ಪಾಕ್ ಪರ ಘೋಷಣೆ ಕೂಗಿದ್ದ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಜಾಮೀನು – ವಕೀಲರ ಸಂಘದ ಆಕ್ರೋಶ

ಹುಬ್ಬಳ್ಳಿ, ಜೂನ್ 11: ಪಾಕ್ ಪರ ಘೋಷಣೆ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕಾಶ್ಮೀರಿ ವಿದ್ಯಾರ್ಥಿಗಳಿಗೆ ಜಾಮೀನು ಮಂಜೂರಾಗಿದೆ. ಹುಬ್ಬಳ್ಳಿಯ ಜೆಎಂಎಫ್ ಸಿ 2 ನೇ ನ್ಯಾಯಾಲಯ ಜಾಮೀನಿನ ಮೇಲೆ ಆರೋಪಿಗಳನ್ನು ಬಿಡುಗಡೆ ಮಾಡಿದ್ದು ಇದಕ್ಕೆ ವಕೀಲರ ಸಂಘದ ಅಧ್ಯಕ್ಷ ಅಶೋಕ್ ಅಣವೇಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ನಿರ್ಲಕ್ಷ್ಯ ಹಾಗೂ ಸೋಮಾರಿತನದಿಂದ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ ಎಂದು ಯುವ ವಕೀಲರ ಸಂಘದ ಅಧ್ಯಕ್ಷ ಅಶೋಕ ಅಣವೇಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಹುಬ್ಬಳ್ಳಿ ಗ್ರಾಮೀಣ ಪೊಲೀಸರು ನಿಗದಿತ ಸಮಯದಲ್ಲಿ ಚಾರ್ಜ್ ಶೀಟ್ ಸಲ್ಲಿಸದೇ ಇರುವುದರಿಂದ ಮಾನ್ಯ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. 90 ದಿನದಲ್ಲಿ ಗ್ರಾಮೀಣ ಪೊಲೀಸರು ಚಾರ್ಜ್ ಶೀಟ್ ದಾಖಲಿಸಬೇಕಿತ್ತು ಆದರೆ 109 ದಿನಗಳ ನಂತರ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದರಿಂದಾಗಿ ಆರೋಪಿಗಳು ಜಾಮೀನಿನ ಮೇಲೆ ಹೊರಬರುವಂತಾಯಿತು ಎಂದು ಆರೋಪಿಸಿದ ಅವರು ಪೊಲೀಸರ ನಿರ್ಲಕ್ಷ್ಯತನ, ಸೋಮಾರಿತನವೇ ದೇಶದ್ರೋಹಿಗಳು ಬಿಡುಗಡೆಯಾಗಲು ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.








