ಕೊರೊನಾ ನಿಯಂತ್ರಣದಲ್ಲಿ ಬೆಂಗಳೂರು ನ್ಯೂಜಿಲೆಂಡ್ ಗಿಂತ ಬೆಸ್ಟ್ ???
ಬೆಂಗಳೂರು, ಜೂನ್ 10: ಕೊರೊನಾದ ಹಾವಳಿಗೆ ವಿಶ್ವದ ಬಲಿಷ್ಟ ರಾಷ್ಟ್ರಗಳೇ ಕಂಗೆಟ್ಟಿ ಕುಳಿತಿವೆ. ದೇಶದಲ್ಲಿ ರಾಕೆಟ್ ನಂತೆ ವೇಗವಾಗಿ ಏರುತ್ತಿರುವ ಕೊರೊನಾ ಸೋಂಕು ಪ್ರಕರಣಗಳನ್ನು ನಿಯಂತ್ರಿಸಲಾಗದೆ ಭಾರತವೂ ಸೇರಿದಂತೆ ಅನೇಕ ದೇಶಗಳು ಅಸಹಾಯಕ ಸ್ಥಿತಿ ತಲುಪಿದೆ. ಆದರೆ ಇಲ್ಲೊಂದು ಪುಟ್ಟ ರಾಷ್ಟ್ರ ನ್ಯೂಜಿಲೆಂಡ್ ಕೊರೊನಾ ಸವಾಲನ್ನು ಗೆದ್ದು ಜಯಭೇರಿಯ ನಗುವನ್ನು ಬೀರಿದೆ.
ಕೊರೋನಾ ನಿಯಂತ್ರಣದಲ್ಲಿ ಕೇವಲ 50 ಲಕ್ಷ ಜನಸಂಖ್ಯೆ ಹೊಂದಿರುವ ನ್ಯೂಜಿಲೆಂಡ್ ಗಿಂತ ನಮ್ಮ ಬೆಂಗಳೂರು ಬೆಸ್ಟ್ ಎಂದು ಟ್ವೀಟ್ ಮಾಡಿದ್ದಾರೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್. ಅಷ್ಟೇ ಅಲ್ಲ ಕೆಲವು ಅಂಕಿ ಅಂಶಗಳನ್ನು ನೀಡುವುದರ ಮೂಲಕ ಕೊರೊನಾದ ಸವಾಲನ್ನು ಬೆಂಗಳೂರು ಹೇಗೆ ನ್ಯೂಜಿಲೆಂಡ್ ಗಿಂತಲೂ ಉತ್ತಮವಾಗಿ ನಿಭಾಯಿಸಿದೆ ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ.
ಹೇಗೆ ಬೆಂಗಳೂರು ಮಾದರಿ ನ್ಯೂಜಿಲೆಂಡ್ ಗಿಂತ ಹೆಚ್ಚು ಪರಿಣಾಮಕಾರಿ:
ನ್ಯೂಜಿಲೆಂಡ್
ಒಟ್ಟು ಜನಸಂಖ್ಯೆ-50 ಲಕ್ಷ
2,68,000 ಚದರ ಕಿ.ಮೀ ವಿಸ್ತೀರ್ಣ
18 ಜನ ಸಾಂದ್ರತೆ -1 ಚದರ ಕಿ.ಮೀ
ಕೊರೊನಾ ಪ್ರಕರಣಗಳು-1,150
ಕೊರೊನಾ ಸೋಂಕಿತರ ಸಾವು- 22
ಬೆಂಗಳೂರು
ಒಟ್ಟು ಜನಸಂಖ್ಯೆ-1.25 ಕೋಟಿ
700 ಚದರ ಕಿ.ಮೀ. ವಿಸ್ತೀರ್ಣ
1,17,000 ಜನ ಸಾಂದ್ರತೆ -1 ಚದರ ಕಿ.ಮೀ
ಕೊರೊನಾ ಪ್ರಕರಣಗಳು-450
ಕೊರೊನಾ ಸೋಂಕಿತರ ಸಾವು-13
ನ್ಯೂಜಿಲೆಂಡ್ ಬೆಂಗಳೂರಿನ ಅರ್ಧದಷ್ಟೂ ಜನಸಂಖ್ಯೆ ಹೊಂದಿಲ್ಲ. ಅಷ್ಟೇ ಅಲ್ಲ ನ್ಯೂಜಿಲ್ಯಾಂಡ್ ಜಿಡಿಪಿ ಬೆಂಗಳೂರು ಜಿಡಿಪಿಗಿಂತ 20% ಚಿಕ್ಕದಿದ್ದು ಅಲ್ಲಿ ಬಡತನ ಎನ್ನುವುದು ಇಲ್ಲ ಎನ್ನಬಹುದು. ಆದರೂ ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಪತ್ತೆಯಾದ ಕೊರೊನಾ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯನ್ನು ನ್ಯೂಜಿಲೆಂಡ್ ನೊಡನೆ ಹೋಲಿಸಿದಾಗ ಕೊರೊನಾ ನಿಯಂತ್ರಣದಲ್ಲಿ ಸಿಲಿಕಾನ್ ಸಿಟಿ ಉತ್ತಮ ಎನ್ನುವುದು ಸಚಿವ ಸುಧಾಕರ್ ಅಭಿಪ್ರಾಯ.