ಹೊಸದಿಲ್ಲಿ, ಮೇ 16: ಭಾರತೀಯ ಸಾಫ್ಟ್‌ವೇರ್ ಸೇವಾ ಪೂರೈಕೆದಾರ ವಿಪ್ರೊ ಲಿಮಿಟೆಡ್‌ನ ಸಂಸ್ಥಾಪಕ ಅಜೀಮ್ ಪ್ರೇಮ್ ಜಿ, ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ವಿಧಿಸಲಾದ ರಾಷ್ಟ್ರವ್ಯಾಪಿ ಲಾಕ್ ಡೌನ್ ವಿಶೇಷವಾಗಿ ಆರ್ಥಿಕವಾಗಿ ದುರ್ಬಲರಾದ ಜನರ ಮೇಲೆ ಕಠಿಣ ಪರಿಣಾಮ ಬೀರಿದೆ ಮತ್ತು ಅವರನ್ನು ಮತ್ತಷ್ಟು ಪ್ರತಿಕೂಲ ಪರಿಸ್ಥಿತಿಯಿಂದ ರಕ್ಷಿಸಬೇಕು ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅಜೀಂ ಪ್ರೇಮ್ ಜಿ ಸರ್ಕಾರಕ್ಕೆ ಕೆಲವು ಮಹತ್ವದ ಸಲಹೆಗಳನ್ನು ನೀಡಿದ್ದಾರೆ.
- ಉಚಿತ ಪಡಿತರ ವ್ಯವಸ್ಥೆಯನ್ನು ಮೂರು ತಿಂಗಳಿಂದ ಆರು ತಿಂಗಳಿಗೆ ವಿಸ್ತರಣೆ ಮಾಡಬೇಕು.
- ಬಡವರು, ನಿರ್ಗತಿಕರು ಮತ್ತು ಕೂಲಿ ಕಾರ್ಮಿಕರ ಮನೆ ಬಾಗಿಲಿಗೆ ಆಹಾರ ಧಾನ್ಯಗಳನ್ನು ತಲುಪಿಸುವ ವ್ಯವಸ್ಥೆ ಮಾಡಬೇಕು.
- ವಲಸೆ ಕಾರ್ಮಿಕರು ಹಾಗೂ ಬಡವರಿಗೆ ಮೂರು ತಿಂಗಳ ವರೆಗೆ 7000 ರೂಪಾಯಿಗಳ ತುರ್ತು ಪರಿಹಾರವನ್ನು ನೀಡಬೇಕು
- ತಮ್ಮ ಊರುಗಳಿಗೆ ವಾಪಸಾಗಲು ಬಯಸುವ ವಲಸೆ ಕಾರ್ಮಿಕರನ್ನು ಉಚಿತವಾಗಿ ಬಸ್ ಅಥವಾ ರೈಲುಗಳ ಮೂಲಕ ಕಳುಹಿಸುವ ಪ್ರಯತ್ನ ಮಾಡಬೇಕು.
ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಸರಕಾರದ ಜೊತೆ ಕೈಜೋಡಿಸಿರುವ ವಿಪ್ರೋ ಸಂಸ್ಥೆಯ ಸಂಸ್ಥಾಪಕರಾದ ಅಜೀಂ ಪ್ರೇಮ್ ಜಿ ಕೊರೊನಾ ಪರಿಹಾರ ನಿಧಿಗೆ 1000 ಕೋಟಿ ರೂಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಅಲ್ಲದೆ ವಿಪ್ರೋ ಮತ್ತು ವಿಪ್ರೋ ಎಂಟರ್ ಪ್ರೈಸಸ್ ಜಂಟಿಯಾಗಿ 1125 ಕೋಟಿಗಳನ್ನು ದೇಣಿಗೆ ನೀಡಿದೆ.








