ಧಾರವಾಡ : ಭೂಸುಧಾರಣೆ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಧಾರವಾಡದಲ್ಲಿ ಜೆಡಿಎಸ್ ಪ್ರತಿಭಟನೆ ನಡೆಸಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಹೊರಟ್ಟಿ, ಬಿಜೆಪಿ ಸರ್ಕಾರದಲ್ಲಿ ತಾಳ ಇಲ್ಲ, ತಂತಿಯೂ ಇಲ್ಲ. ವಲಸಿಗರು ಮತ್ತು ಮೂಲರ ಮಧ್ಯೆ ಇದ್ದಾರೆ. ಹಿಂದೆ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಇತ್ತು. ಬಿಜೆಪಿ-ಜೆಡಿಎಸ್ ಸರ್ಕಾರವೂ ರಚನೆ ಆಗಿತ್ತು. ಆದರೆ ಈಗ ಇರುವುದು ಮೂರು ಪಕ್ಷದ ಸರ್ಕಾರ ಎಂದು ಲೇವಡಿ ಮಾಡಿದರು.
ಇದೇ ವೇಳೆ ಬಿ.ಸಿ. ಪಾಟೀಲ್ ನಮ್ಮೂರಿನ ಹೋರಿ ಎಂದ ಅವರು, ಸರ್ಕಾರದಲ್ಲಿ ಎಷ್ಟು ಬೇಕು ಅಷ್ಟು ಮೇಯ್ಲಿ ಎಂದು ನಾ ಮೊನ್ನೆ ಮಾತನಾಡಿದಾಗ ಹೇಳಿದ್ದೀನಿ. ನಮ್ಮೂರ ಹೋರಿ ಎಲ್ಲಿ ಎಷ್ಟು ಮೇಯ್ದರೇನು, ಮತ್ತೇ ನಮ್ಮ ಮನೆಗೆ ಬರಬೇಕು. ನಮ್ಮವರಿಗೆಲ್ಲ ದಬಾಯಿಸಿ ತಿನ್ನಿ ಅಂತ ಹೇಳಿದ್ದೇವೆ. ಮೂರು ಪಕ್ಷದ ಸಮ್ಮಿಶ್ರ ಸರ್ಕಾರ ಇದು. ಸದ್ಯ ನಾವಂತೂ ವಿರೋಧ ಪಕ್ಷದಲ್ಲಿದ್ದೇವೆ. ಭೂ ಸುಧಾರಣೆ ಕಾಯ್ದೆ ಸೇರಿ ಪ್ರಮುಖ ಬೇಡಿಕೆಗಳಿವೆ. ಇವೆಲ್ಲವನ್ನೂ ಸರಿಮಾಡಬೇಕು. ಇಲ್ಲದೇ ಹೋದಲ್ಲಿ ಬರುವ ಅಧಿವೇಶನದಲ್ಲಿ ಸರ್ಕಾರಕ್ಕೆ ಇದೆ ಮಾರಿ ಹಬ್ಬ ಎಂದು ಎಚ್ಚರಿಕೆ ನೀಡಿದರು.