲ್ದಾಣದಲ್ಲಿ ಕುಳಿತಿದ್ದ ರಜತ್ ಬೆಂಗಳೂರಿನ ಹುಡುಗ… ಸಿಟಿಯಲ್ಲೇ ಹುಟ್ಟುಬೆಳೆದವ. ಐಟಿ ಕಂಪನಿಯಲ್ಲಿ ಟೆಕ್ಕಿ.. ಸ್ನೇಹಿತನ ಮದುವೆಗೆಂದು ಇತ್ತೀಚೆಗಷ್ಟೇ ಆತ ಉತ್ತರಪ್ರದೇಶಕ್ಕೆ ಬಂದಿದ್ದ…
24 ವರ್ಷದ ಸುಂದರ ತರುಣ ಆತ..
ಟ್ರೈನ್ ಜರ್ನಿ ಜೊತೆಗೆ ಅಡ್ವೆಂಚರ್ ಥ್ರಿಲ್ಲಿಂಗ್ ಇಷ್ಟಪಡ್ತಿದ್ದ ಹುಡುಗ… ಹೀಗಾಗಿ ಈ ನಡುರಾತ್ರಿಯಲ್ಲಿ ಟ್ರೈನ್ ಹತ್ತೋಕೆ ಬಂದಿದ್ದ.. ಆದ್ರೆ ಸ್ನೇಹಿತರ ಮಾತು ಮೀರಿ ಆತ ಜಖಾರ ರೈಲ್ವೇ ಸ್ಟೇಷನ್ ಬಂದಿದ್ದ.. ಫ್ರೆಂಡ್ಸ್ ಗೆ ಸುಳ್ ಹೇಳಿ ಬಂದಿದ್ದ… ನಾ ಬಸ್ಸಲ್ಲಿ ಹೋಗುವೆ ಎಂದು…
ರೈಲು ನಿಲ್ದಾಣದಲ್ಲಿ ಕುಳಿತಿರುವ ರಜತ್ ಗೆ ಈ ವಾತಾವರಣ ಸಖತ್ ಥ್ರಿಲ್ಲಿಂಗ್ ಎನಿಸುತ್ತಿದೆ… ಎಕ್ಸೈಟ್ ಮೆಂಟ್ ನಲ್ಲಿ ಆತ ಅಲ್ಲಿನ ಫೋಟೋ ವಿಡಿಯೋಗಳನ್ನ ಕ್ಲಿಕ್ ಮಾಡ್ತಿದ್ದಾನೆ…
ಟ್ರೈನ್ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿದ್ದ… ಆದ್ರೂ ಒಂದೇ ಒಂದು ಅಂಗಡಿ ತೆರೆದಿಲ್ಲ ಕತ್ತಲೆಯೇ ಕತ್ತಲೆ.. ಮೊಬೈಲ್ ಚಾರ್ಜ್ ಬೇರೆ ಇಲ್ಲ…
ಗೊಂದಲದಲ್ಲಿ ಅತ್ತಿತ್ತ ನೋಡಿದ ಕತ್ತಲೆ ಬಿಟ್ಟರೇನೂ ಕಾಣುತ್ತಿಲ್ಲ… ಸಮಯ 11 ಆಯ್ತು.. ಇಷ್ಟು ಹೊತ್ತು ಯಾರೊಬ್ಬರೂ ಜನರು ಅವನ ಕಣ್ಣಿಗೆ ಕಾಣಿಸಿರಲಿಲ್ಲ… ಆದ್ರೆ ಈಗ ಅವನಿಗೆ ದೂರದಲ್ಲಿ ಒಂದು ಹುಡುಗಿ ಕಾಣಿಸಿದ್ದಳು.. ಅಷ್ಟು ದೂರದಲ್ಲಿದ್ದರೂ ಅವಳ ಗೆಜ್ಜೆ ಸಪ್ಪಳ ಅವನಿಗೆ ಇಲ್ಲೇ ಪಕ್ಕದಲ್ಲೇ ಕೇಳಿಸುತ್ತಿರುವ ಹಾಗೆ..!!! ಮಂತ್ರಮುಗ್ಧನಾಗಿ ಅವಳನ್ನೇ ನೋಡುತ್ತಾ ಮೈಮರೆತು ನಿಂತುಬಿಟ್ಟಿದ್ದಾನೆ ರಜತ್..
ಅಪ್ಸರೆಯೇ ಇವಳು ಎಂದುಕೊಂಡ ಮನಸ್ಸಲ್ಲಿ ಅವಳ ಅಂದ ಹೊಗಳುತ್ತಿದ್ದಾನೆ… ಎರೆಡೂ ಕೈ ಎತ್ತಿ ಮುಗಿಬೇಕೆನಿಸುವಂತಹ ದೇವಿಯಂತೆ ಕಾಣಿಸುತ್ತಿದ್ದಾಳೆ… ಅದೇನ್ ಲಕ್ಷಣ ಈ ಹುಡುಗಿ ಮುಖದಲ್ಲಿ ಯಾರೀಕೆ ಎಂದುಕೊಂಡವ ಅವಳನ್ನೇ ನೋಡುತ್ತ ಅವಳೆಗೆ ಸಮ್ಮೋಹಿತನಾಗುತ್ತಿದ್ದಾನೆ…
ಬೊಂಬೆ ಅವಳು… ತಲೆತುಂಬ ಮಲ್ಲಿಗೆ , ಮಧುಮಗಳಂತೆ ಕೆಂಪು ಸೀರೆ ಮೈತುಂಬ ಒಡೆವೆ ಏರಿಸಿಕೊಂಡು ತಯಾರಾಗಿದ್ದವಳ ನೋಡಿ ಒಂದೆಡೆ ಅನುಮಾನ… ಇಷ್ಟು ಹೊತ್ತಲ್ಲಿ ಅದು ಹೀಗೆ ತಯಾರಾಗಿ ಒಂಟಿಯಾಗಿರುವ ಈ ಹುಡುಗಿ ಯಾರೆಂಬ ಕಾತರತೆ.. ಮೊದಲ ನೋಟದಲ್ಲೇ ಆಕೆಗೆ ಆತ ಮನಸೋಲುತ್ತಿದ್ದಾನೆ..
ಆಕೆ ಬಂದವನ ಎದುರು ನಿಂತವಳು ತೊದಲುತ್ತಾ ಹೆದರುತ್ತಾ ನಡುಗುತ್ತಾ ನುಡಿದಳು.
ನನಗೆ ಸಹಾಯ ಮಾಡಿ ಪ್ಲೀಸ್.. ನಾನು ಬೆಂಗಳೂರಿಗೆ ಹೋಗಬೇಕು… ನನ್ನ ಮದ್ವೆಯಾಗ್ತೀನಿ ಅಂತ ಒಬ್ಬ ಯಾಮಾರಿಸಿ ಇಲ್ಲಿ ನನ್ನ ಒಬ್ಬಂಟಿ ಮಾಡಿದ್ದಾನೆ.. ನನಗೆ ಯಾರೂ ಇಲ್ಲ. ನನ್ನ ವಸ್ತುಗಳೂ ಕಳ್ಳತನವಾಗಿದೆ.. ನನ್ನ ಸ್ನೇಹಿತೆ ಮನೆ ಇದೆ ಬೆಂಗಳೂರಲ್ಲಿ ಅಲ್ಲಿವರೆಗೂ ನನ್ನ ತಲುಪಿಸಿ ಎಂದವಳ ಮಾತು ಕೇಳಿ ಅವನಿಗೆ ಸಿಟ್ಟು ಉಕ್ಕರಿದಿತ್ತು…
ಯಾವನು ಅವನು ಸ್ಕೌಂಡ್ರಲ್ ನಿಮಗೆ ಮೋಸ ಮಾಡಿದವನು ಎಂದವನ ಮಾತಿಗೆ ಉತ್ತರಿಸಲಿಲ್ಲ ಹುಡುಗಿ.. ಮೌನವಾದಳು… ಅವಳವಸ್ಥೆ ನೋಡಿ ಮರುಗಿದವ ಮೊದಲು , ನೋಡಮ್ಮಾ ನಾನು ನಿನಗೆ ಸಹಾಯ ಮಾಡ್ತೇನೆ ಬಾ… ಅದಕ್ಕೂ ಮೊದಲು ನೀನೊಂದು ಕಡೆ ಕೂತ್ಕೋ ಬಾ ಎಂದವ ಅವಳ ಹಿಂದೆ ಹಿಂದೆ ನಡೆದ..
ಹೋಗಿ ಇಬ್ಬರೂ ಸೀಟ್ ಬಳಿ ಕುಳಿತರು.. ಅವಳ ಮೇಲೆ ಕಾಳಜಿ ತೋರುತ್ತಾ ನೋಡಿ ಮಿಸ್.. “ನಾನು ಸುಮನಾ”..!!! ಎಂದವಳ ಮಾತಿಗೆ ಸುಮನಾ ,, ನಾನು ಬೆಂಗಳೂರವನೇ.. ಹೆದರಬೇಡಿ…ಮೊದಲು ನೀವು ಏನಾದ್ರೂ ತಿಂದ್ರಾ..??? ಎಂದರೆ ಹೂ ತಿಂದೆ ಎಂದು ತಲೆಯಾಡಿಸಿದಳು ಹುಡುಗಿ…
ಸರಿ ಹಾಗಾದ್ರೆ ಹೆದರಬೇಡ ಬಾ ಇನ್ನೇನು ಟ್ರೈನ್ ಬರುತ್ತೆ… ಮೊದಲು ಇಬ್ಬರೂ ಟ್ರೈನ್ ಹತ್ತೋಣ… ಬೆಂಗಳೂರು ತಲುಪುವವರೆಗೂ ನಿನ್ನ ಕಥೆ ಹಂಚಿಕೊಳ್ಳೋಕೆ ಟೈಮ್ ಸಿಗುತ್ತದೆ… ನಾನು ಯಾವಾಗಲೂ ನಿನಗೆ ಸಹಾಯ ಮಾಡ್ತೇನೆ ಸರಿನಾ…!!! ಎಂದವನ ನೋಡಿ ದಂಗಾಗಿದ್ದಳು… ಅದ್ಯಾಕೋ ದಿನಗಳೇ ಉರುಳಿ ಹೋಗಿತ್ತೇನೋ ಪ್ರಾಮಾಣಿಕ ವ್ಯಕ್ತಿಯೊಬ್ಬನ ಭೇಟಿ ಮಾಡಿ ಎನಿಸಿತ್ತು…
ಇವನ ಮುಖದಲ್ಲಿ ಪ್ರಾಮಾಣಿಕತೆ ಕಾಣುತ್ತಿದೆ… ಅದಕ್ಕೆ ಅವಳು ಕೊಂಚ ಕೊಂಚ ಕರಗುತ್ತಿದ್ದಳು… ಹೀಗೆ ಕುಳಿತಿದ್ದಾಗಲೇ ಟ್ರೈನ್ ಬಂದುಬಿಟ್ಟಿತ್ತು… ಪಟಾಪಟ್ ಇಬ್ಬರೂ ಟ್ರೇನ್ ಹತ್ತಿದ್ದರು…
ಆಗಲೂ ಅವಳ ಮೈ ಕೈ ಮುಟ್ಟಲಿಲ್ಲ… ನಡು ರಾತ್ರಿ ಒಂಟಿ ಹೆಣ್ಣು ಸಿಕ್ಕರೂ ಕೆಟ್ಟ ದೃಷ್ಟಿಯಲ್ಲಿ ನೋಡದ ಅವನ ಮೇಲೆ ಅವಳಿಗೆ ಅದ್ಯಾಕೋ ಮನಸ್ಸಾಗಿತ್ತು.
ಇಬ್ಬರೂ ಹೋಗಿ ಸೀಟ್ ನಲ್ಲಿ ಕುಳಿತರು…ದೂರದಲ್ಲಿ ಒಬ್ಬೇ ಒಬ್ಬ ವ್ಯಕ್ತಿ ಕುಳಿತಿದ್ದಾನೆ ಬಿಟ್ರೆ ಇಡೀ ಕಂಪಾರ್ಟ್ಮೆಂಟ್ ಖಾಲಿ…
ರಜತ್ ” ಸಾರಿ ಬೈ ದ ವೇ ಐಮ್ ರಜತ್” ಎಂದು ತನ್ನ ಸಂಪೂರ್ಣ ಪರಿಚಯ ನೀಡಿದ್ದ… ಹಾಗೆಯೇ ಕೊಂಚ ತಮಾಷೆ ಮಾಡ್ತಿದ್ದಾನೆ ತನ್ನ ಪರಿವಾರದ ಬಗ್ಗೆ ಮಾತನಾಡ್ತಾ… ಮುಗುಳು ನಕ್ಕವಳ ನಗು ನೋಡಿ ಫುಲ್ ಖುಷ್ ಆದವ , ನೋಡು ನಕ್ಕರೆ ಎಷ್ಟ್ ಚಂದ ಕಾಣ್ತಿಯ ಹುಚ್ಚು ಹುಡುಗಿ ಎಂದವನ ಮಾತಿಗೆ ನಾಚಿ ಮೌನವಾದಳು..
ಸರಿ ಈಗ ಹೇಳು ಏನ್ ನಿನ್ ಕಥೆ ಎಂದಾಗ ಕಥೆ ಶುರು ಮಾಡಿದಳು ಸುಮನಾ..
( ಮೈಸೂರಿನ ಹುಡುಗಿ… ಉತ್ತರಪ್ರದೇಶದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಬಂದಿದ್ದ ಮಿಡಲ್ ಕ್ಲಾಸ್ ಪರಿವಾರದ ಹುಡುಗಿ… ಅಲ್ಲೊಬ್ಬ ಯುವಕನ ಜೊತೆಗೆ ಪರಿಚಯವಾಗಿತ್ತು… ಆತನ ಜೊತೆಗೆ ಪ್ರೇಮಾಂಕುರವೂ ಆಗಿತ್ತು… ಇಬ್ಬರ ಮನೆಯಲ್ಲಿ ವಿಷ್ಯ ಗೊತ್ತಾಗಿ ವಿರೋಧಿಸಿದಾಗ ಓಡಿ ಹೋಗಿ ಮದುವೆಯಾಗೋ ನಿರ್ಧಾರಕ್ಕೆ ಬಂದರು… ಸುಮನ ತಂದೆ ತಾಯಿ ಎಲ್ಲರನ್ನೂ ಬಿಟ್ಟು ಅವನ್ಯಾರಿಗೋಸ್ಕರವೋ ಬಂದು ಅಂದು ಇದೇ ರೈಲು ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾದಳು , ಅವಳಿಗೆ ಭಾಷೆ ನೀಡಿದ್ದ ಆತ ಬರಲೇ ಇಲ್ಲ… ಆದ್ರೆ ಕೊನೆಯಲ್ಲಿ ಒಂದ್ ಮೆಸೇಜ್ ಹಾಕಿದ್ದ ಸುಮನಾ ಐಮ್ ಸಾರಿ ನಮ್ಮ ಮನೆಯವರೇ ಮುಖ್ಯ ನನಗೆ ನಿನಲ್ಲ… ನಾನು ಅವರು ತೋರಿಸಿದವಳನ್ನ ಮದ್ವೆಯಾಗೋದು.. ನಿನ್ನ ಜೀವನ ನೋಡಿಕೋ ಅಂತ…
ಇಡೀ ಜೀವನ ಸರ್ವನಾಶವಾದಂತೆ ಭಾಸವಾಗಿತ್ತು ಅವಳಿಗೆ… ಬಿಕ್ಕಿ ಬಿಕ್ಕಿ ಅಳುತ್ತಾ ಅಲ್ಲೇ ಕುಳಿತಿದ್ದಳು…ಅವಳ ದುರಾದೃಷ್ಟಕ್ಕೆ ಪರ್ಸ್ ಮೊಬೈಲ್ ಎಲ್ಲವು ಕಳವಾಗಿಬಿಟ್ಟಿತ್ತು…
ಟಿಕೆಟ್ ಇಲ್ಲದೇ ಟ್ರೈನ್ ನಲ್ಲಿ ಪ್ರಯಾಣ ಬೆಳೆಸಿ ಮೊದಲು ಬೆಂಗಳೂರು ತಲುಪಿದ್ರೆ ಸಾಕೆಂ ಯೋಚನೆಗೆ ಬಂದವಳು ಅಲ್ಲಿಯೇ ಕಾಯುತ್ತಿದ್ದಳು.. ಅಂದು ಸ್ಟೇಷನ್ ಪೂರ ಖಾಲಿ… ಭಯದಲ್ಲಿ ಅವಳೆದೆ ಬಡಿತ ಜೋರಾಗಿತ್ತು..
ಆಗಲೇ ಅಲ್ಲಿಗೆ ಬಂದ ಮೂವರು ಯುವಕರು ಪಾನಮತ್ತೀಯರಾಗಿದ್ದರು… ಅವಳಿಗೆ ಸಹಾಯ ಮಾಡೋ ನೆಪದಲ್ಲಿ ಅವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರು… ವಿರೋಧಿಸುತ್ತಾ ಕಿರುಚುತ್ತಿದ್ದವಳನ್ನ ಭಯದಲ್ಲಿ ಮುಂದೆ ಬರುತ್ತಿದ್ದ ಟ್ರೈನ್ ಮುಂದೆ ತಳ್ಳಿಬಿಟ್ಟರು… ಅಂದು ನನ್ನ ಕನಸು , ನಂಬಿಕೆ ಜೊತೆಗೆ ನನ್ನ ಜೀವನವೂ ಮುಗಿದುಹೋಯ್ತು)
ಹೀಗೆ ಹೇಳಿದವಳ ಮಾತು ಕೇಳಿ ಬೆಚ್ಚಿ ಬಿದ್ದಿದ್ದ ರಜತ್..
ವಾ..??? ವಾಟ್..??? ಟ್ರೈನ್ ಮುಂದೆ ತಳ್ಳಿಬಿಟ್ಟರೆಂದ್ರೆ ಏನ್ ಏನ್ ಹೇಳ್ತಿದ್ಯಾ ಎಂದವನ ಮಾತಿಗೆ ಉತ್ತರಿಸಲಿಲ್ಲ ಹುಡುಗಿ… ಅವನಿಗೆ ಒಂದೆಡೆ ಅವಳ ಕಥೆ ಕೇಳಿ ಮರುಕ ಹುಟ್ಟಿದೆ… ಮತ್ತೊಂದೆಡೆ ಜೀವ ಬಾಯಿಗೆ ಬಂದಿದೆ.. ನಡುಗುತ್ತಿದ್ದವನ ನೋಡಿ ನಗುತ್ತಾ ನುಡಿದಳು ಅವಳು, ಹೆದರಬೇಡ ರಜತ್ ನಿನ್ನ ಗೆಸ್ ಸರಿ ಇದೆ.. ನಾನು ಸತ್ತು ವರ್ಷ ಕಳೆದಿದೆ… ಈ ರೈಲು ನಿಲ್ದಾಣಕ್ಕೆ ಬಂದವರನ್ನೆಲ್ಲಾ ಕೊಂದೆ ಆದ್ರೆ ಅವರಲ್ಲಿ ಕಪಟ , ಕಾಮುಕತೆ ಇತ್ತು.. ಆದ್ರೆ ನಿನ್ನ ನೋಡಿದ ಮೇಲೆ ನೀ ಸಿಕ್ಕಮೇಲೆ ಮತ್ತೆ ಮನುಷ್ತ್ವದ ಮೇಲೆ ನಂಬಿಕೆ ಬಂತು… ಎಲ್ಲಾ ಗಂಡಸರು ಕೆಟ್ಟವರಲ್ಲ ಸತ್ಯ ಅರ್ಥವಾಯ್ತು..
ನನಗೊಂದ್ ಸಹಾಯ ಮಾಡ್ತ್ಯ ರಜತ್ ಎಂದರೆ ಭಯ ನಿಯಂತ್ರಿಸಿಕೊಳ್ಳುತ್ತಾ ಏನು.?? ಎಂದವನಿಗೆ
ನನಗೆ ಇಲ್ಲಿ ತಾಳಿ ಕಟ್ಟುತ್ತೀಯ… ನನ್ನ ಕೊನೆ ಆಸೆ ಅದಾಗಿತ್ತು ಈಡೇರದೇ ಅಂತರ್ ಪಿಶಾಚಿ ಆದೆ.. ನನಗೆ ಮೋಸ ಮಾಡಿದ ಆ ಹುಡುಗ ಮಾರನೇ ದಿನ ಬಂದಾಗ ಅವನ ಕೊಂದೆ, ನನ್ನ ಸಾವಿಗೆ ಕಾರಣರಾದವರನ್ನ ನನ್ನ ದೇಹದಿಂದ ಆತ್ಮ ಬೇರಾದ ಮರುಕ್ಷಣವೇ ಕೊಂದೆ ಆದ್ರೂ ಅಂತರ್ ಪಿಶಾಚಿಯಾಗಿ ಅಲೆದಾಡುತ್ತಿರುವೆ… ನಿನ್ನಂತ ಒಳ್ಳೆಯ ಹುಡುಗ ಇಷ್ಟು ದಿನ ಸಿಕ್ಕಿರಲಿಲ್ಲ… ಈಗ ನೀನು ನನಗೆ ತಾಳಿಕಟ್ಟು ಐ ಪ್ರಾಮೀಸ್ ನಿನಗೆ ತೊಂದರೆ ಕೊಡಲ್ಲ ನನ್ನಾತ್ಮಕ್ಕೆ ಮುಕ್ತಿ ಸಿಗುತ್ತೆ ಎಂದವಳ ಮಾತು ಕೇಳಿ ಏನೂ ಮಾತನಾಡದ ಪರಿಸ್ಥಿತಿ ಅವನದ್ದು… ಆದ್ರೂ ಅವಳ ಆಸೆಯಂತೆ ಕಣ್ತುಂಬಿಕೊಂಡೇ ತನ್ನ ಕೊರಳಲ್ಲಿದ್ದ ಚೇನ್ ತೆಗೆದು ಅವಳ ಕುತ್ತಿಗೆಗೆ ಹಾಕಿ ನೀನೀಗ ನನ್ನ ಪತ್ನಿ … ಜೀವನ ಪೂರ್ತಿ ನೀನೇ ನನ್ನ ಮೊದಲ ಪತ್ನಿ ಎಂದವನ ಮಾತಿಗೆ ಅವಳ ಆತ್ಮವೂ ಭಾವುಕವಾಗಿತ್ತು… ಅದನ್ನ ನೋಡಿ ಅವನೆದೆಗೆ ಚೂರಿ ಚುಚ್ಚಿದಂತೆ ಆಗುತ್ತಿದೆ…
ಅವಳು ಅಳುತ್ತಲೇ ಬಾಯ್ ರಜತ್,,, ಇನ್ನು ಈ ರೈಲುನಿಲ್ದಾಣ ನನ್ನ ಶಾಪದಿಂದ ಮುಕ್ತ ಎಂದವಳು ಅವನ ಪಕ್ಕದಿಂದ ಇದ್ದಕ್ಕಿದ್ದಂತೆ ಮಾಯವಾಗಿಬಿಟ್ಟಳು..
ಅಳುತ್ತಾ ಅತ್ತಿತ್ತ ಹುಡುಕಾಡಿದವ ಕಿಟಕಿಯಾಚೆ ನೋಡಿದಾಗ ಅತಿ ಭಯಾನಕ ವಿಕೃತ ರೂಪದಲ್ಲಿ ಕಾಣಿಸಿದಳು ಅವಳು… ಮಗುಳು ನಗುತ್ತಾ ಬಾಯ್ ಮಾಡುತ್ತಲೇ ಮಾಯವಾದಳು ಗಾಳಿಯಂತೆ.
ಅವನ ಕಣ್ಣೀರು ನೆಲ ಸೋಕುತ್ತಿದೆ…ಅವಳ ಕಥೆಯಿಂದ , ಅವಳು ಆತ್ಮವೆಂಬ ಸತ್ಯ ಅರಗಿಸಿಕೊಳ್ಳಲು ತುಂಬಾ ಸಮಯ ಬೇಕಾಗಬಹುದು ಅವನಿಗೆ.. ಇಡೀ ಜೀವನ ಸಾಕಾಗದೇ ಇರಬಹುದು..
2 ವರ್ಷಗಳ ನಂತರ ಮನೆಯವರ ಬಲವಂತಕ್ಕೆ ಮಣಿದು ಮತ್ತೊಂದು ಮದುವೆಯಾಗಿದ್ದ.. ಗಂಡು ಮಗ ಇದ್ದ…
ತಾನೇ ಬಿಡಿಸಿದ್ದ ಸುಮನಾ ಪೆನ್ಸಿಲ್ ಆರ್ಟ್ ನ ದೊಡ್ಡ ಫೋಟೋ ಫ್ರೇಮ್ ಮುಂದೆ ಕುಳಿತಿದ್ದಾನೆ.. ಫ್ರೇಮ್ ಮೇಲೆ ದಿ. ಸುಮನಾ ರಜತ್ ಎಂದು ಹೆಸರಿದೆ.. ಭಾವುಕನಾಗಿ ಕುಳಿತಿದ್ದಾನೆ ಫೋಟೋ ನೋಡ್ತಾ ಮಗನೊಂದಿಗೆ..
– ನಿಹಾರಿಕಾ ರಾವ್ ‘ನಮ್ಮು’
Author Special : A horror story of author’s imagination..!! ‘Railway Mohini’