ಕಡಬ : ಕಡಬದಲ್ಲಿ ಆಟೋಚಾಲಕ ಕುಶಾಲಪ್ಪ ಗೌಡ ಎಂಬುವವರು ಶಂಕಿತ ಹೆಚ್1ಎನ್1 ಜ್ವರದಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಂಗಳೂರಿನಲ್ಲಿ ಖಾಸಗಿ ಬಸ್ ಚಾಲಕರಾಗಿದ್ದ ಇವರು ಕೆಲವು ಸಮಯಗಳಿಂದ ಕಡಬದಲ್ಲಿ ಆಟೋ ಚಾಲಕನಾಗಿಯೂ ದುಡಿಯುತ್ತಿದ್ದರು. 20 ದಿನಗಳಿಂದ ಜ್ವರ ಪೀಡಿತರಾಗಿದ್ದ ಅವರು ಮೊದಲು ಕಡಬದಲ್ಲಿ ನಂತರ ಕಾಣಿಯೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಜ್ವರ ಕಡಿಮೆಯಾಗದ ಕಾರಣ ವಾರದ ಹಿಂದೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ತೆರಳಿ ಬಳಿಕ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದ್ರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕುಶಾಲಪ್ಪ ಅವರು ಸಾವಿಗೀಡಾಗಿದ್ದಾರೆ.
ಕುಶಾಲಪ್ಪ ಗೌಡ ಅವರು ಶಂಕಿತ ಎಚ್1ಎನ್1 ಜ್ವರದಿಂದಾಗಿ ಮೃತಪಟ್ಟಿದ್ದಾರೆಂಬ ಸುದ್ದಿ ಗ್ರಾಮದೆಲ್ಲೆಡೆ ಹಬ್ಬಿದ್ದು, ಈ ಬಗ್ಗೆ ಖಾಸಗಿ ಆಸ್ಪತ್ರೆಯವರೂ ದೃಡೀಕರಿಸಿದ್ದಾರೆ ಎನ್ನಲಾಗಿದೆ. ಆದರೆ ಜಿಲ್ಲಾ ವೈದ್ಯಾಧಿಕಾರಿ ಡಾ| ಸಿಕಂದರ್ ಪಾಷಾ ಮಾಧ್ಯಮಕ್ಕೆ ಮಾಹಿತಿ ನೀಡಿ ಪ್ರಾಥಮಿಕ ವರದಿ ಪ್ರಕಾರ ಕುಶಾಲಪ್ಪ ಗೌಡ ನ್ಯುಮೋನಿಯಾದಿಂದ ಮೃತಪಟ್ಟಿರುವುದಾಗಿಯೂ, ನ್ಯುಮೋನಿಯಾದಲ್ಲಿಯೂ ಎಚ್1ಎನ್1 ಜ್ವರದ ರೀತಿಯ ಗುಣಲಕ್ಷಣಗಳು ಕಂಡು ಬರುವುದರಿಂದಾಗಿ ಗೊಂದಲ ಉಂಟಾಗಿದೆ. ಪರಿಸರದ ಜನರು ಭಯಪಡಬೇಕಾಗಿಲ್ಲ ಎಂದಿದ್ದಾರೆ.








