B C Nagesh | ದೇಶದಲ್ಲಿ ಬದಲಾವಣೆ ತರಬೇಕೆಂದರೆ ಶಿಕ್ಷಣದಿಂದ ಮಾತ್ರ ಸಾಧ್ಯ
ಬೆಂಗಳೂರು : ದೇಶದಲ್ಲಿ ಬದಲಾವಣೆ ತರಬೇಕೆಂದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಬಿಜೆಪಿ ನೇತೃತ್ವದಲ್ಲಿ ಶಿಕ್ಷಣ ಕ್ಷೇತ್ರ ಸಾಕಷ್ಟು ಕೊಡುಗೆಗಳನ್ನು ಕಂಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಗೋವಿಂದರಾಜನಗರ ಕ್ಷೇತ್ರದ ಬಿಜಿಎಸ್ ಮೂದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಇಂಥ ವಿಶೇಷ ಕಾರ್ಯಕ್ರಮಗಳ ಆಯೋಜನೆಯ ಮೂಲಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಹುರಿದುಂಬಿಸುತ್ತಿರುವ ಶ್ರೀ ವಿ.ಸೋಮಣ್ಣ ಪ್ರತಿಷ್ಠಾನಕ್ಕೆ ನಮನಗಳು. ಗೋವಿಂದರಾಜನಗರ ಕ್ಷೇತ್ರದಲ್ಲಿ ನೂತನ ಶಾಲೆಗಳು ಹಾಗೂ ಶಾಲೆಗಳ ನವೀಕರಣ ಮಾಡುವುದರ ಮೂಲಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಬಗ್ಗೆ ಸೋಮಣ್ಣ ಅವರಿಗಿರುವ ಅಪಾರ ಕಾಳಜಿ ಅರ್ಥವಾಗುತ್ತದೆ. ಈ ಮೂಲಕ ಕ್ಷೇತ್ರದ ಮಧ್ಯಮ ವರ್ಗದ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಸೋಮಣ್ಣ ಅವರು ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಮಾಜಿ ಪ್ರಧಾನಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ, ಸರ್ವ ಶಿಕ್ಷಣ ಅಭಿಯಾನದ ಮೂಲಕ ದೇಶ ಕಟ್ಟ ಕಡೆಯ ಮಗುವಿಗೂ ಉತ್ತಮ ಶಿಕ್ಷಣ ಲಭ್ಯವಾಗಬೇಕೆಂಬ ಯೋಜನೆ ದೇಶಾದ್ಯಂತ ಜಾರಿಯಾಯಿತು. ಅಲ್ಲದೇ ವಿದ್ಯಾರ್ಥಿನಿಯರ ಹಿತ ದೃಷ್ಟಿಯಿಂದ ದೇಶದ ಪ್ರತಿ ಶಾಲೆಯಲ್ಲಿಯೂ ಶೌಚಾಲಯ ನಿರ್ಮಾಣ ಮಾಡಲಾಯಿತು. ಹೀಗೆ, ದೇಶದಲ್ಲಿ ಬದಲಾವಣೆ ತರಬೇಕೆಂದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಬಿಜೆಪಿ ನೇತೃತ್ವದಲ್ಲಿ ಶಿಕ್ಷಣ ಕ್ಷೇತ್ರ ಸಾಕಷ್ಟು ಕೊಡುಗೆಗಳನ್ನು ಕಂಡಿದೆ.

ಗೋವಿಂದರಾಜನಗರ ಕ್ಷೇತ್ರಕ್ಕೆ ಸೋಮಣ್ಣ ಅವರು ಕೋಟ್ಯಂತರ ರೂ.ಅನುದಾನ ತರುವ ಮೂಲಕ ಎಲ್ಲ ರೀತಿಯ ಮೂಲಸೌಕರ್ಯಗಳಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ನಿರ್ಮಿಸಿದ್ದಾರೆ. ತಮ್ಮ ಸ್ವಂತ ದುಡ್ಡಿನಲ್ಲಿ ಇಂಥ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಿದ್ದಾರೆ. ಹೀಗಾಗಿ ಶಿಕ್ಷಣ ಇಲಾಖೆಯ ಪರವಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಈ ಪ್ರತಿಷ್ಠಾನದ ಮೂಲಕ ಮತ್ತಷ್ಟು ಉತ್ತಮ ಕಾರ್ಯಗಳು ನಡೆಯಲಿ ಎಂದು ಹಾರೈಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಸೋಮಣ್ಣ, ಡಾ.ನವೀನ್ ಸೋಮಣ್ಣ, ಡಾ.ಅರುಣ್ ಸೋಮಣ್ಣ ಹಾಗೂ ಶ್ರೀಮತಿ ದಿವ್ಯ ಅವಿನಾಶ್, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮತ್ತು ಬಿಬಿಎಂಪಿ ಮಾಜಿ ಸದಸ್ಯರು ಉಪಸ್ಥಿತರಿದ್ದರು.








