ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಮರಿ ಮಂಗ ಸಾವನ್ನಪ್ಪಿದ್ದು, ಸ್ಥಳದಲ್ಲಿ ತಾಯಿ ಮಂಗ ಆಕ್ರಂದನ ವ್ಯಕ್ತಪಡಿಸಿರುವ ಮನ ಮಿಡಿಯುವ ಘಟನೆಯೊಂದು ನಡೆದಿದೆ.
ಸ್ಥಳೀಯ ವಾಹನ ಸವಾರರು ದೊಡ್ಡ ಮಂಗನ ರಕ್ಷಣೆ ಮಾಡಿ, ಮರಿ ಮಗನ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಕ್ರಾಸ್ ಹೊರ ವಲಯದಲ್ಲಿ ಈ ಘಟನೆ ನಡೆದಿದೆ. ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಮಂಗಕ್ಕೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಮರಿ ಕೋತಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ.
ಮರಿ ಕೋತಿ ಒದ್ದಾಡಿ ಜೀವ ಬಿಟ್ಟಿದ್ದರೆ ತಾಯಿ ಕೋತಿ ರಸ್ತೆಯಿಂದ ಒಂದು ಅಡಿಯ ದೂರದಲ್ಲಿ ಹೋಗಿ ಬಿದ್ದಿತ್ತು. ಇದನ್ನು ನೋಡಿದ ಸ್ಥಳೀಯ ಯುವಕರು, ತಾಯಿ ಕೋತಿಯನ್ನ ರಕ್ಷಿಸಿದ್ದಾರೆ. ತನ್ನ ಕರುಳು ಬಳ್ಳಿ ರಸ್ತೆಯಲ್ಲಿ ಸತ್ತು ಬಿದ್ದಿದ್ದನ್ನ ಕಂಡ ತಾಯಿ ಕೋತಿ ಆಕ್ರಂದನ ಮುಗಿಲು ಮುಟ್ಟಿದ್ದು ಎಲ್ಲರ ಕರುಳು ಹಿಂಡುವಂತಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಒಟ್ಟಾರೆ ವಾಹನ ಸವಾರರು ರಸ್ತೆಯಲ್ಲಿ ತಮಗೆ ತಿಳಿದಂತೆ ಸಂಚರಿಸದೆ ಅತ್ತ ಇತ್ತ ಬರುವ ಪ್ರಾಣಿಗಳ ಕಡೆ ಕೂಡ ಗಮನ ಹರಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.